'ಅವರು ಶೌಚಾಲಯದಲ್ಲಿದ್ದಾರೆ, ಸ್ವಲ್ಪ ಟೈಂ ಕೊಡಿ': ಉದಯನಿಧಿ ಸ್ಟಾಲಿನ್ ಪತ್ನಿ-ಪೊಲೀಸರ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್!

ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದ ತಮಿಳು ಚಿತ್ರರಂಗದ ನಿರ್ದೇಶಕಿ ಮತ್ತು ಬರಹಗಾರ್ತಿಯಾದ ಕೃತಿಕಾ ಉದಯನಿಧಿ, ತಮ್ಮ ಪತಿ ಇನ್ನೂ ಸಿದ್ಧವಾಗುತ್ತಿದ್ದಾರೆ ಎಂದು ತಿಳಿಸಿದರು.
Udhayanidhi Stalin's wife Kiruthiga's exchange with cop
ಪೊಲೀಸರೊಂದಿಗೆ ಉದಯನಿಧಿ ಸ್ಟಾಲಿನ್ ಪತ್ನಿ ಮಾತಿನ ಚಕಮಕಿ
Updated on

ಸೋಮವಾರ ತಂಜಾವೂರಿನಲ್ಲಿ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಡಿಎಂಕೆ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ನಟಿ ತ್ರಿಶಾ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇರೆಗೆ ಮಂಗಳವಾರ ಪೊಲೀಸರು ವಶಕ್ಕೆ ಪಡೆಯುವ ಕೆಲವೇ ಕ್ಷಣಗಳ ಮೊದಲು, ಡಿಎಂಕೆ ನಾಯಕನ ಚೆನ್ನೈ ನಿವಾಸದ ಒಳಗೆ ನಡೆದ ಹೈಡ್ರಾಮದ ವಿಡಿಯೋ ಇದೀಗ ವೈರಲ್ ಆಗಿದೆ.

'ಅವರು ಶೌಚಾಲಯದಲ್ಲಿದ್ದಾರೆ. ದಯವಿಟ್ಟು ಸ್ವಲ್ಪ ಸಮಯ ನೀಡಿ' ಎಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರ ಪತ್ನಿ ಕೃತಿಕಾ ಉದಯನಿಧಿ ಅವರು ಪೊಲೀಸ್ ಅಧಿಕಾರಿಗಳಿಗೆ ಹೇಳುತ್ತಿರುವುದು ಕೇಳಿಸುತ್ತದೆ.

ಉದಯನಿಧಿ ಅವರನ್ನು ವಶಕ್ಕೆ ಪಡೆಯುವ ಮುನ್ನ ಅವರ ಮನೆಯಲ್ಲಿ ಪೊಲೀಸರು ಕಾಯುತ್ತಿದ್ದಾಗ ಕೃತಿಕಾ, ಡಿಎಂಕೆ ಹಿರಿಯ ನಾಯಕ ಮಾ. ಸುಬ್ರಮಣಿಯನ್ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ನಡೆದ ಸಂಕ್ಷಿಪ್ತ ಸಂಭಾಷಣೆ ಸೆರೆಯಾಗಿದೆ.

'ನಾವು ಬಹಳ ಹೊತ್ತಿನಿಂದ ಕಾಯುತ್ತಿದ್ದೇವೆ. ನಾನಿಲ್ಲಿ ಯಾವುದೇ ಕಾನೂನುಬಾಹಿರ ಕೆಲಸ ಮಾಡುತ್ತಿಲ್ಲ. ತಮ್ಮ ತಂಡವು ಕೇವಲ ಕರ್ತವ್ಯವನ್ನು ನಿರ್ವಹಿಸುತ್ತಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರಿಗಳಿಗೆ ಪ್ರತಿಕ್ರಿಯಿಸಿದ ತಮಿಳು ಚಿತ್ರರಂಗದ ನಿರ್ದೇಶಕಿ ಮತ್ತು ಬರಹಗಾರ್ತಿಯಾದ ಕೃತಿಕಾ ಉದಯನಿಧಿ, ತಮ್ಮ ಪತಿ ಇನ್ನೂ ಸಿದ್ಧವಾಗುತ್ತಿದ್ದಾರೆ ಎಂದು ತಿಳಿಸಿದರು. 'ಅವರು ಶೌಚಾಲಯದಲ್ಲಿದ್ದಾರೆ. ದಯವಿಟ್ಟು ಸ್ವಲ್ಪ ಸಮಯ ನೀಡಿ' ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

Udhayanidhi Stalin's wife Kiruthiga's exchange with cop
'ಅವರು 'ವಲ್ಗರ್-ನಿಧಿ', 'ಉದಯನಿಧಿ' ಅಲ್ಲ': DMK ನಾಯಕನ ಬಂಧನದ ಬಳಿಕ ಟಿವಿಕೆ ನಾಯಕ ಅಮೆರಿಕೈ ನಾರಾಯಣನ್!

