Census 2027: ಜಾತಿ, ಕೋವಿಡ್ ಲಸಿಕೆ, ಆಧಾರ್‌ ಸೇರಿ 40 ಪ್ರಶ್ನೆಗಳಿಗೆ ಉತ್ತರಿಸಬೇಕು! ಜನಗಣತಿ ವೇಳೆ ಯಾವೆಲ್ಲಾ ಐಡಿಗಳು ಬೇಕು ಗೊತ್ತಾ?

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ಗಳ ಮಾಹಿತಿಯ ಜೊತೆಗೆ ಎಲ್ಲಾ ಜನರಿಂದ ಜಾತಿ ಕುರಿತ ಮುಕ್ತ ಪ್ರಶ್ನೆಯ ಮೂಲಕ ಮಾಹಿತಿ ಪಡೆಯಲಾಗುತ್ತದೆ.
Centre notifies 40 questions including details of caste
ಜನಸಂಖ್ಯಾ ಗಣತಿ (ಸಂಗ್ರಹ ಚಿತ್ರ)
Updated on

ನವದೆಹಲಿ: ದೇಶದ ಜನಸಂಖ್ಯೆಯ ಸಮಗ್ರ ಮಾಹಿತಿ ಸಂಗ್ರಹಿಸುವ ಜನಗಣತಿ 2027ರ ಎರಡನೇ ಹಂತಕ್ಕೆ ಕೇಂದ್ರ ಸರ್ಕಾರ 40 ಪ್ರಶ್ನೆಗಳ ವೇಳಾಪಟ್ಟಿಯನ್ನು ಶುಕ್ರವಾರ ಅಧಿಸೂಚನೆ ಮೂಲಕ ಪ್ರಕಟಿಸಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST)ಗಳ ಮಾಹಿತಿಯ ಜೊತೆಗೆ ಎಲ್ಲಾ ಜನರಿಂದ ಜಾತಿ ಕುರಿತ ಮುಕ್ತ ಪ್ರಶ್ನೆಯ ಮೂಲಕ ಮಾಹಿತಿ ಪಡೆಯಲಾಗುತ್ತದೆ.

ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ, ಭಾರತದ ರಿಜಿಸ್ಟ್ರಾರ್ ಜನರಲ್ ಹಾಗೂ ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಅವರ ಸಹಿ ಮತ್ತು ಮುದ್ರೆಯೊಂದಿಗೆ ಜನಗಣತಿ ಪ್ರಶ್ನಾವಳಿಯನ್ನು ಪ್ರಕಟಿಸಲಾಗಿದೆ.

ಜನಸಂಖ್ಯೆ ಲೆಕ್ಕಾಚಾರದ ವೇಳಾಪಟ್ಟಿಯಲ್ಲಿ ‘ಪರಿಶಿಷ್ಟ ಜಾತಿ (SC)/ ಪರಿಶಿಷ್ಟ ಪಂಗಡ (ST)/ಜಾತಿ’ಯನ್ನು 10ನೇ ಪ್ರಶ್ನೆಯಾಗಿ ಸೇರಿಸಲಾಗಿದೆ.

Centre notifies 40 questions including details of caste
'ಅಧಿವೇಶನದಲ್ಲಿ ಜಾತಿ ಗಣತಿ ಸಮೀಕ್ಷೆ ವರದಿ ಮಂಡಿಸಿ; ಹಿಂದಿನಂತೆ ಕಸದ ಬುಟ್ಟಿಗೆ ಹಾಕಬೇಡಿ; ಜನರ 450 ಕೋಟಿ ರೂ ತೆರಿಗೆ ಹಣ ವ್ಯರ್ಥ ಮಾಡಬೇಡಿ'

ಜಾತಿ ಹೆಸರನ್ನು ಜನರು ಹೇಳಿದಂತೆಯೇ ದಾಖಲು

ಅಧಿಕಾರಿಗಳ ಪ್ರಕಾರ, ಜಾತಿ ವಿವರ ದಾಖಲಿಸಲು ಪ್ರತ್ಯೇಕ ಮುಕ್ತ ಕಾಲಂ ಇರಲಿದೆ. ವ್ಯಕ್ತಿಯು ತನ್ನ ಜಾತಿ ಅಥವಾ ಉಪಜಾತಿಯನ್ನು ಹೇಗೆ ಹೇಳುತ್ತಾರೋ ಅದೇ ರೀತಿಯಲ್ಲಿ ಗಣತಿದಾರರು ದಾಖಲಿಸಲಿದ್ದಾರೆ. ಜನಸಂಖ್ಯೆ ಲೆಕ್ಕಾಚಾರದ ಹಂತಕ್ಕಾಗಿ ಜುಲೈ 1ರಿಂದ 20ರವರೆಗೆ 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಪೂರ್ವ ಪರೀಕ್ಷೆಯ ಬಳಿಕವೂ ಇದೇ ಮಾದರಿಯನ್ನು ಮುಂದುವರಿಸಲಾಗಿದೆ.

