ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

ತಂಜಾವೂರಿನಲ್ಲಿ ನಡೆದ ರೈತರ ಪ್ರತಿಭಟನಾ ಸಭೆಯಲ್ಲಿ ಅವರು ನೀಡಿದ್ದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಅದರ ಬೆನ್ನಲ್ಲೇ ಇಂದು ಉದಯನಿಧಿ ಸ್ಟಾಲಿನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Udhayanidhi Stalin
ಉದಯನಿಧಿ ಸ್ಟಾಲಿನ್
Updated on

ಚೆನ್ನೈ: ಖ್ಯಾತ ನಟಿ ತ್ರಿಶಾ ಕುರಿತು ವಿವಾದಾತ್ಮಕ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಮಂಗಳವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾವೇರಿ ವಿಚಾರವಾಗಿ ತಂಜಾವೂರಿನಲ್ಲಿ ನಡೆದ ರೈತರ ಪ್ರತಿಭಟನಾ ಸಭೆಯಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಚೆನ್ನೈನ ನೀಲಾಂಕರೈ ನಿವಾಸದಿಂದ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉದಯನಿಧಿ ಸ್ಟಾಲಿನ್ ವಿರುದ್ಧ ಇದುವರೆಗೆ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರು ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಪೊಲೀಸರ ಮಾಹಿತಿ ನೀಡಿದ್ದಾರೆ.

ತಮಿಳಗ ವೆಟ್ರಿ ಕಳಗಂ (TVK) ಮಹಿಳಾ ಘಟಕದ ಸಂಘಟಕಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಉದಯನಿಧಿ ಅವರ ಭಾಷಣದಲ್ಲಿ ಮಹಿಳೆಯರಿಗೆ ಅವಮಾನವಾಗುವ ಹಾಗೂ ಅಸಭ್ಯ ಅರ್ಥ ಬರುವ ಹೇಳಿಕೆಗಳಿವೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಘಟನೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಉದಯನಿಧಿ ನಿವಾಸದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ಪೊಲೀಸರು ಮನೆಗೆ ಆಗಮಿಸಿದ ವೇಳೆ ಡಿಎಂಕೆ (DMK) ಹಿರಿಯ ನಾಯಕರು ದುರೈಮುರುಗನ್, ಇ.ವಿ. ವೇಲು, ಶೇಖರ್ ಬಾಬು, ಎಂ.ಎ. ಸುಬ್ರಮಣಿಯನ್ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಅಳಿಯ ವಿ. ಸಬರೀಶನ್ ಉಪಸ್ಥಿತರಿದ್ದರು.

Udhayanidhi Stalin
ನಟಿ ತ್ರಿಶಾ ಕುರಿತು ಡಬಲ್ ಮೀನಿಂಗ್ ಹೇಳಿಕೆ; ಉದಯನಿಧಿ ಸ್ಟಾಲಿನ್ ವಿರುದ್ಧ ಮಹಿಳಾ ಆಯೋಗ, ಪೊಲೀಸರಿಗೆ TVK ದೂರು!

ವಿಚಾರಣೆಗೆ ಕರೆದೊಯ್ಯುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, "ಇದು ಸರ್ಕಾರದ ಕಾಮಿಡಿ" ಎಂದು ವ್ಯಂಗ್ಯವಾಡಿದರು.

ರೈತರು ಎತ್ತಿರುವ ಗಂಭೀರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಸರ್ಕಾರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ತಾವು ರೈತರ ಸಮಸ್ಯೆಗಳು, ಕಾವೇರಿ ನೀರಿನ ವಿವಾದ ಸೇರಿದಂತೆ ಹಲವು ಜನಪರ ವಿಚಾರಗಳನ್ನು ಮಾತ್ರ ಪ್ರಸ್ತಾಪಿಸಿದ್ದಾಗಿ ಅವರು ಹೇಳಿದರು.

ಈ ನಡುವೆ ಉದಯನಿಧಿ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (TVK) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಈ ನಡುವೆ ಡಿಎಂಕೆ ಪಕ್ಷವು ಉದಯನಿಧಿಗೆ ಕಾನೂನು ರಕ್ಷಣೆ ನೀಡುವಂತೆ ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ತಂಜಾವೂರಿನ ರೈತರ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್ ಅವರು, ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಟೀಕಿಸುತ್ತಿದ್ದರು.

ಇದೇ ವೇಳೆ ಜನಸಮೂಹದಲ್ಲಿದ್ದ ವ್ಯಕ್ತಿಯೊಬ್ಬರು ತಮಿಳು ನಟಿಯೊಬ್ಬರ ಹೆಸರನ್ನು ಪ್ರಸ್ತಾಪಿಸಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ದ್ವಂದ್ವಾರ್ಥದಲ್ಲಿ ಹೇಳಿಕೆ ನೀಡಿದ್ದರು.

