

ನವದೆಹಲಿ: ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುವುದು, Gen Z ಮತದಾರರನ್ನು ತಲುಪುವುದು ಹಾಗೂ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಂಘಟಿತವಾಗಿ ಕಾರ್ಯನಿರ್ವಹಿಸುವುದಕ್ಕೆ ಎನ್ ಡಿಎ ಯುವ ಸಂಸದರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದಾರೆ. ಪ್ರತಿ ಸಂಸದರಿಗೆ ಅವರ ಕಾರ್ಯಕ್ಷಮತೆಯ ಕುರಿತಾದ ವರದಿಯಂತಿರುವ ಮಾಹಿತಿಯನ್ನು ನೀಡಿದರು. ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ ಸೇರಿದಂತೆ ಎನ್‌ಡಿಎಯ 40ಕ್ಕೂ ಹೆಚ್ಚು ಸಂಸದರು ಹಾಗೂ ಶಿವಸೇನೆ (ಉದ್ಧವ್ ಬಣ)ದಿಂದ ಇತ್ತೀಚೆಗೆ ಸೇರ್ಪಡೆಯಾದ ಆರು ಸಂಸದರನ್ನು ಪ್ರಧಾನಿ ಮೋದಿ ಭೇಟಿಯಾದರು.
ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮತದಾರರನ್ನು ಸಂಪರ್ಕಿಸಲು ಸಾಮಾಜಿಕ ಮಾಧ್ಯಮವು ಈಗ ಹೊಸ ವೇದಿಕೆಯಾಗಿ ಪರಿಣಮಿಸಿದೆ ಎಂದು ಹೇಳಿದರು. ಈ ವಿಚಾರದಲ್ಲಿ ಕೆಲವು ಸಂಸದರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದರೆ ಇನ್ನೂ ಕೆಲವರು ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರತಿ ಸಂಸದರಿಗೆ ಅವರ ಸಾಮಾಜಿಕ ಮಾಧ್ಯಮ ಖಾತೆಗಳ ಕುರಿತಾದ ನಿರ್ದಿಷ್ಟ ಮಾಹಿತಿಯನ್ನು ಒಳಗೊಂಡ ಲಕೋಟೆಯನ್ನು ನೀಡಲಾಯಿತು. ಹೆಚ್ಚಿನ ಸುಧಾರಣೆ ಅಗತ್ಯವಿರುವ ಸಂಸದರಿಗೆ ನೀಡಲಾದ ಪತ್ರಗಳಲ್ಲಿನ ಕೆಲವು ಅಂಶಗಳನ್ನು ಕೆಂಪು ಬಣ್ಣದಲ್ಲಿ ನಮೂದಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ತಮ್ಮ ತಮ್ಮ ಕ್ಷೇತ್ರಗಳಲ್ಲಿ ಕ್ರೀಡೆಗೆ ಹೆಚ್ಚಿನ ಗಮನ ನೀಡುವಂತೆ ಪ್ರಧಾನಿ ಮೋದಿ ಸಂಸದರಿಗೆ ಸೂಚಿಸಿದರು. ನಮ್ಮ ಪ್ರದೇಶಗಳಲ್ಲಿ ಕ್ರೀಡೆಯನ್ನು ಉತ್ತೇಜಿಸುವ ಮಾರ್ಗಗಳ ಬಗ್ಗೆ ನಾವು ಚಿಂತಿಸಬೇಕು ಮತ್ತು ಕ್ರೀಡಾ ಯೋಜನೆಗಳಿಗಾಗಿ ಸರ್ಕಾರವನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಂಸದರೊಬ್ಬರು ತಿಳಿಸಿದ್ದಾರೆ.
ಕಿರಿಯ ಸಂಸದರಿಗೆ ಸಂಸತ್ತಿನ ಕಾರ್ಯವಿಧಾನಗಳನ್ನು ಕಲಿಯುವಂತೆ ಪ್ರಧಾನಿ ಮೋದಿ ವಿಶೇಷವಾಗಿ ಒತ್ತಿ ಹೇಳಿದರು. ಅಗತ್ಯವಿದ್ದಾಗ ಸಂಸತ್ತಿನ ಗ್ರಂಥಾಲಯಕ್ಕೆ ತೆರಳಿ ಅಧ್ಯಯನ ಮಾಡುವಂತೆಯೂ ಅವರು ಸೂಚಿಸಿದರು.
Gen Z ಯುವಕರ ಪ್ರತಿಭಟನೆಗಳ ನಡುವೆಯೇ ಈ ಸಭೆ ನಡೆದಿದ್ದು, ಕ್ಯಾಮೆರಾಗಳ ಮುಂದೆ ಯುವ ಪ್ರತಿಭಟನಾಕಾರರು ಅಸಂಸದೀಯ ಪದಗಳನ್ನು ಬಳಸುತ್ತಿರುವುದನ್ನು ಆಡಳಿತ ಪಕ್ಷದ ಬೆಂಬಲಿಗರು ಪ್ರಶ್ನಿಸುತ್ತಿರುವ ಸಂದರ್ಭದಲ್ಲಿ, ಪ್ರತಿಪಕ್ಷಗಳೊಂದಿಗೆ ವ್ಯವಹರಿಸುವಾಗ ನಿಂದನಾತ್ಮಕ ಪದಗಳನ್ನು ಬಳಸಬಾರದು ಎಂದು ಪ್ರಧಾನಿ ಮೋದಿ ಸಂಸದರಿಗೆ ಎಚ್ಚರಿಕೆ ನೀಡಿದರು.
ಕಳೆದ ಕೆಲವು ದಿನಗಳಿಂದ ಪ್ರಧಾನಿ ಮೋದಿ ಇಂತಹ ಸಭೆಗಳನ್ನು ನಡೆಸುತ್ತಿದ್ದಾರೆ. ಈ ವಾರದ ಆರಂಭದಲ್ಲಿ ನಡೆದ ಸಭೆಯೊಂದರಲ್ಲಿ, ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದವರು ಅನುಕೂಲಗಳನ್ನು ಪಡೆಯುವ ಬಲೆಗೆ ಬೀಳದಂತೆ ಅವರು ಎಚ್ಚರಿಸಿದ್ದರು. ಅಂತಹ ವಿಚಾರಗಳಲ್ಲಿ ಸಿಲುಕಿ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ ಎಂದು ಅವರು ಕಿವಿಮಾತು ಹೇಳಿದ್ದರು.