ನಿವಾಸದಲ್ಲಿದ್ದ ತಮಿಳುನಾಡು ಮಾಜಿ ಸಚಿವ ಮಾ. ಸುಬ್ರಮಣಿಯನ್ ಕೂಡ ಅಧಿಕಾರಿಗಳಲ್ಲಿ ಹೆಚ್ಚಿನ ಸಮಯ ನೀಡುವಂತೆ ಮನವಿ ಮಾಡಿದರು; ಅವರನ್ನು ವಶಕ್ಕೆ ಪಡೆಯುವುದನ್ನು ಕೆಲ ನಿಮಿಷಗಳ ಕಾಲ ಮುಂದೂಡುವುದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ ಎಂದು ಅವರು ವಾದಿಸಿದರು.

'ಬೆಳಗ್ಗೆ 9.30, 10.30 ಅಥವಾ 11 ಗಂಟೆಗೆ ಅವರನ್ನು (ಉದಯನಿಧಿ ಸ್ಟಾಲಿನ್) ಕರೆದೊಯ್ದರೂ ಸಾರ್ವಜನಿಕರಿಂದ ಒಂದಿಷ್ಟು ಪ್ರತಿಕ್ರಿಯೆ (ಆಕ್ರೋಶ) ವ್ಯಕ್ತವಾಗಿಯೇ ಆಗುತ್ತದೆ. ಸಮಯ ಕಳೆದಂತೆ ಅಲ್ಲಿ ಜನಸಂದಣಿ ಹೆಚ್ಚಾಗುತ್ತದೆ' ಎಂದು ಸುಬ್ರಮಣಿಯನ್ ಹೇಳಿದರು.

'ನಾವು ಇನ್ನು ಹೆಚ್ಚು ಕಾಲ ಕಾಯಲು ಸಾಧ್ಯವಿಲ್ಲ. ಎಷ್ಟು ಹೊತ್ತು ಕಾಯುವುದು? ಅವರು '10 ನಿಮಿಷ, 10 ನಿಮಿಷ' ಎಂದು ಹೇಳುತ್ತಲೇ ಇದ್ದಾರೆ. ಇದು ನಮ್ಮ ಕರ್ತವ್ಯ. ನಾವು ಕಾನೂನನ್ನು ಉಲ್ಲಂಘಿಸುವುದಿಲ್ಲ. ನಾವು ಕಾನೂನು ಉಲ್ಲಂಘಿಸುತ್ತಿದ್ದೇವೆ ಎಂದು ನೀವು ತೋರಿಸಿಕೊಟ್ಟರೆ, ನಾನು ಅದನ್ನು ಒಪ್ಪಿಕೊಳ್ಳುತ್ತೇನೆ. ಹಾಗೇನೂ ಇಲ್ಲದಿರುವಾಗ, ನಮ್ಮ ಕೆಲಸವನ್ನು ಮಾಡಲು ನೀವು ನಮಗೆ ಅವಕಾಶ ನೀಡಬೇಕು' ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಆಗ ಸುಬ್ರಮಣಿಯಂ ಅವರು ಸ್ವಲ್ಪ ವಿಳಂಬಕ್ಕಾಗಿ ಒತ್ತಾಯಿಸುತ್ತಾ, 'ಅವರು ಸ್ನಾನಗೃಹದಿಂದ ಹೊರಗೆ ಬರಲಿ. ದಯವಿಟ್ಟು 10 ನಿಮಿಷ ಕಾಯಿರಿ. ಅಷ್ಟರಲ್ಲಿ ವಕೀಲ ಸರವಣನ್ ಕೂಡ ಇಲ್ಲಿಗೆ ಬರುತ್ತಾರೆ' ಎಂದು ಹೇಳಿದರು.

