

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಪಿಪಲ್ಕೋಟಿ ಸಮೀಪದ ಮಾಯಾಪುರದಲ್ಲಿ ನಿರ್ಮಾಣ ಹಂತದಲ್ಲಿರುವ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC)ನ ಸುರಂಗದೊಳಗೆ ಭಾರಿ ಭೂಕುಸಿತದಿಂದ ಮತ್ತು ನೀರು ತುಂಬಿಕೊಂಡ ಪರಿಣಾಮ ಕನಿಷ್ಠ ಏಳು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲಕನಂದಾ ನದಿಯ ಮೇಲಿನ ನಿರ್ಮಾಣ ಹಂತದಲ್ಲಿರುವ ವಿಷ್ಣುಗಾಡ್-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಟೇಲ್ ರೇಸ್ ಟನಲ್ (TRT)ನಲ್ಲಿ ನಿನ್ನೆ ಗುರುವಾರ ಸಾಯಂಕಾಲ ಈ ಘಟನೆ ಸಂಭವಿಸಿದೆ. ಕಾರ್ಮಿಕರು ಸುರಂಗದೊಳಗೆ ಬಲವರ್ಧಕ ಕಬ್ಬಿಣದ ಸರಳುಗಳನ್ನು ವೆಲ್ಡಿಂಗ್ ಮಾಡುತ್ತಿದ್ದ ವೇಳೆ ಭೂಕುಸಿತ ಸಂಭವಿಸಿದ್ದು, ಭಾರಿ ಪ್ರಮಾಣದ ಅವಶೇಷಗಳು ಹಾಗೂ ನೀರು ಸುರಂಗದೊಳಗೆ ನುಗ್ಗಿ ಹಲವು ಕಾರ್ಮಿಕರು ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಘಟನೆಯ ಬಳಿಕ 28 ಕಾರ್ಮಿಕರು ಸುರಂಗದೊಳಗೆ ಸಿಲುಕಿಕೊಂಡಿದ್ದರು. ರಕ್ಷಣಾ ತಂಡಗಳು ಈವರೆಗೆ 22 ಕಾರ್ಮಿಕರನ್ನು ಹೊರಗೆ ಕರೆತಂದಿದ್ದು, ಅವರ ಪೈಕಿ 7 ಮಂದಿ ಮೃತಪಟ್ಟಿದ್ದಾರೆ.
ರಕ್ಷಿಸಲ್ಪಟ್ಟ ಕಾರ್ಮಿಕರ ಪೈಕಿ 11 ಮಂದಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೊಬ್ಬ ಕಾರ್ಮಿಕರನ್ನು ಪಿಪಲ್ಕೋಟಿಯ ವಿವೇಕಾನಂದ ಚಾರಿಟೇಬಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಬ್ಬ ಕಾರ್ಮಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಸುರಂಗದೊಳಗೆ ಇನ್ನೂ ಸಿಲುಕಿಕೊಂಡಿರುವ ಆರು ಕಾರ್ಮಿಕರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಎನ್‌ಡಿಆರ್‌ಎಫ್ (NDRF) ಮತ್ತು ಎಸ್‌ಡಿಆರ್‌ಎಫ್ (SDRF) ತಂಡಗಳು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಸುರಂಗದೊಳಗೆ ಭಾರಿ ಪ್ರಮಾಣದ ನೀರು ಮತ್ತು ಅವಶೇಷಗಳು ತುಂಬಿಕೊಂಡಿರುವುದರಿಂದ ರಕ್ಷಣಾ ಕಾರ್ಯಾಚರಣೆ ಸವಾಲಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು, ಅಪಘಾತ ಸಂಭವಿಸಿದಾಗ ಸುರಂಗದೊಳಗೆ ಸುಮಾರು 20ರಿಂದ 22 ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದರು. ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿದ ಬಳಿಕ ಸುರಂಗದೊಳಗೆ ಹೆಚ್ಚಿನ ಪ್ರಮಾಣದ ನೀರು ನುಗ್ಗಿದ್ದು, ಸುರಂಗದ ಬದಿಗಳಿಂದಲೂ ನೀರು ಸೋರಿಕೆಯಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ತಂಡದ ಕಮಾಂಡರ್ ಅಮೃತ್ ಲಾಲ್ ಮೀನಾ ತಿಳಿಸಿದ್ದಾರೆ.
ರಕ್ಷಣಾ ಸಿಬ್ಬಂದಿ ವಿಶೇಷ ಉಪಕರಣಗಳನ್ನು ಬಳಸಿ ಸುರಂಗದ ಅಪಾಯಕ್ಕೊಳಗಾದ ಭಾಗವನ್ನು ಪ್ರವೇಶಿಸಿ ಕಾರ್ಮಿಕರು ಹಾಗೂ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಇನ್ನೂ ಸಿಲುಕಿರುವವರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.
ಈ ನಡುವೆ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸುರಂಗ ಅಪಘಾತದಲ್ಲಿ ಸಿಲುಕಿರುವ ಜಾರ್ಖಂಡ್ ಮತ್ತು ಛತ್ತೀಸ್‌ಗಢದ ಕಾರ್ಮಿಕರ ಸ್ಥಿತಿಗತಿ ಕುರಿತು ಆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಉತ್ತರಾಖಂಡ ಸರ್ಕಾರ ತಕ್ಷಣವೇ ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದೆ. ಸಂತ್ರಸ್ತ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸಲಾಗುತ್ತಿದೆ, ರಕ್ಷಿಸಲ್ಪಟ್ಟ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಚಿಕಿತ್ಸೆ, ಔಷಧಗಳು, ವಸತಿ, ಆಹಾರ ಮತ್ತು ಇತರ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಹೆಚ್ಚಿನ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುವ ಕಾರ್ಮಿಕರನ್ನು ಸೂಕ್ತ ಉನ್ನತ ವೈದ್ಯಕೀಯ ಸಂಸ್ಥೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಜಾರ್ಖಂಡ್ ಮತ್ತು ಛತ್ತೀಸ್‌ಗಢ ಸರ್ಕಾರಗಳೊಂದಿಗೆ ಉತ್ತರಾಖಂಡ ಸರ್ಕಾರ ನಿರಂತರ ಸಮನ್ವಯದಲ್ಲಿದ್ದು, ಸಂತ್ರಸ್ತ ಕಾರ್ಮಿಕರಿಗೆ ಸಂಬಂಧಿಸಿದ ಎಲ್ಲ ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ಧಾಮಿ ಹೇಳಿದರು.
ಕಾರ್ಮಿಕರ ಸುರಕ್ಷತೆಯೇ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಸಂತ್ರಸ್ತರ ರಕ್ಷಣೆ, ಚಿಕಿತ್ಸೆ ಮತ್ತು ನೆರವಿಗಾಗಿ ಇಡೀ ರಾಜ್ಯ ಸರ್ಕಾರದ ಯಂತ್ರಾಂಗ ಅತ್ಯಂತ ತುರ್ತುಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಸುರಂಗದೊಳಗೆ ಇನ್ನೂ ಸಿಲುಕಿಕೊಂಡಿದ್ದಾರೆ ಎನ್ನಲಾಗಿರುವ ಆರು ಕಾರ್ಮಿಕರನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಹೊರತೆಗೆಯಲು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.