TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಆರಂಭದಲ್ಲಿ ಹವಾಮಾನ ವೈಪರೀತ್ಯವೇ ಘಟನೆಗೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಇದೀಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಆಗಸ್ಟ್‌ 4ರಂದು ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು 300 ಅಡಿಗಳಷ್ಟು ಹಠಾತ್ ಕುಸಿದ ಘಟನೆಗೆ ಕೇವಲ ಗಾಳಿಯ ತಲ್ಲಣ ಕಾರಣವಲ್ಲ, ಬದಲಿಗೆ ಮೂರೂ ಹೈಡ್ರಾಲಿಕ್ ವ್ಯವಸ್ಥೆಗಳು ವಿಫಲವಾಗಿದ್ದು ಕಾರಣ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಆರಂಭದಲ್ಲಿ ಹವಾಮಾನ ವೈಪರೀತ್ಯವೇ ಘಟನೆಗೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಇದೀಗ ಲಭ್ಯವಾಗಿರುವ ಹೊಸ ಮಾಹಿತಿಯ ಪ್ರಕಾರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿದ್ದವು ಎನ್ನಲಾಗಿದೆ.

ಏರ್‌ ಇಂಡಿಯಾ ಆರಂಭದಲ್ಲಿ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, “ವಿಮಾನ ಹಾರಾಟದ ವೇಳೆ ಉಂಟಾದ ಅಲ್ಪಾವಧಿಯ ಪ್ರಕ್ಷುಬ್ಧತೆಯಿಂದ ಕ್ಷಣಿಕವಾಗಿ ಎತ್ತರದಲ್ಲಿ ಬದಲಾವಣೆ ಉಂಟಾಯಿತು” ಎಂದು ತಿಳಿಸಿತ್ತು. ಆದರೆ, ಕೆಲವೇ ಗಂಟೆಗಳ ಬಳಿಕ ಬಿಡುಗಡೆ ಮಾಡಿದ ಮತ್ತೊಂದು ಹೇಳಿಕೆಯಲ್ಲಿ “ವಿಮಾನ ಹಾರಾಟದ ವೇಳೆ ಏಕಾಏಕಿ ಎತ್ತರ ಕಳೆದುಕೊಂಡಿತು” ಎಂದು ತಿಳಿಸಲಾಗಿತ್ತು. ಎರಡನೇ ಹೇಳಿಕೆಯಲ್ಲಿ ‘ಪ್ರಕ್ಷುಬ್ಧತೆ’ ಎಂಬ ಪದವನ್ನು ಕೈಬಿಡಲಾಗಿತ್ತು.

ಮೂರು ಹೈಡ್ರಾಲಿಕ್‌ ವ್ಯವಸ್ಥೆಗಳು ವಿಫಲ?

ಏರ್‌ಲೈನ್‌ ಪೈಲಟ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಅಧ್ಯಕ್ಷ ಕ್ಯಾಪ್ಟನ್‌ ಸ್ಯಾಮ್‌ ಥಾಮಸ್‌ ಅವರ ಪ್ರಕಾರ, ವಿಮಾನದಲ್ಲಿ ಮೂರು ಹೈಡ್ರಾಲಿಕ್‌ ವ್ಯವಸ್ಥೆಗಳು ಏಕಕಾಲದಲ್ಲಿ ವಿಫಲವಾಗಿದ್ದವು ಎಂದು ತಿಳಿಸಿದ್ದಾರೆ.

“ಏರ್‌ಬಸ್‌ A320 ವಿಮಾನವು ರಾತ್ರಿ ಸುಮಾರು 10.30ಕ್ಕೆ ಒಡಿಶಾದ ಜಾರ್ಸುಗುಡಾ ವಾಯುಪ್ರದೇಶ ಪ್ರವೇಶಿಸುತ್ತಿದ್ದಾಗ, ಪೈಲಟ್‌ ಇನ್‌ ಕಮಾಂಡ್‌ ವಿಮಾನದ ಮೂರು ಹೈಡ್ರಾಲಿಕ್‌ ವ್ಯವಸ್ಥೆಗಳು ವಿಫಲವಾಗಿರುವುದನ್ನು ಗಮನಿಸಿದರು,” ಎಂದು ಹೇಳಿದ್ದಾರೆ.

ವಿಮಾನದ ಹಾರಾಟ ನಿಯಂತ್ರಣ ಹಾಗೂ ಸಾಮಾನ್ಯ ಕಾರ್ಯನಿರ್ವಹಣೆಯಲ್ಲಿ ಈ ಹೈಡ್ರಾಲಿಕ್‌ ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಸಮಸ್ಯೆ ಗಮನಕ್ಕೆ ಬಂದ ತಕ್ಷಣ ವಿಮಾನದ ಕ್ಯಾಪ್ಟನ್‌ ಸಹ ಪೈಲಟ್‌ಗೆ ವಿಮಾನದ ಮುಂಭಾಗವನ್ನು ಕೆಳಮುಖವಾಗಿ ತಿರುಗಿಸುವಂತೆ ಸೂಚಿಸಿದರು. ಇದರಿಂದ ವಿಮಾನ ಸುಮಾರು 300 ಅಡಿ ಕೆಳಕ್ಕೆ ಇಳಿಯಿತು ಎಂದು ತಿಳಿಸಿದ್ದಾರೆ.

