ಜಾರ್ಖಂಡ್‌ ಪರೀಕ್ಷೆ ವಿವಾದ: 18ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ: BJPಯಿಂದ ರಾಜ್ಯವ್ಯಾಪಿ ಬಂದ್, ABVP ಕಾರ್ಯಕರ್ತರು ವಶಕ್ಕೆ..!

JPSC-JSSC ವೇದಿಕೆಯಡಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಜಾರ್ಖಂಡ್‌ ಸರ್ಕಾರದ ನಡುವೆ ಭಾನುವಾರ ನಡೆದ ಆರನೇ ಸುತ್ತಿನ ಮಾತುಕತೆಯೂ ಯಾವುದೇ ಒಮ್ಮತಕ್ಕೆ ಬರದೆ ವಿಫಲವಾಗಿದೆ.
Security personnel disperse off BJP supporters who burned a tyre during 'Jharkhand Bandh'.
'ಜಾರ್ಖಂಡ್ ಬಂದ್' ವೇಳೆ ಟೈರ್ ಸುಟ್ಟ ಬಿಜೆಪಿ ಬೆಂಬಲಿಗರನ್ನು ಚದುರಿಸಿದ ಭದ್ರತಾ ಸಿಬ್ಬಂದಿಗಳು.
Updated on

ರಾಂಚಿ: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 18ನೇ ದಿನಕ್ಕೆ ಕಾಲಿಟ್ಟಿದೆ.

ವಿದ್ಯಾರ್ಥಿಗಳ ಮೇಲೆ ಸೋಮವಾರ ಪೊಲೀಸರು ನಡೆಸಿದ ಕ್ರಮ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದ್ದು, ಎಬಿವಿಪಿ ಕಾರ್ಯಕರ್ತರು ವಿಧಾನಸಭೆ ಮುತ್ತಿಗೆಗೆ ಮುಂದಾಗಿದ್ದಾರೆ.

ಸೋಮವಾರ ವಿಧಾನಸಭೆ ಮೆರವಣಿಗೆ ವೇಳೆ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ನಡೆಸಿದ ಕ್ರಮವನ್ನು ವಿರೋಧಿಸಿ ಬಿಜೆಪಿ ಮಂಗಳವಾರ ಬೆಳಗ್ಗೆ 8ರಿಂದ ಮಧ್ಯರಾತ್ರಿ 12ರವರೆಗೆ ಬಂದ್‌ಗೆ ಕರೆ ನೀಡಿದೆ.

ಇದೇ ವೇಳೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಹಳೆಯ ವಿಧಾನಸಭೆ ಆವರಣದಿಂದ ನೂತನ ವಿಧಾನಸಭೆ ಸಂಕೀರ್ಣದವರೆಗೆ ‘ವಿಧಾನಸಭೆ ಚಲೋ’ ಮೆರವಣಿಗೆ ನಡೆಸುವುದಾಗಿ ಘೋಷಿಸಿತ್ತು.

ಇದರಂತೆ ಜಾರ್ಖಂಡ್‌ ವಿಧಾನಸಭೆಯತ್ತ ಮೆರವಣಿಗೆ ಆರಂಭಿಸಿದ ಎಬಿವಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಂಚಿಯ ಹಳೆಯ ವಿಧಾನಸಭೆ ಪ್ರದೇಶದಿಂದ ಎಬಿವಿಪಿ ಸದಸ್ಯರು ಮೆರವಣಿಗೆ ಆರಂಭಿಸುತ್ತಿದ್ದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ಹೇಳಿದ್ದಾರೆ.

ಜುಲೈ 25ರಿಂದ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ನೇಮಕಾತಿ ಪರೀಕ್ಷೆಗಳಲ್ಲಿ ಪಾರದರ್ಶಕತೆ, ಜಾರ್ಖಂಡ್‌ ಲೋಕಸೇವಾ ಆಯೋಗ (JPSC) ಹಾಗೂ ಜಾರ್ಖಂಡ್‌ ಸಿಬ್ಬಂದಿ ಆಯ್ಕೆ ಆಯೋಗ (JSSC)ದಲ್ಲಿ ಸುಧಾರಣೆ, ಕೆಲವು ಪರೀಕ್ಷೆಗಳನ್ನು ರದ್ದುಪಡಿಸುವುದು ಹಾಗೂ ರಾಜ್ಯದ ಹೊರಗಿನ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿಗಳ ಸಮಿತಿ ಅಥವಾ ಸಿಬಿಐನಿಂದ ಸ್ವತಂತ್ರ ತನಿಖೆ ನಡೆಸುವಂತೆ ಒತ್ತಾಯಿಸುತ್ತಿದ್ದಾರೆ.