ಈ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿವೆ.

Udhayanidhi Stalin
Crass, cheap and derogatory': ನಟಿ ತ್ರಿಶಾಗೆ ಅಸಭ್ಯ, ಕೀಳುಮಟ್ಟದಲ್ಲಿ ಅಪಮಾನ, ಉದಯನಿಧಿ ಸ್ಟಾಲಿನ್ ಕ್ಷಮೆಯಾಚನೆಗೆ ಖುಷ್ಬೂ ಸುಂದರ್ ಒತ್ತಾಯ!

ಟಿವಿಕೆ ಬೆಂಬಲಿಗರು ಹಾಗೂ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು, ಪ್ರತಿಪಕ್ಷ ನಾಯಕರ ಸ್ಥಾನದಲ್ಲಿರುವ ವ್ಯಕ್ತಿ ಇಂತಹ ಹೇಳಿಕೆ ನೀಡುವುದು ಅತ್ಯಂತ ಅಸಭ್ಯ ಹಾಗೂ ಜವಾಬ್ದಾರಿಯಿಲ್ಲದ ವರ್ತನೆ ಎಂದು ಟೀಕಿಸಿದ್ದಾರೆ.ಅಲ್ಲದೆ, ಕಾವೇರಿ ನೀರಿನಂತಹ ಮಹತ್ವದ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಇದಾಗಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.

ಈ ನಡುವೆ ಬಿಜೆಪಿಯೂ ಉದಯನಿಧಿ ವಿರುದ್ಧ ಕಿಡಿಕಾರಿದೆ. ಪಕ್ಷದ ಮುಖ್ಯ ವಕ್ತಾರ ನಾರಾಯಣನ್ ತಿರುಪತಿ ಅವರು ಮಾತನಾಡಿ, "ಈ ಹೇಳಿಕೆ ಅಸಹ್ಯಕರ, ಅಶ್ಲೀಲ, ಅಸಭ್ಯ ಮತ್ತು ನಾಚಿಕೆಗೇಡಿನದ್ದು. ಇಂತಹ ಹೇಳಿಕೆ ನೀಡಿದವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ದ್ರಾವಿಡ ಮಾದರಿ ಎಂದು ಹೇಳಿಕೊಳ್ಳುವವರ ಈ ರೀತಿಯ ವರ್ತನೆಯನ್ನು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮೌನವಾಗಿ ನೋಡುತ್ತಿರುವುದು ನಾಚಿಕೆಗೇಡಿನ ಸಂಗತಿ," ಎಂದು ಟೀಕಿಸಿದ್ದಾರೆ.

ಆದರೆ, ಡಿಎಂಕೆ ನಾಯಕ ಹಾಗೂ ಲೋಕಸಭಾ ಸದಸ್ಯ ಟಿ.ಆರ್. ಬಾಲು, ಉದಯನಿಧಿ ಯಾವುದೇ ಮಹಿಳೆಯನ್ನು ಗುರಿಯಾಗಿಸಿಕೊಂಡು ಮಾತನಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸುಳ್ಳು ಮತ್ತು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ್ದಾರೆ.

ಇದರ ನಡುವೆಯೇ ಟಿವಿಕೆ ರಾಷ್ಟ್ರೀಯ ವಕ್ತಾರ ಪಳಾ ಸೆಲ್ವಕುಮಾರ್ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (NCW) ದೂರು ಸಲ್ಲಿಸಿದ್ದು, ಉದಯನಿಧಿ ಅವರ ಭಾಷಣ ಮಹಿಳೆಯರನ್ನು ಕೀಳಾಗಿ ಕಾಣುವಂತಿದ್ದು, ಮಾತಿನ ಮೂಲಕ ಕಿರುಕುಳವನ್ನು ಸಾಮಾನ್ಯೀಕರಿಸುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.

ಉದಯನಿಧಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾಗಿರುವ ಪ್ರಕರಣಗಳ ತನಿಖೆ ಮುಂದುವರಿದಿದ್ದು, ಅವರ ವಿಚಾರಣೆ ಬಳಿಕ ಪೊಲೀಸರು ಮುಂದಿನ ಕಾನೂನು ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಪ್ರಕರಣ ತಮಿಳುನಾಡಿನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಆಡಳಿತಾರೂಢ ಟಿವಿಕೆ ಮತ್ತು ಡಿಎಂಕೆ ನಡುವಿನ ವಾಕ್ಸಮರ ಇನ್ನಷ್ಟು ತೀವ್ರಗೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com