‘ಸಮಸ್ಯೆ ಬಗೆಹರಿಸಿ, ಇಲ್ಲದಿದ್ದರೆ ಮತ್ತೆ ಪ್ರತಿಭಟನೆ!’: ಕೇಂದ್ರಕ್ಕೆ ಬಾಬಾ ರಾಮದೇವ್ ಖಡಕ್ ಎಚ್ಚರಿಕೆ

ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ‘ಗಪ್ಲಾ’ (ಹಗರಣ)ಗಳನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಬಹುದು ಮತ್ತು ತಾವೂ ಮತ್ತೆ ಪ್ರತಿಭಟನೆಗೆ ಇಳಿಯಬೇಕಾಗಬಹುದು..
Baba Ramdev Warns Centre Over 'Scams'
ಬಾಬಾ ರಾಮ್ ದೇವ್
Updated on

ಹರಿದ್ವಾರ: ಶಿಕ್ಷಣ ಮತ್ತು ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಗಳ ಕುರಿತು ಯೋಗಗುರು ಬಾಬಾ ರಾಮದೇವ್ ಅವರು ಶನಿವಾರ ನರೇಂದ್ರ ಮೋದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಶೀಘ್ರದಲ್ಲೇ ಈ ‘ಗಪ್ಲಾ’ (ಹಗರಣ)ಗಳನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಬಹುದು ಮತ್ತು ತಾವೂ ಮತ್ತೆ ಪ್ರತಿಭಟನೆಗೆ ಇಳಿಯಬೇಕಾಗಬಹುದು ಎಂದು ಅವರು ಹೇಳಿದ್ದಾರೆ.

ಆದರೆ ಜನರ ಹೋರಾಟ ಹಿಂಸಾಚಾರ ಮತ್ತು ಅರಾಜಕತೆಯ ರೂಪ ಪಡೆಯಬಾರದು ಎಂದು ಅವರು Gen Z ಯುವಕರಿಗೆ ಕರೆ ನೀಡಿದ್ದಾರೆ. ಪ್ರತಿಭಟನೆಗಳು ಸಂವಿಧಾನದ ಮಿತಿಯೊಳಗೇ ಇರಬೇಕು ಎಂದು ಅವರು ಹೇಳಿದ್ದಾರೆ.

80ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇಲ್ಲಿನ ಪತಂಜಲಿ ಯೋಗಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮದೇವ್, ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳ ಕೊರತೆಯ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರಿ ಉದ್ಯೋಗಗಳ ನೇಮಕಾತಿ ಪ್ರಕ್ರಿಯೆಯ ಮೇಲೂ ಭ್ರಷ್ಟಾಚಾರ ಮತ್ತು ಹಣದ ಪ್ರಭಾವ ಬೀರುತ್ತಿದೆ ಎಂದು ಅವರು ಆರೋಪಿಸಿದರು.

Baba Ramdev Warns Centre Over 'Scams'
'ರಕ್ತ ಕುದಿಯುವಂತಿದೆ': ಬಂಗಾಳದ ಶಾಲಾ ವಿದ್ಯಾರ್ಥಿ ಪರ ನಿಂತ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ

ಜಾತಿ ಮತ್ತು ಧರ್ಮದ ಆಧಾರದ ಮೇಲೆ ನೇಮಕಾತಿ

“ದೇಶದ ಎಲ್ಲೆಡೆ ಗೊಂದಲದ ಪರಿಸ್ಥಿತಿ ಇದೆ. ತಮ್ಮ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲ ಎಂದು ಮಕ್ಕಳು ದೂರುತ್ತಿದ್ದಾರೆ. ವಿದ್ಯುತ್, ನೀರು ಮತ್ತು ಶೌಚಾಲಯಗಳಂತಹ ಮೂಲ ಸೌಲಭ್ಯಗಳೇ ಇಲ್ಲ. ಕೆಲವೆಡೆ ಪರೀಕ್ಷೆಗಳಲ್ಲಿ ನಕಲು ನಡೆಯುತ್ತಿದ್ದರೆ, ಇನ್ನು ಕೆಲವೆಡೆ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತಿವೆ. ಸರ್ಕಾರಿ ಉದ್ಯೋಗಗಳ ಸಂದರ್ಶನಗಳಲ್ಲಿ ಶೇ.99ರಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಜಾತಿ ಮತ್ತು ಧರ್ಮದ ಆಧಾರದ ಮೇಲೆ ನೇಮಕಾತಿ ನಡೆಯುತ್ತಿದೆ. ಇದು ಅತ್ಯಂತ ಆಕ್ಷೇಪಾರ್ಹ ಮತ್ತು ಸಂವಿಧಾನ ವಿರೋಧಿ” ಎಂದು ಅವರು ಹೇಳಿದರು.

