

ನವದೆಹಲಿ: ಪೆಟ್ರೋಲ್ ಬಳಿಕ ಡೀಸೆಲ್ ಮತ್ತು ಏವಿಯೇಷನ್ ಟರ್ಬೈನ್ ಇಂಧನದಲ್ಲಿ (ATF) ಎಥೆನಾಲ್ ಮಿಶ್ರಣ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗುರುವಾರ ಆರೋಪಿಸಿದ್ದಾರೆ; ಅಲ್ಲದೆ, ಮುಂದಿನ ಕೆಲವು ವರ್ಷಗಳವರೆಗೆ ಹೊಸ ವಾಹನಗಳನ್ನು ಖರೀದಿಸದಂತೆ ಜನರಿಗೆ ಕರೆ ನೀಡಿದ್ದಾರೆ.
'ಎಕ್ಸ್'ನಲ್ಲಿ ಹಿಂದಿ ಭಾಷೆಯಲ್ಲಿ ಮಾಡಿರುವ ಪೋಸ್ಟ್‌ನಲ್ಲಿ, ಶೇ 20ರಷ್ಟು ಎಥೆನಾಲ್ ಮಿಶ್ರಿತ ಇಂಧನವನ್ನು ಪರಿಚಯಿಸಿದ ನಂತರ ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
'ಅವರು ಪೆಟ್ರೋಲ್‌ನಲ್ಲಿ ಶೇ 50ಕ್ಕಿಂತ ಹೆಚ್ಚು ಪ್ರಮಾಣದ ಕಲಬೆರಕೆ ಮಾಡಲು ಹೊರಟಿದ್ದಾರೆ ಎಂದು ತೋರುತ್ತಿದೆ. ಸದ್ಯದ ಪರಿಸ್ಥಿತಿ ತಿಳಿಯಾಗಲೆಂದು ಅವರು ಕಾಯುತ್ತಿದ್ದಾರೆ. ಮೊದಲಿಗೆ, E0 ಮತ್ತು E10 ವಾಹನಗಳಲ್ಲಿ E20 ಪೆಟ್ರೋಲ್ ಬಳಸುವಂತೆ ಒತ್ತಾಯಿಸಿ ಅವುಗಳನ್ನು ಹಾಳುಮಾಡಿದರು. ಇಂದು ನೀವು ಹೊಸ E20 ವಾಹನವನ್ನು ಖರೀದಿಸಿದರೆ, ಕೆಲವೇ ದಿನಗಳಲ್ಲಿ ಸರ್ಕಾರವು ಅದರಲ್ಲಿ E50 ಪೆಟ್ರೋಲ್ ಬಳಸುವಂತೆ ಒತ್ತಾಯಿಸಿ ಅದನ್ನೂ ಹಾಳುಮಾಡುತ್ತದೆ' ಎಂದು ಕೇಜ್ರಿವಾಲ್ ಹೇಳಿದರು.
ಸರ್ಕಾರ ಶೀಘ್ರದಲ್ಲೇ ಡೀಸೆಲ್‌ನಲ್ಲೂ ಎಥೆನಾಲ್ ಅನ್ನು ಬೆರೆಸಲಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಸದ್ಯಕ್ಕೆ ಹೊಸ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಖರೀದಿಸುವುದನ್ನು ತಪ್ಪಿಸುವಂತೆ ಜನರಿಗೆ ಕರೆ ನೀಡಿದರು.
ಮತ್ತೊಂದು ಪೋಸ್ಟ್‌ನಲ್ಲಿ, ಮೋದಿ ಸರ್ಕಾರವು ಎಟಿಎಫ್ (ATF) ನಲ್ಲಿ ಎಥೆನಾಲ್ ಅನ್ನು ಬೆರೆಸಲು ಯೋಜಿಸುತ್ತಿದೆ ಎಂದು ಅವರು ಪ್ರತಿಪಾದಿಸಿದರು.
'ಮೋದಿ ಸರ್ಕಾರವು ವಿಮಾನಯಾನ ಇಂಧನದಲ್ಲಿ (ATF) ಎಥೆನಾಲ್ ಅನ್ನು ಬೆರೆಸಲು ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದು ವಿಮಾನಗಳ ಸುರಕ್ಷತೆಗೆ ಗಂಭೀರ ಅಪಾಯವನ್ನು ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ' ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ, 'E20' ಪೆಟ್ರೋಲ್ ಪರಿಚಯಿಸುವ ಕುರಿತು ಕಳವಳ ವ್ಯಕ್ತಪಡಿಸಿ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಇಂಧನ ತುಂಬುವ ಕೇಂದ್ರಗಳಲ್ಲಿ ಶುದ್ಧ ಪೆಟ್ರೋಲ್ ಮತ್ತು E20 ಇಂಧನ - ಎರಡೂ ಲಭ್ಯವಿರುವಂತೆ ನೋಡಿಕೊಳ್ಳಬೇಕು ಹಾಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್‌ನ ಬೆಲೆಯನ್ನು ಕಡಿಮೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದರು.