'ಬಿಜೆಪಿಗೆ ಖುಷಿ ಕೊಡುವ ಹೇಳಿಕೆ ನೀಡಬೇಡಿ': Rahul Gandhi ಕುರಿತ ಕಾಂಗ್ರೆಸ್ ಸಂಸದ ಶಶಿತರೂರ್ ಹೇಳಿಕೆಗೆ KC ವೇಣುಗೋಪಾಲ್ ಖಡಕ್ ವಾರ್ನಿಂಗ್

ರಾಹುಲ್ ಗಾಂಧಿ ಅವರನ್ನು ಟೀಕಿಸುವ ಅಥವಾ ಬಿಜೆಪಿಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡುವಾಗ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.
KC Venugopals warning on Congress MP Shashi Tharoor
ಶಶಿ ತರೂರ್ ಮತ್ತು ಕೆಸಿ ವೇಣುಗೋಪಾಲ್
Updated on

ನವದೆಹಲಿ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ಹೇಳಿಕೆ ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪಕ್ಷದ ನಾಯಕರಿಗೆ ಮಹತ್ವದ ಎಚ್ಚರಿಕೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಟೀಕಿಸುವ ಅಥವಾ ಬಿಜೆಪಿಗೆ ಅನುಕೂಲವಾಗುವಂತಹ ಹೇಳಿಕೆಗಳನ್ನು ನೀಡುವಾಗ ನಾಯಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದ್ದಾರೆ.

ರಾಹುಲ್ ಗಾಂಧಿ ನೇತೃತ್ವದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮವು ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಜಂತರ್ ಮಂತರ್ ಪ್ರತಿಭಟನೆಗಳಷ್ಟು Gen Z ಯುವಜನರನ್ನು ತಲುಪಲು ಸಾಧ್ಯವಾಗಲಿಲ್ಲ ಎಂಬ ಶಶಿ ತರೂರ್ ಅವರ ಹೇಳಿಕೆ ಕುರಿತು ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

“ತರೂರ್ ಅವರ ಹೇಳಿಕೆಯನ್ನು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ಮಾತ್ರ ನೋಡಿದ್ದೇನೆ. ಅವರು ನಿಖರವಾಗಿ ಏನು ಹೇಳಿದ್ದಾರೆ ಎಂಬುದನ್ನು ನಾನು ಕೇಳಿಲ್ಲ” ಎಂದು ವೇಣುಗೋಪಾಲ್ ಹೇಳಿದ್ದಾರೆ.

ಆದರೆ ಇದೇ ವೇಳೆ ಪಕ್ಷದ ನಾಯಕರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. “ಕಾಂಗ್ರೆಸ್ ಸದಸ್ಯರು ಯಾವಾಗಲೂ ಪಕ್ಷದ ಚೌಕಟ್ಟು ಅಥವಾ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದೇ ಇರಬಹುದು. ಆದರೆ ಬಿಜೆಪಿಯನ್ನು ಖುಷಿಪಡಿಸುವ ರೀತಿಯ ಹೇಳಿಕೆಗಳನ್ನು ನೀಡದಂತೆ ನಾವು ಎಚ್ಚರಿಕೆ ವಹಿಸಬೇಕು” ಎಂದಿದ್ದಾರೆ.

“ಯಾರಾದರೂ ರಾಹುಲ್ ಗಾಂಧಿಯಲ್ಲಿ ತಪ್ಪು ಹುಡುಕಿದರೆ ಅಥವಾ ಅವರ ವಿರುದ್ಧ ಎರಡು ನಕಾರಾತ್ಮಕ ಮಾತುಗಳನ್ನು ಹೇಳಿದರೆ ಬಿಜೆಪಿಗೆ ಅದಕ್ಕಿಂತ ಸಂತೋಷದ ವಿಚಾರ ಮತ್ತೊಂದಿಲ್ಲ” ಎಂದು ವೇಣುಗೋಪಾಲ್ ಹೇಳಿದ್ದಾರೆ.

KC Venugopals warning on Congress MP Shashi Tharoor
ಕೇರಳ: ಹೋಟೆಲ್ ಲಿಫ್ಟ್ ನಲ್ಲಿ ಸಿಲುಕಿಕೊಂಡ ಕಾಂಗ್ರೆಸ್ ನಾಯಕ ಶಶಿ ತರೂರ್! ಮುಂದೇನಾಯ್ತು? Video

ತರೂರ್ ಉದ್ದೇಶಪೂರ್ವಕವಾಗಿ ಹೇಳಿಲ್ಲ

ಶಶಿ ತರೂರ್ ಅವರು ಉದ್ದೇಶಪೂರ್ವಕವಾಗಿ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ತಾನು ಭಾವಿಸುವುದಿಲ್ಲ ಎಂದು ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಅಲಹಾಬಾದ್‌ನಲ್ಲಿ ರಾಹುಲ್ ಗಾಂಧಿ ನಡೆಸಿದ ಕಾರ್ಯಕ್ರಮಕ್ಕೆ Gen Z ಯುವಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಅವರು ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಉತ್ತರ ಪ್ರದೇಶ ಸರ್ಕಾರ ಪ್ರಯತ್ನಿಸಿತ್ತು ಎಂಬ ಆರೋಪವನ್ನೂ ಮಾಡಿದ್ದಾರೆ.