ಆರು ಮಂದಿ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಅವರಲ್ಲಿ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ಕಾರ-ವಿದ್ಯಾರ್ಥಿಗಳ ಮಾತುಕತೆ ವಿಫಲ

JPSC-JSSC ವೇದಿಕೆಯಡಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಜಾರ್ಖಂಡ್‌ ಸರ್ಕಾರದ ನಡುವೆ ಭಾನುವಾರ ನಡೆದ ಆರನೇ ಸುತ್ತಿನ ಮಾತುಕತೆಯೂ ಯಾವುದೇ ಒಮ್ಮತಕ್ಕೆ ಬರದೆ ವಿಫಲವಾಗಿದೆ.

ವಿದ್ಯಾರ್ಥಿಗಳ ಶೇ.98ರಷ್ಟು ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದ್ದರೂ ಪ್ರತಿಭಟನೆ ಮುಂದುವರಿಸಿರುವುದು ದುರದೃಷ್ಟಕರ ಎಂದು ಸರ್ಕಾರ ಹೇಳಿದೆ. ಆದರೆ, ಈ ವಾದವನ್ನು ವಿದ್ಯಾರ್ಥಿಗಳು ತಿರಸ್ಕರಿಸಿದ್ದು, ತಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Security personnel disperse off BJP supporters who burned a tyre during 'Jharkhand Bandh'.
ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸಭೆಯತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

ಪ್ರತಿಭಟನೆ ಹತ್ತಿಕ್ಕಲು ಲಾಠಿಚಾರ್ಜ್‌, ಜಲಫಿರಂಗಿ, ಅಶ್ರುವಾಯು ಪ್ರಯೋಗ

ಸೋಮವಾರ ವಿಧಾನಸಭೆಯತ್ತ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಜಲಫಿರಂಗಿ, ಅಶ್ರುವಾಯು ಹಾಗೂ ಲಾಠಿಚಾರ್ಜ್‌ ಬಳಸಿದ್ದರು. ಈ ವೇಳೆ ಹಲವು ಪ್ರತಿಭಟನಾಕಾರರು ಗಾಯಗೊಂಡಿದ್ದು, ರಾಂಚಿ ಪೊಲೀಸರು ತಮ್ಮ 14 ಸಿಬ್ಬಂದಿಗೂ ಗಾಯಗಳಾಗಿವೆ ಎಂದು ಹೇಳಿದ್ದಾರೆ.

ಅಕ್ರಮ ನೇಮಕಾತಿ ಕುರಿತು ಇ.ಡಿ. ತನಿಖೆ

ನೇಮಕಾತಿ ಪ್ರಕ್ರಿಯೆಯಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ.) ಕೂಡ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಆರಂಭಿಸಿದೆ.

ಈ ನಡುವೆ ಜಾರ್ಖಂಡ್‌ ಸಿಐಡಿ, ಆರೋಪಿತ ಅಕ್ರಮಗಳಿಗೆ ಸಂಬಂಧಿಸಿದಂತೆ ಮಾಜಿ JPSC ಅಧ್ಯಕ್ಷ ಎಲ್‌. ಖಿಯಾಂಗ್ಟೆ ಅವರನ್ನು ಬಂಧಿಸಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.

ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ: ಹೇಮಂತ್‌ ಸೊರೆನ್‌

ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು “ಸಂವಾದ ಮತ್ತು ವಿಶ್ವಾಸದ ಮೂಲಕ” ಬಗೆಹರಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಮಂತ್‌ ಸೊರೆನ್‌ ಮನವಿ ಮಾಡಿದ್ದಾರೆ.

ಇದೇ ವೇಳೆ ಬಿಜೆಪಿ ರಾಜಕೀಯ ಲಾಭಕ್ಕಾಗಿ ಪ್ರತಿಭಟನಾಕಾರರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ವಿಧಾನಸಭೆ ಮೆರವಣಿಗೆಗೂ ಮುನ್ನ ಬಿಜೆಪಿ ಸೊರೆನ್‌ ನಿವಾಸಕ್ಕೆ ಮುತ್ತಿಗೆ ಹಾಕಿತ್ತು. ವಿದ್ಯಾರ್ಥಿಗಳ ವಿರುದ್ಧ ಬಲಪ್ರಯೋಗ ನಡೆಸಿರುವುದನ್ನು ಖಂಡಿಸಿ ಮಂಗಳವಾರ ಬಂದ್‌ಗೆ ಕರೆ ನೀಡಿದೆ.