ಈ ಪೂರ್ವ ಪರೀಕ್ಷೆಯ ವೇಳೆ SC ಮತ್ತು ST ಹೊರತಾದ ಜನರಿಗೂ ಅವರ ಜಾತಿ ಕುರಿತು ಪ್ರಶ್ನೆ ಕೇಳಲಾಗಿತ್ತು. ಅವರು ನೀಡಿದ ಉತ್ತರಗಳನ್ನು ಮುಕ್ತ ಕಾಲಂನಲ್ಲಿ ದಾಖಲಿಸಲಾಗಿತ್ತು.

ಆಧಾರ್‌ನಿಂದ ಪಾಸ್‌ಪೋರ್ಟ್‌ವರೆಗೆ ಮಾಹಿತಿ

Census 2027ರಲ್ಲಿ ಸಂಗ್ರಹಿಸಲಾಗುವ ಮಾಹಿತಿಯ ವ್ಯಾಪ್ತಿಯನ್ನೂ ಕೇಂದ್ರ ಸರ್ಕಾರ ವಿಸ್ತರಿಸಿದೆ. ಜನಸಂಖ್ಯಾ ಹಾಗೂ ಸಾಮಾಜಿಕ-ಆರ್ಥಿಕ ಮಾಹಿತಿಯ ಜೊತೆಗೆ ಗುರುತಿನ ದಾಖಲೆಗಳು ಮತ್ತು ವಿವಿಧ ಸೇವೆಗಳಿಗೆ ಸಂಬಂಧಿಸಿದ ವಿವರಗಳನ್ನೂ ಸಂಗ್ರಹಿಸಲಾಗುತ್ತದೆ.

ಅಗತ್ಯವಿರುವ ಕಡೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ವೋಟರ್ ಐಡಿ ಸಂಖ್ಯೆ, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ವಿವರಗಳನ್ನು ಕೂಡ ಪಡೆಯಲಾಗುತ್ತದೆ.

Centre notifies 40 questions including details of caste
ಕೇಂದ್ರ ಸರ್ಕಾರದ ವೈಫಲ್ಯ ಮರೆ ಮಾಚುವ ಉದ್ದೇಶದಿಂದ ಜನಗಣತಿ ವಿಳಂಬ: ಪ್ರಿಯಾಂಕ್ ಖರ್ಗೆ

ಆಗಸ್ಟ್ 17ರಿಂದಲೇ ಕೆಲವು ಪ್ರದೇಶಗಳಲ್ಲಿ ಆರಂಭ

ಲಡಾಖ್ ಹಾಗೂ ಜಮ್ಮು-ಕಾಶ್ಮೀರ, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಹಿಮಪೀಡಿತ ಪ್ರದೇಶಗಳಲ್ಲಿ ಆಗಸ್ಟ್ 17ರಿಂದಲೇ ಜನಗಣತಿ ಪ್ರಕ್ರಿಯೆ ಆರಂಭವಾಗಲಿದೆ. ದೇಶದ ಉಳಿದ ಭಾಗಗಳಲ್ಲಿ ಮುಖ್ಯ ಜನಗಣತಿ ಕಾರ್ಯವನ್ನು 2027ರ ಫೆಬ್ರವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಜನಗಣತಿಯಲ್ಲಿ ಕೇಳಲಾಗುವ ಪ್ರಮುಖ ವಿವರಗಳೇನು?

40 ಪ್ರಶ್ನೆಗಳ ವೇಳಾಪಟ್ಟಿಯಲ್ಲಿ ವ್ಯಕ್ತಿಯ ಹೆಸರು, ವಯಸ್ಸು, ಲಿಂಗ, ವೈವಾಹಿಕ ಸ್ಥಿತಿ, ಪತಿ ಅಥವಾ ಪತ್ನಿಯ ಹೆಸರು, ರಾಷ್ಟ್ರೀಯತೆ, ಧರ್ಮ, ಜಾತಿ ಅಥವಾ ಪಂಗಡ ಮತ್ತು ತಂದೆ-ತಾಯಿಯ ವಿವರಗಳನ್ನು ಪಡೆಯಲಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸಾಕ್ಷರತೆ, ಡಿಜಿಟಲ್ ಸಾಕ್ಷರತೆ, ಶಿಕ್ಷಣ ಸಂಸ್ಥೆಗಳಲ್ಲಿ ಹಾಜರಾತಿ ಮತ್ತು ಪಡೆದಿರುವ ಗರಿಷ್ಠ ಶಿಕ್ಷಣದ ಮಟ್ಟದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.