ಉದಯನಿಧಿ ಅವರನ್ನು ಸುಮಾರು ಎಂಟು ಗಂಟೆಗಳ ಪ್ರಯಾಣ ಮಾಡಬೇಕಿರುವ ತಂಜಾವೂರಿಗೆ ಕರೆದೊಯ್ಯಲಾಗುತ್ತಿದ್ದು, ಹೊರಡುವ ಮುನ್ನ ಅವರು ತಮ್ಮ ದಿನನಿತ್ಯದ ಬೆಳಗಿನ ಚಟುವಟಿಕೆಗಳನ್ನು ಪೂರೈಸಲು ಅವಕಾಶ ನೀಡಬೇಕು ಎಂದು ಸುಬ್ರಮಣಿಯಂ ಮತ್ತಷ್ಟು ವಾದಿಸುತ್ತಾರೆ. ಅದಕ್ಕೆ ಆ ಅಧಿಕಾರಿ, 'ನಾನು ಕಾನೂನನ್ನು ಉಲ್ಲಂಘಿಸುತ್ತಿದ್ದೇನೆಯೇ?' ಎಂದು ಮರುಪ್ರಶ್ನಿಸುತ್ತಾರೆ.

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಆಗಸ್ಟ್ 3 ರಂದು ತಮಿಳುನಾಡಿನ ತಂಜಾವೂರಿನಲ್ಲಿ ಡಿಎಂಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ವಿಜಯ್ ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ತಮಿಳುನಾಡಿಗೆ ಕಾವೇರಿ ನದಿಯ ಒಂದು ಹನಿ ನೀರೂ ಸಿಕ್ಕಿಲ್ಲ ಎಂದು ಆರೋಪಿಸಿದರು.

ಸಭೆಯಲ್ಲಿದ್ದ ಕಾರ್ಯಕರ್ತರು 'ತ್ರಿಶಾ, ತ್ರಿಶಾ' ಎಂದು ಘೋಷಣೆ ಕೂಗಿದಾಗ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ ಉದಯನಿಧಿ, ಮುಖದಲ್ಲಿ ಲೇವಡಿಯ ನಗೆಯೊಂದಿಗೆ ದ್ವಂದ್ವಾರ್ಥದ ಹಾಗೂ ಆಕ್ಷೇಪಾರ್ಹವಾದ ಪ್ರತಿಕ್ರಿಯೆ ನೀಡಿದರು; ಅವರ ಈ ಹೇಳಿಕೆಯು ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.

ತಮಿಳುನಾಡು ಪೊಲೀಸರು ಉದಯನಿಧಿ ವಿರುದ್ಧ 'ಭಾರತೀಯ ನ್ಯಾಯ ಸಂಹಿತೆ'ಯ (BNS) ವಿವಿಧ ನಿಬಂಧನೆಗಳ ಅಡಿಯಲ್ಲಿ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಇದರಲ್ಲಿ ಮಹಿಳೆಯೊಬ್ಬರ ಘನತೆಗೆ ಧಕ್ಕೆ ತರುವುದು, ಶಾಂತಿಭಂಗವನ್ನು ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಕ್ರಿಮಿನಲ್ ಪಿತೂರಿ ನಡೆಸಿದ ಆರೋಪಗಳು ಸೇರಿವೆ.

ಅಲ್ಲದೆ, 'ತಮಿಳುನಾಡು ಮಹಿಳೆಯರ ಕಿರುಕುಳ ತಡೆ ಕಾಯ್ದೆ, 2002'ರ ಸೆಕ್ಷನ್ 4 ಹಾಗೂ ಅಶ್ಲೀಲ ವಿಷಯವನ್ನು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ರವಾನಿಸಿದ ಆರೋಪದ ಮೇರೆಗೆ 'ಮಾಹಿತಿ ತಂತ್ರಜ್ಞಾನ ಕಾಯ್ದೆ'ಯ ಸೆಕ್ಷನ್ 67ರ ಅಡಿಯಲ್ಲೂ ಎಫ್‌ಐಆರ್ ದಾಖಲಿಸಲಾಗಿದೆ.

ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ನೇತೃತ್ವದ ಆಡಳಿತಾರೂಢ 'ತಮಿಳಿಗ ವೆಟ್ರಿ ಕಳಗಂ' (TVK) ಪಕ್ಷವು, ಡಿಎಂಕೆ (DMK) ನಾಯಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗವನ್ನು (NCW) ಸಂಪರ್ಕಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com