ಕರೂರ್ ಕಾಲ್ತುಳಿತ ಸಂತ್ರಸ್ತರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ; ‘ಸರ್ಕಾರದ ನೀತಿಯನ್ನು ಪ್ರಶ್ನಿಸಲು ನೀವ್ಯಾರು?’: ಹೈಕೋರ್ಟ್ ಆದೇಶಕ್ಕೆ 'ಸುಪ್ರೀಂ' ತಡೆ

ಜುಲೈ 27ರಂದು ಮದ್ರಾಸ್ ಹೈಕೋರ್ಟ್, ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿ ವಿಜಯ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು.
SC stays Madras HC order on govt jobs to kin of Karur victims
ಕರೂರು ಕಾಲ್ತುಳಿತ ಪ್ರಕರಣ ಮತ್ತು ಸಿಎಂ ವಿಜಯ್
Updated on

ನವದೆಹಲಿ: ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಲು ತಮಿಳುನಾಡು ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರವನ್ನು ರದ್ದುಗೊಳಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಕರೂರ್‌ನಲ್ಲಿ 2025ರ ಸೆಪ್ಟೆಂಬರ್ 27ರಂದು ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ 31 ಕುಟುಂಬಸ್ಥರಿಗೆ ಜುಲೈ 10ರಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇಮಕಾತಿ ಆದೇಶಗಳನ್ನು ವಿತರಿಸಿದ್ದರು. ಮುಖ್ಯಮಂತ್ರಿ ವಿಜಯ್ ಅವರು ಭಾಗವಹಿಸಿದ್ದ ಚುನಾವಣಾ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠ, ಅರ್ಜಿದಾರರು ಸೇರಿದಂತೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆ ವೇಳೆ ಸರ್ಕಾರದ ನೀತಿಯನ್ನು ಪ್ರಶ್ನಿಸಿರುವ ಅರ್ಜಿದಾರರನ್ನು ಉದ್ದೇಶಿಸಿ ನ್ಯಾಯಪೀಠ ತೀವ್ರ ಪ್ರಶ್ನೆಗಳನ್ನು ಮುಂದಿಟ್ಟಿತು.

“ಸರ್ಕಾರದ ನೀತಿಯನ್ನು ಪ್ರಶ್ನಿಸಲು ನೀವ್ಯಾರು? ಉದಾಹರಣೆಗೆ, ಆ ದುರಂತದಲ್ಲಿ ಕುಟುಂಬದ ಏಕೈಕ ಸದಸ್ಯ ಮೃತಪಟ್ಟಿದ್ದರೆ, ಸರ್ಕಾರ ಅವರ ಮಗ ಅಥವಾ ಮಗಳಿಗೆ ಉದ್ಯೋಗ ನೀಡಬಾರದೇ?” ಎಂದು ನ್ಯಾಯಪೀಠ ಪ್ರಶ್ನಿಸಿತು. ರಾಜ್ಯ ಸರ್ಕಾರ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ.

SC stays Madras HC order on govt jobs to kin of Karur victims
ದಳಪತಿ ದಾಂಪತ್ಯದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ತಮಿಳುನಾಡು ಸಿಎಂ ವಿಜಯ್ ಪತ್ನಿ ಸಂಗೀತಾ; ಪ್ರಕರಣ ಇತ್ಯರ್ಥ

ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಜುಲೈ 27ರಂದು ಮದ್ರಾಸ್ ಹೈಕೋರ್ಟ್, ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಸರ್ಕಾರಿ ಉದ್ಯೋಗ ನೀಡಲು ಮುಖ್ಯಮಂತ್ರಿ ವಿಜಯ್ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು. ಇಂತಹ ನಿರ್ಧಾರವು ಮುಂದೆ ಇದೇ ರೀತಿಯ ಉದ್ಯೋಗ ಬೇಡಿಕೆಗಳಿಗೆ “ದ್ವಾರ ತೆರೆದಂತಾಗುತ್ತದೆ” ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು.

ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಸಿ.ವಿ. ಕಾರ್ತಿಕೇಯನ್ ಮತ್ತು ಆರ್. ಶಕ್ತಿವೇಲ್ ಅವರ ವಿಭಾಗೀಯ ಪೀಠ, ಸರ್ಕಾರಿ ಇಲಾಖೆಗಳಲ್ಲಿನ ಅನುಕಂಪದ ಆಧಾರದ ನೇಮಕಾತಿಗಾಗಿ ಈಗಾಗಲೇ ಕಾಯುತ್ತಿರುವ ಹಲವರ ಅಗತ್ಯಗಳನ್ನು ಕಡೆಗಣಿಸುವುದು ಸೂಕ್ತವಲ್ಲ ಎಂದು ಹೇಳಿತ್ತು. ಕಾರ್ಯಾಂಗದ ಅಧಿಕಾರವನ್ನು ಸಂವಿಧಾನ ನಿಗದಿಪಡಿಸಿರುವ ಮಿತಿಗಳೊಳಗೇ ಬಳಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿತ್ತು.

ಹೈಕೋರ್ಟ್‌ನ ಮದುರೈ ಪೀಠವು ಪಟಾಕಿ ಕಾರ್ಖಾನೆಗಳಲ್ಲಿನ ಅಪಘಾತಗಳು ಹಾಗೂ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳನ್ನೂ ಉದಾಹರಣೆಯಾಗಿ ನೀಡಿತ್ತು. ಅಂತಹ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಸ್ಥರಿಗೆ ಪರಿಹಾರಧನ (ಎಕ್ಸ್‌ಗ್ರೇಷಿಯಾ) ನೀಡಲಾಗುತ್ತದೆ.

ಆದರೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಗಮನಿಸಿತ್ತು. ಕರೂರ್ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ನಿರ್ಧಾರವನ್ನು ಅನುಮತಿಸಿದರೆ, ಇದೇ ರೀತಿಯ ಉದ್ಯೋಗಕ್ಕಾಗಿ ಇತರರೂ ಬೇಡಿಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೈಕೋರ್ಟ್ ಹೇಳಿತ್ತು.

SC stays Madras HC order on govt jobs to kin of Karur victims
ಕರೂರು ಕಾಲ್ತುಳಿತ ಸ್ಥಳಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ: ಸಂತ್ರಸ್ತರ 32 ಕುಟುಂಬಗಳಿಗೆ ಸರ್ಕಾರಿ ಉದ್ಯೋಗ, ಸ್ಮಾರಕ ನಿರ್ಮಾಣ; Video

ತಮಿಳುನಾಡಿನಲ್ಲಿ ಲಕ್ಷಾಂತರ ನಿರುದ್ಯೋಗಿಗಳು: ಅರ್ಜಿದಾರರ ವಾದ

ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿದಾರರ ಪರ ವಕೀಲರು, ತಮಿಳುನಾಡಿನಲ್ಲಿ ಸುಮಾರು 39 ಲಕ್ಷ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಅಲ್ಲದೆ, ಸರ್ಕಾರಿ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ ಎಂದು ವಾದಿಸಿದ್ದರು.

ನಿಯಮಿತ ನೇಮಕಾತಿ ಪ್ರಕ್ರಿಯೆಯನ್ನು ಬದಿಗೊತ್ತಿ ಕೆಲವರಿಗೆ ನೇರವಾಗಿ ಸರ್ಕಾರಿ ಉದ್ಯೋಗ ನೀಡುವುದು ಅನ್ಯಾಯವಾಗಿದ್ದು, ಇದು ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಇದೀಗ ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ, ಕರೂರ್ ಕಾಲ್ತುಳಿತ ಸಂತ್ರಸ್ತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡುವ ತಮಿಳುನಾಡು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ರಕ್ಷಣೆ ದೊರೆತಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com