

ನವದೆಹಲಿ: ಭಾರತದಲ್ಲಿ ಜೀವಂತ ಅಂಗದಾನಿಗಳಲ್ಲಿ ಸ್ಪಷ್ಟವಾದ ಲಿಂಗ ಅಸಮಾನತೆ ಕಂಡುಬಂದಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025ರಲ್ಲಿ ಬದುಕಿರುವಾಗಲೇ ಅಂಗದಾನಿಗಳಲ್ಲಿ 68 ಶೇಕಡಾ ಮಹಿಳೆಯರಾಗಿದ್ದರೆ, ಅಂಗ ಸ್ವೀಕರಿಸಿದವರಲ್ಲಿ 78 ಶೇಕಡಾ ಪುರುಷರು ಆಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯದ ಅಧೀನದಲ್ಲಿರುವ ರಾಷ್ಟ್ರೀಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (NOTTO)ಯ ವಾರ್ಷಿಕ ವರದಿ ಪ್ರಕಾರ, 2025ರಲ್ಲಿ ಜೀವಂತ ದಾನಿಗಳಿಂದ ಅಂಗ ಪಡೆದವರಲ್ಲಿ ಕೇವಲ 22 ಶೇಕಡಾ ಮಹಿಳೆಯರು ಮಾತ್ರ ಇದ್ದರು.
ಭಾರತದಲ್ಲಿ ಮೂತ್ರಪಿಂಡ (ಕಿಡ್ನಿ) ಮತ್ತು ಯಕೃತ್ತು (ಲಿವರ್) ಕಸಿ ಅತ್ಯಂತ ಸಾಮಾನ್ಯವಾಗಿದ್ದು, ಅನೇಕ ಮಹಿಳೆಯರು ತಮ್ಮ ಕುಟುಂಬದ ಪುರುಷ ಸಂಬಂಧಿಕರಿಗೆ ಈ ಅಂಗಗಳನ್ನು ದಾನ ಮಾಡುತ್ತಿದ್ದಾರೆ. 2025ರ ಅಂಕಿಅಂಶಗಳ ಪ್ರಕಾರ, ಒಬ್ಬ ಮಹಿಳೆ ತನ್ನ ಕುಟುಂಬದ ಪುರುಷ ಸದಸ್ಯನಿಗೆ ಸಣ್ಣ ಕರುಳಿನ (Small Bowel) ಅಂಗವನ್ನೂ ದಾನ ಮಾಡಿದ್ದಾರೆ.
2025ರಲ್ಲಿ ಒಟ್ಟು 11,316 ಮಹಿಳೆಯರು (68 ಶೇಕಡಾ) ಜೀವಂತ ಅಂಗದಾನಿಗಳಾಗಿ ಅಂಗಗಳನ್ನು ದಾನ ಮಾಡಿದ್ದು, ಪುರುಷ ದಾನಿಗಳ ಸಂಖ್ಯೆ 5,298 (32 ಶೇಕಡಾ) ಆಗಿತ್ತು. ಆದರೆ ಅಂಗ ಸ್ವೀಕರಿಸಿದವರಲ್ಲಿ 12,903 ಪುರುಷರು (78 ಶೇಕಡಾ) ಇದ್ದರೆ, ಮಹಿಳೆಯರ ಸಂಖ್ಯೆ 3,707 (22 ಶೇಕಡಾ) ಮಾತ್ರವಾಗಿತ್ತು.
ಮೂತ್ರಪಿಂಡ ದಾನಿಗಳಲ್ಲಿಯೂ ಇದೇ ಪ್ರವೃತ್ತಿ ಕಂಡುಬಂದಿದೆ. ಜೀವಂತ ಕಿಡ್ನಿ ದಾನಿಗಳಲ್ಲಿ 8,835 (71 ಶೇ) ಮಹಿಳೆಯರು ಇದ್ದರೆ, 3,656 (29 ಶೇಕಡಾ) ಪುರುಷರು ಮಾತ್ರ ದಾನ ಮಾಡಿದ್ದಾರೆ. ಆದರೆ ಕಿಡ್ನಿ ಕಸಿ ಪಡೆದವರಲ್ಲಿ 9,656 (77 ಶೇ) ಪುರುಷರು ಇದ್ದರೆ, 2,835 (23 ಶೇ) ಮಹಿಳೆಯರು ಮಾತ್ರ ಇದ್ದರು.
ಯಕೃತ್ತಿನ ಕಸಿ ವಿಚಾರದಲ್ಲೂ ಜೀವಂತ ದಾನಿಗಳಲ್ಲಿ 2,480 (60%) ಮಹಿಳೆಯರು ಹಾಗೂ 1,642 (40%) ಪುರುಷರು ಇದ್ದರು. ಆದರೆ ಯಕೃತ್ತು ಕಸಿ ಪಡೆದವರಲ್ಲಿ 3,248 (79%) ಪುರುಷರು ಮತ್ತು 871 (21%) ಮಹಿಳೆಯರು ಮಾತ್ರ ಇದ್ದರು.