File photo
Watch | ಫುಕೆಟ್-ದೆಹಲಿ ಏರ್ ಇಂಡಿಯಾ ವಿಮಾನ 300 ಅಡಿ ಕುಸಿತ; 12 ಮಂದಿಗೆ ಗಾಯ

ವಿಮಾನ ಏಕಾಏಕಿ ಕೆಳಕ್ಕೆ ಇಳಿದ ಪರಿಣಾಮ ‘ನೆಗೆಟಿವ್‌ ಜಿ’ ಉಂಟಾಗಿ, ಪ್ರಯಾಣಿಕರು ತಮ್ಮ ಆಸನಗಳಿಂದ ಮೇಲೆ ಎಸೆಯಲ್ಪಟ್ಟರು. ಇದರಿಂದ ಕೆಲವರಿಗೆ ಗಾಯಗಳಾದವು ಎನ್ನಲಾಗಿದೆ.

“ಕಾಕ್‌ಪಿಟ್‌ ಸಿಬ್ಬಂದಿ ತಕ್ಷಣ ಕೈಗೊಂಡ ಕ್ರಮದಿಂದ ವಿಮಾನದಲ್ಲಿದ್ದ ಅನೇಕ ಪ್ರಯಾಣಿಕರ ಜೀವ ಉಳಿಯಿತು,” ಎಂದು ಕ್ಯಾಪ್ಟನ್‌ ಸ್ಯಾಮ್‌ ಥಾಮಸ್‌ ಹೇಳಿದ್ದಾರೆ.

A320ನಲ್ಲಿ ಮೂರು ಹೈಡ್ರಾಲಿಕ್‌ ವ್ಯವಸ್ಥೆ

ಇದೇ ವೇಳೆ ತಾಂತ್ರಿಕ ಅಂಶಗಳನ್ನು ವಿವರಿಸಿರುವ ಥಾಮಸ್‌ ಅವರು, ಏರ್‌ಬಸ್‌ A320 ವಿಮಾನದಲ್ಲಿ ವಿಮಾನದ ಕೆಳಭಾಗದಲ್ಲಿ ಮೂರು ಹೈಡ್ರಾಲಿಕ್‌ ರಿಸರ್ವಾಯರ್‌ಗಳಿರುತ್ತವೆ. ಈ ರಿಸರ್ವಾಯರ್‌ಗಳಿಂದ ಹೊರಡುವ ಪೈಪ್‌ಗಳು ಮತ್ತು ಉಕ್ಕಿನ ಕೊಳವೆಗಳು ವಿಮಾನದ ನಿಯಂತ್ರಣ ವ್ಯವಸ್ಥೆಗಳೊಂದಿಗೆ ಸಂಪರ್ಕ ಹೊಂದಿರುತ್ತವೆ.

ಮೂರು ಹೈಡ್ರಾಲಿಕ್‌ ವ್ಯವಸ್ಥೆಗಳು ಏಕಕಾಲದಲ್ಲಿ ವಿಫಲವಾಗುವುದು ಅತ್ಯಂತ ಅಪರೂಪದ ಘಟನೆ ಎಂದು ಅವರು ಹೇಳಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ವಿಮಾನವನ್ನು ಸ್ಥಿರಗೊಳಿಸಲು ಕಾಕ್‌ಪಿಟ್‌ ಸಿಬ್ಬಂದಿ ಕೆಲವೊಮ್ಮೆ ವಿಮಾನವನ್ನು 800 ಅಡಿವರೆಗೂ ಕೆಳಕ್ಕೆ ಇಳಿಸಬೇಕಾಗಬಹುದು ಎಂದು ವಿವರಿಸಿದ್ದಾರೆ.

ಈ ನಡುವೆ, ಫುಕೆಟ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನದ ಇಬ್ಬರು ಪೈಲಟ್‌ಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಕರ್ತವ್ಯದಿಂದ ಹೊರಗಿಟ್ಟಿದೆ (ಡಿರೋಸ್ಟರ್‌).

ಇಬ್ಬರಲ್ಲಿ ಒಬ್ಬ ಪೈಲಟ್‌ ಆರಂಭಿಕ ಮಾದಕ ವಸ್ತು ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಮತ್ತೊಂದು ದೃಢೀಕರಣ ಪರೀಕ್ಷೆ ನಡೆಸಲಾಗಿದೆ. ಅದರ ಫಲಿತಾಂಶಕ್ಕಾಗಿ ಕಾಯಲಾಗುತ್ತಿದೆ ಎಂದು ತಿಳಿದುಬಂದಿದೆ.

ವಿಮಾನದಲ್ಲಿನ ತಾಂತ್ರಿಕ ದೋಷ, ಪೈಲಟ್‌ಗಳ ಕ್ರಮ ಹಾಗೂ ಘಟನೆಯ ನಿಖರ ಕಾರಣದ ಕುರಿತು ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com