ಮಾತೃಭಾಷೆ, ಇತರ ಭಾಷೆಗಳ ಬಗ್ಗೆಯೂ ಪ್ರಶ್ನೆ

ಜನಗಣತಿಯಲ್ಲಿ ಭಾಷೆಗೆ ಸಂಬಂಧಿಸಿದ ಮಾಹಿತಿಯನ್ನೂ ಪಡೆಯಲಾಗುತ್ತದೆ. ವ್ಯಕ್ತಿಯ ಮಾತೃಭಾಷೆ ಹಾಗೂ ಅವರಿಗೆ ತಿಳಿದಿರುವ ಇತರ ಭಾಷೆಗಳ ಕುರಿತು ಮಾಹಿತಿ ದಾಖಲಿಸಲಾಗುತ್ತದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕಳೆದ ಒಂದು ವರ್ಷದಲ್ಲಿ ವ್ಯಕ್ತಿ ಕೆಲಸ ಮಾಡಿದ್ದಾರೆಯೇ, ಅವರ ಉದ್ಯೋಗ, ಕೈಗಾರಿಕೆ ಅಥವಾ ಸೇವಾ ಕ್ಷೇತ್ರ, ಕಾರ್ಮಿಕರ ವರ್ಗ ಮತ್ತು ಉದ್ಯೋಗ ಹುಡುಕುತ್ತಿದ್ದಾರೆಯೇ ಎಂಬ ವಿವರಗಳನ್ನು ಕೇಳಲಾಗುತ್ತದೆ. ಕೆಲಸದ ಸ್ಥಳಕ್ಕೆ ತೆರಳಲು ವ್ಯಕ್ತಿ ಕೈಗೊಳ್ಳುವ ಪ್ರಯಾಣದ ಬಗ್ಗೆಯೂ ಮಾಹಿತಿ ದಾಖಲಿಸಲಾಗುತ್ತದೆ.

Centre notifies 40 questions including details of caste
Census 2027: ದೇಶದಲ್ಲಿ ರಾಷ್ಟ್ರೀಯ ಜನಗಣತಿ ಆರಂಭ: ಇದು ಯಾಕೆ ಮುಖ್ಯ ಗೊತ್ತಾ?

ವಲಸೆ ಕುರಿತು ಸಂಪೂರ್ಣ ಮಾಹಿತಿ

ವಲಸೆಯೂ Census 2027ರ ಪ್ರಮುಖ ಭಾಗವಾಗಿರಲಿದೆ. ವ್ಯಕ್ತಿಯ ಜನ್ಮಸ್ಥಳ, ಹಿಂದಿನ ವಾಸಸ್ಥಳ, ವಲಸೆ ಬಂದಿರುವ ಕಾರಣ, ಪ್ರಸ್ತುತ ಸ್ಥಳದಲ್ಲಿ ವಾಸಿಸುತ್ತಿರುವ ಅವಧಿ ಮತ್ತು ಶಾಶ್ವತ ವಿಳಾಸದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಮಹಿಳೆಯರಿಂದ ಮಕ್ಕಳ ಕುರಿತ ಮಾಹಿತಿಯೂ ಸಂಗ್ರಹ

ಪ್ರಸ್ತುತ ವಿವಾಹಿತರಾಗಿರುವ, ವಿಧವೆಯರು, ವಿಚ್ಛೇದಿತರಾಗಿರುವ ಅಥವಾ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಹಿಳೆಯರಿಂದ ಜೀವಂತವಾಗಿರುವ ಮಕ್ಕಳ ಸಂಖ್ಯೆ, ಈವರೆಗೆ ಜೀವಂತವಾಗಿ ಜನಿಸಿದ ಮಕ್ಕಳ ಸಂಖ್ಯೆ ಹಾಗೂ ನಿರ್ದಿಷ್ಟ ಸಂದರ್ಭಗಳಲ್ಲಿ ಕಳೆದ ಒಂದು ವರ್ಷದಲ್ಲಿ ಸಂಭವಿಸಿದ ಹೆರಿಗೆಗಳ ಕುರಿತು ಮಾಹಿತಿ ಪಡೆಯಲಾಗುತ್ತದೆ.

ಕೋವಿಡ್ ಲಸಿಕೆ, ಬ್ಯಾಂಕ್ ಖಾತೆಗಳಿಗೂ ಪ್ರಶ್ನೆ!

ಈ ಬಾರಿ ಜನಗಣತಿಯಲ್ಲಿ ಗಮನ ಸೆಳೆಯುವ ಹಲವು ಹೊಸ ಅಂಶಗಳನ್ನು ಸೇರಿಸಲಾಗಿದೆ. ಕೋವಿಡ್-19 ಲಸಿಕೆಯನ್ನು ಎಲ್ಲಿ ಪಡೆದಿದ್ದಾರೆ, ಒಟ್ಟು ಎಷ್ಟು ಬ್ಯಾಂಕ್ ಖಾತೆಗಳಿವೆ, ಆಧಾರ್, ಮೊಬೈಲ್, ವೋಟರ್ ಐಡಿ, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ವಿವರಗಳು ಲಭ್ಯವಿದೆಯೇ ಎಂಬ ಮಾಹಿತಿಯನ್ನೂ ಸಂಗ್ರಹಿಸಲಾಗುತ್ತದೆ.

ಈ ಎಲ್ಲ ಅಂಶಗಳನ್ನು ಒಳಗೊಂಡಿರುವುದರಿಂದ Census 2027 ದೇಶದಲ್ಲಿ ಇದುವರೆಗೆ ನಡೆದ ಅತ್ಯಂತ ಸಮಗ್ರ ಜನಸಂಖ್ಯಾ ಮಾಹಿತಿ ಸಂಗ್ರಹ ಕಾರ್ಯಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com