ಪೊಲೀಸ್‌ ಕ್ರಮ ಖಂಡಿಸಿದ ರಾಹುಲ್‌ ಗಾಂಧಿ

ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್‌ ಕ್ರಮವನ್ನು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಖಂಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆಗಳಿಗೆ ಹಿಂಸೆಯ ಮೂಲಕ ಉತ್ತರ ನೀಡಬಾರದು ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದ್ದು, ಜಾರ್ಖಂಡ್‌ನಲ್ಲಿ ಕಾಂಗ್ರೆಸ್‌ JMM ನೇತೃತ್ವದ ಸರ್ಕಾರದ ಭಾಗವಾಗಿರುವುದರಿಂದ ಅವರ ಹೇಳಿಕೆಯನ್ನು “ದ್ವಂದ್ವ ನಿಲುವು” ಎಂದು ಟೀಕಿಸಿದೆ.

ಕೇಂದ್ರ ಸಚಿವ ಜೆ.ಪಿ. ನಡ್ಡಾ, ರಾಹುಲ್‌ ಗಾಂಧಿ ರಾಜ್ಯ ಸರ್ಕಾರದ ಭಾಗವಾಗಿದ್ದಾರೆ ಎಂದು ಆರೋಪಿಸಿ, ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಧ್ವನಿ ಅವರಿಗೆ ಕೇಳಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

14ನೇ JPSC ಪರೀಕ್ಷೆ ರದ್ದು

ಈ ನಡುವೆ ರಾಜ್ಯ ಸರ್ಕಾರವು 14ನೇ JPSC ಪರೀಕ್ಷೆ ಹಾಗೂ 2023 ಮತ್ತು 2025ರ ಬಾಕಿ ಪರೀಕ್ಷೆಗಳನ್ನು ರದ್ದುಪಡಿಸಲು ಒಪ್ಪಿಕೊಂಡಿದೆ.

ಹೆಚ್ಚುವರಿ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಸುದಿವ್ಯ ಕುಮಾರ್‌ ಮಾತನಾಡಿ, ನೇಮಕಾತಿ ಪ್ರಕ್ರಿಯೆಯಲ್ಲಿ ಹಣಕಾಸು ಅಕ್ರಮಗಳ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಸರ್ಕಾರ ಸ್ವಯಂಪ್ರೇರಿತವಾಗಿ ಇ.ಡಿ. ತನಿಖೆಗೂ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

JSSC-CGL ಪರೀಕ್ಷೆ ರದ್ದುಪಡಿಸಲು ಸಾಧ್ಯವಿಲ್ಲ

JSSC-CGL ಪರೀಕ್ಷೆಯನ್ನು ರದ್ದುಪಡಿಸಲು ಸರ್ಕಾರಕ್ಕೆ ಸಾಧ್ಯವಿಲ್ಲ ಎಂದು ಸುದಿವ್ಯ ಕುಮಾರ್‌ ಅವರು ಹೇಳಿದ್ದು, ಈ ಪರೀಕ್ಷೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆದಿರುವುದರಿಂದ ಸರ್ಕಾರ ಏಕಪಕ್ಷೀಯವಾಗಿ ರದ್ದುಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಸಿಐಡಿ ತನಿಖೆಯ ಮೇಲ್ವಿಚಾರಣೆಗಾಗಿ ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಮಿತಿಯನ್ನು ರಚಿಸುವ ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ. ಆದರೆ, ಪ್ರತಿಭಟನಾಕಾರರು ಇದನ್ನು ತಿರಸ್ಕರಿಸಿದ್ದಾರೆಂದು ಹೇಳಿದ್ದಾರೆ.

JPSC ಮತ್ತು JSSCಯ ಕಾರ್ಯಾಚರಣಾ ನಿಯಮಗಳಲ್ಲಿ ಸುಧಾರಣೆ ತರಲು ಕೂಡ ಸರ್ಕಾರ ಪ್ರಸ್ತಾವನೆ ಮಾಡಿದ್ದು, ಐಐಟಿ-ಐಎಸ್‌ಎಂ ಧನಬಾದ್‌, ಐಐಎಂ-ರಾಂಚಿ ಹಾಗೂ ಎಕ್ಸ್‌ಎಲ್‌ಆರ್‌ಐ ಜಮ್ಶೆಡ್‌ಪುರ ಸಂಸ್ಥೆಗಳ ಸಲಹೆ ಪಡೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com