2025ರಲ್ಲಿ ಭಾರತದಲ್ಲಿ ನಡೆದ ಒಟ್ಟು ಅಂಗ ಕಸಿಗಳಲ್ಲಿ 62.03% ಮೂತ್ರಪಿಂಡ ಕಸಿಗಳು ಆಗಿದ್ದರೆ, 20.46% ಯಕೃತ್ತು ಕಸಿಗಳು ಆಗಿವೆ. ಇದೇ ವರ್ಷ ದೇಶದಲ್ಲಿ 20,138 ಅಂಗ ಕಸಿಗಳು ನಡೆದಿದ್ದು, ಇದು ಒಂದೇ ವರ್ಷದಲ್ಲಿ ದಾಖಲಾಗಿರುವ ಅತಿ ಹೆಚ್ಚಿನ ಸಂಖ್ಯೆಯಾಗಿದೆ. 2013ರಲ್ಲಿ ನಡೆದ 4,990 ಕಸಿಗಳಿಗಿಂತ ಇದು ನಾಲ್ಕು ಪಟ್ಟು ಹೆಚ್ಚು ಹಾಗೂ 2024ರ 18,911 ಕಸಿಗಳಿಗಿಂತ 6.5% ಹೆಚ್ಚಳವಾಗಿದೆ.
ಮೃತ ದಾನಿಗಳಿಂದ ನಡೆದ ಅಂಗ ಕಸಿಗಳ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಿದೆ. 2013ರ 837ರಿಂದ 2025ರಲ್ಲಿ 3,526ಕ್ಕೆ ಏರಿಕೆಯಾಗಿದ್ದು, ಇದು ನಾಲ್ಕು ಪಟ್ಟು ಹೆಚ್ಚಳವಾಗಿದೆ. 2025ರಲ್ಲಿ ಮೃತ ದಾನಿಗಳಿಂದ 1,986 ಮೂತ್ರಪಿಂಡ ಕಸಿಗಳು ನಡೆದಿದ್ದು, 2024ರಲ್ಲಿ ಈ ಸಂಖ್ಯೆ 1,918, 2023ರಲ್ಲಿ 1,635 ಹಾಗೂ 2022ರಲ್ಲಿ 1,541 ಆಗಿತ್ತು.
ಜೀವಂತ ದಾನಿಗಳಿಂದ ನಡೆದ ಮೂತ್ರಪಿಂಡ ಕಸಿಗಳ ಸಂಖ್ಯೆ 2025ರಲ್ಲಿ 12,491 ಆಗಿದ್ದು, 2024ರಲ್ಲಿ ಇದು 11,558 ಆಗಿತ್ತು. 2023ರಲ್ಲಿ 11,791 ಹಾಗೂ 2022ರಲ್ಲಿ 10,164 ಕಸಿಗಳು ನಡೆದಿದ್ದವು.
2025ರಲ್ಲಿ ಒಟ್ಟು 5,154 ಯಕೃತ್ತು ಕಸಿಗಳು ನಡೆದಿದ್ದು, 2024ರಲ್ಲಿ ಇದು 4,901 ಆಗಿತ್ತು. 2023ರಲ್ಲಿ 4,491 ಹಾಗೂ 2022ರಲ್ಲಿ 3,920 ಯಕೃತ್ತು ಕಸಿಗಳು ದಾಖಲಾಗಿದ್ದವು.
ಆದರೆ ಕಿಡ್ನಿ-ಪ್ಯಾಂಕ್ರಿಯಾಸ್ ಕಸಿ ಸಂಖ್ಯೆ 2025ರಲ್ಲಿ 26ಕ್ಕೆ ಇಳಿಕೆಯಾಗಿದ್ದು, 2024ರಲ್ಲಿ 37, 2023ರಲ್ಲಿ 23 ಹಾಗೂ 2022ರಲ್ಲಿ 22 ಕಸಿಗಳು ನಡೆದಿದ್ದವು.
ಇನ್ನೊಂದೆಡೆ, ಸಣ್ಣ ಕರುಳಿನ (Small Bowel) ಕಸಿ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 2025ರಲ್ಲಿ 23 ಕಸಿಗಳು ನಡೆದಿವೆ. ಇದು 2024ರ 9, 2023ರ 16 ಹಾಗೂ 2022ರ 3 ಕಸಿಗಳಿಗಿಂತ ಹೆಚ್ಚಾಗಿದೆ.
2023ರಲ್ಲಿ ರಾಷ್ಟ್ರೀಯ ಡಿಜಿಟಲ್ ಅಂಗದಾನ ಪ್ರತಿಜ್ಞೆ (National Digital Pledge) ಪೋರ್ಟಲ್ ಆರಂಭವಾದ ಬಳಿಕ, ಭಾರತದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಆಧಾರ್ ದೃಢೀಕರಣದೊಂದಿಗೆ ಅಂಗದಾನದ ಪ್ರತಿಜ್ಞೆ ಮಾಡಿದ್ದಾರೆ. ಒಬ್ಬ ಮೃತ ಅಂಗದಾನಿ ಗರಿಷ್ಠ ಎಂಟು ಜನರ ಜೀವ ಉಳಿಸಬಹುದು ಎಂದು ವರದಿ ತಿಳಿಸಿದೆ.