“ಒಂದೆಡೆ ನಾವು ‘ಸತ್ಯಮೇವ ಜಯತೇ’ ಮತ್ತು ‘ಯತೋ ಧರ್ಮಸ್ತತೋ ಜಯಃ’ ಎಂದು ಬೋಧಿಸುತ್ತೇವೆ. ಮತ್ತೊಂದೆಡೆ, ಒಂದು ಕೋಟಿ ರೂಪಾಯಿ ಲಂಚ ನೀಡಿದ ಬಳಿಕವೇ ನೇಮಕಾತಿ ನಡೆಯುತ್ತಿದೆ. ಎಲ್ಲರೂ ಪ್ರತಿಭಟನೆಗೆ ಇಳಿದರೆ ದೇಶ ಹೇಗೆ ನಡೆಯುತ್ತದೆ? ಆದ್ದರಿಂದ ನಿಮ್ಮ ಕ್ರಮಗಳನ್ನು ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದೆ,” ಎಂದು ಅವರು ಎಚ್ಚರಿಸಿದರು.

ಸರ್ಕಾರ ಈ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು. ಇಲ್ಲದಿದ್ದರೆ ತಾವೂ ಪ್ರತಿಭಟನೆ ಆರಂಭಿಸುವುದಾಗಿ ಯೋಗ ಗುರು ಬಾಬಾ ರಾಮ್ ದೇವ್ ಹೇಳಿದರು.

“ಪ್ರತಿಭಟನೆಯ ಹೆಸರಿನಲ್ಲಿ ಅರಾಜಕತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಾನು ಬೆಂಬಲಿಸುವುದಿಲ್ಲ. ಆದರೆ ದೇಶದಲ್ಲಿ ಸಾಕಷ್ಟು ‘ಗಪ್ಲಾ’ (ಹಗರಣಗಳು) ನಡೆಯುತ್ತಿವೆ ಎಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ದಯವಿಟ್ಟು ಈ ಸಮಸ್ಯೆಯನ್ನು ಬಗೆಹರಿಸಿ. ಇಲ್ಲದಿದ್ದರೆ ಬಾಬಾ ರಾಮದೇವ್ ಮತ್ತೆ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ಅವರು ಎಚ್ಚರಿಸಿದರು.

2011ರಲ್ಲಿ ದೆಹಲಿಯ ರಾಮಲೀಲಾ ಮೈದಾನದಲ್ಲಿ ಭ್ರಷ್ಟಾಚಾರದ ವಿರುದ್ಧ ತಾವು ನಡೆಸಿದ್ದ ಪ್ರತಿಭಟನೆಯನ್ನು ರಾಮದೇವ್ ಉಲ್ಲೇಖಿಸಿದರು. ಆ ಪ್ರತಿಭಟನೆ ಪೊಲೀಸ್ ಕಾರ್ಯಾಚರಣೆಯೊಂದಿಗೆ ಅಂತ್ಯಗೊಂಡಿತ್ತು. ಇದೇ ವೇಳೆ, ಭಾರತೀಯರ ನಡುವೆ ಹೆಚ್ಚುತ್ತಿರುವ ದ್ವೇಷದ ಬಗ್ಗೆಯೂ ರಾಮದೇವ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ವಿವಿಧ ಜಾತಿ ಮತ್ತು ಸಮುದಾಯಗಳ ಜನರು ಪರಸ್ಪರರ ವಿರುದ್ಧ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಅಂತಹ ಜನರಿಗೆ ನಾಚಿಕೆಯಾಗಬೇಕು