ವಿದ್ಯಾರ್ಥಿಗಳ ಪರವಾಗಿ ರಾಹುಲ್ ಗಾಂಧಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದ ವೇಣುಗೋಪಾಲ್, ಪ್ರತಿಭಟನೆ ವೇಳೆ ಪೊಲೀಸರ ಕ್ರಮಕ್ಕೆ ಒಳಗಾದ ವಿದ್ಯಾರ್ಥಿಗಳ ವಿಚಾರದಲ್ಲೂ ರಾಹುಲ್ ಮುಂಚೂಣಿಯಲ್ಲಿ ನಿಂತಿದ್ದರು ಎಂದಿದ್ದಾರೆ. “ಪೆಲೆಟ್ ಗನ್ ದಾಳಿಯಿಂದ ಗಾಯಗೊಂಡ ವಿದ್ಯಾರ್ಥಿಯನ್ನು ಸಾರ್ವಜನಿಕರ ಮುಂದೆ ಮೊದಲು ಕರೆತಂದವರು ಯಾರು ಎಂಬುದನ್ನು ನೀವು ನೋಡಿರಬಹುದು. ಅದು ರಾಹುಲ್ ಗಾಂಧಿ” ಎಂದು ವೇಣುಗೋಪಾಲ್ ಹೇಳಿದ್ದಾರೆ.

‘ನಾವು ಎಲ್ಲಿ ಎಡವಿದ್ದೇವೆ ಎಂಬುದನ್ನು ನೋಡಬೇಕು’

ಇದಕ್ಕೂ ಮುನ್ನ ಶಶಿ ತರೂರ್ ಅವರು ವಿರೋಧ ಪಕ್ಷಗಳು ಯುವಜನರನ್ನು, ಅದರಲ್ಲೂ Gen Z ಪೀಳಿಗೆಯನ್ನು ಸಮರ್ಪಕವಾಗಿ ತಲುಪಲು ಏಕೆ ವಿಫಲವಾಗಿವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಯುವಜನರನ್ನು ಕಾಂಗ್ರೆಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಸಂಘಟನೆಗಳತ್ತ ಸೆಳೆಯಲು ಸೂಕ್ತ ಅವಕಾಶ ಕಲ್ಪಿಸಿಲ್ಲ ಎಂದು ತರೂರ್ ಅಭಿಪ್ರಾಯಪಟ್ಟಿದ್ದರು.

‘ಛಾತ್ರೋಂ ಕಿ ಗೂಂಜ್’ ರ‍್ಯಾಲಿಗಳು ಜಂತರ್ ಮಂತರ್ ಪ್ರತಿಭಟನೆಯಷ್ಟು ಯುವಜನರನ್ನು ತಲುಪಲು ವಿಫಲವಾಗಿವೆಯೇ ಎಂಬ ಪ್ರಶ್ನೆಗೆ, “ಹೌದು, ಅದು ಸರಿ. ಅದಕ್ಕಾಗಿಯೇ ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕು” ಎಂದು ತರೂರ್ ಉತ್ತರಿಸಿದ್ದರು.

KC Venugopals warning on Congress MP Shashi Tharoor
ಪಾಸ್ ಪೋರ್ಟ್ ಪೌರತ್ವದ ದಾಖಲೆ ಅಲ್ಲ, ಹಾಗಾದ್ರೆ ಏನು? ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ ಶಶಿ ತರೂರ್! ಕಾನೂನು ತಿದ್ದುಪಡಿಗೆ ಒತ್ತಾಯ

‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ’

ಆದರೆ ತಮ್ಮ ಹೇಳಿಕೆಯನ್ನು ಪಕ್ಷ ಅಥವಾ ಅದರ ನಾಯಕತ್ವದ ವಿರುದ್ಧದ ಟೀಕೆಯಾಗಿ ಪರಿಗಣಿಸಬಾರದು ಎಂದು ತರೂರ್ ಬಳಿಕ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಮಾತಿನ ಉದ್ದೇಶವನ್ನು ಕೆಲವು ಮಾಧ್ಯಮಗಳು ತಪ್ಪಾಗಿ ಅರ್ಥೈಸಿ ವರದಿ ಮಾಡಿವೆ ಎಂದು ಅವರು ಹೇಳಿದ್ದಾರೆ.

ಯುವಜನರಿಗೆ ರಾಜಕೀಯದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವ ಅಗತ್ಯವಿದೆ. ಸ್ಥಾಪಿತ ರಾಜಕೀಯ ಪಕ್ಷಗಳು ಯುವಜನರಿಗೆ ರಾಜಕೀಯ ಪ್ರವೇಶಿಸಲು ಸ್ಪಷ್ಟ ಹಾಗೂ ಪರಿಣಾಮಕಾರಿ ಮಾರ್ಗವನ್ನು ಒದಗಿಸಬೇಕು ಎಂಬುದೇ ತಮ್ಮ ಮಾತಿನ ಉದ್ದೇಶವಾಗಿತ್ತು ಎಂದು ತರೂರ್ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com