“ಇಂತಹ ಜನರಿಗೆ ನಾಚಿಕೆಯಾಗಬೇಕು! ಭಾರತೀಯರೆಂಬ ಹೆಸರಿನಲ್ಲಿ ಪರಸ್ಪರ ದ್ವೇಷಿಸುವ ಮತ್ತು ರಾಜಕೀಯ ಹಾಗೂ ಜಾತಿಯ ಆಧಾರದ ಮೇಲೆ ಒಬ್ಬರ ವಿರುದ್ಧ ಮತ್ತೊಬ್ಬರು ದ್ವೇಷ ಸಾಧಿಸುವವರನ್ನು ನಾನು ಖಂಡಿಸುತ್ತೇನೆ. ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು, ಶೂದ್ರರು, ದಲಿತರು, ಆದಿವಾಸಿಗಳು, ಅರಣ್ಯವಾಸಿಗಳು, ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರೈಸ್ತರು, ಜೈನರು ಮತ್ತು ಬೌದ್ಧರು ಪರಸ್ಪರರ ರಕ್ತಕ್ಕಾಗಿ ಹಾತೊರೆಯುವವರಂತೆ ಇಷ್ಟು ವೈರತ್ವದಿಂದ ಒಬ್ಬರ ವಿರುದ್ಧ ಮತ್ತೊಬ್ಬರು ನಿಲ್ಲುತ್ತಿರುವುದು ದುರದೃಷ್ಟಕರ,” ಎಂದು ಅವರು ಹೇಳಿದರು.

“ದೇಶಾದ್ಯಂತ ಇರುವ ದ್ವೇಷದ ಈ ಎಲ್ಲ ಗೋಡೆಗಳನ್ನು ನಾವು ಕೆಡವಬೇಕು. ಈ 80ನೇ ಸ್ವಾತಂತ್ರ್ಯ ದಿನದಂದು ‘ಒಡೆದು ಆಳುವ’ ನೀತಿಯನ್ನು ತಿರಸ್ಕರಿಸುವ ಮತ್ತು ಭಾರತವನ್ನು ಒಡೆಯುವುದನ್ನು, ದೇಶವನ್ನು ವಿಭಜಿಸುವುದನ್ನು ನಿಲ್ಲಿಸುವ ಸಂಕಲ್ಪ ಮಾಡೋಣ,” ಎಂದು ಅವರು ಕರೆ ನೀಡಿದರು.

ತಮ್ಮ ಹಕ್ಕುಗಳಿಗಾಗಿ ಹೋರಾಡುವಾಗ ಯುವಕರು ಕಾನೂನು ಮತ್ತು ಸಂವಿಧಾನವನ್ನು ಪಾಲಿಸಬೇಕು ಹಾಗೂ ಹಿಂಸಾಚಾರದಿಂದ ದೂರವಿರಬೇಕು ಎಂದು ರಾಮದೇವ್ ಹೇಳಿದರು.

“ಸ್ವಾತಂತ್ರ್ಯ ಎಂದರೆ ನಮ್ಮದೇ ವ್ಯವಸ್ಥೆ, ನಮ್ಮದೇ ಶಿಕ್ಷಣ, ಆರೋಗ್ಯ ವ್ಯವಸ್ಥೆ ಮತ್ತು ಆರ್ಥಿಕತೆಯನ್ನು ಹೊಂದಿರುವುದು. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ನಾಗರಿಕರ ಗೌರವ ಮತ್ತು ಸ್ವಾಭಿಮಾನಕ್ಕೆ ಆದ್ಯತೆ ನೀಡುವುದು. ನಾವು ಪರಸ್ಪರರ ವಿರುದ್ಧ ಹೋರಾಡಬಾರದು. ಮಕ್ಕಳು ಮತ್ತು ಯುವಕರು ಪರಸ್ಪರ ಹೊಡೆದಾಡಬಾರದು.

Gen Z ಯುವಕರು ಹೋರಾಟಗಾರರಾಗಲು ಹುಟ್ಟಿದವರಲ್ಲ. ಅವರು ಬೀದಿಗಳಲ್ಲಿ ಅರಾಜಕತೆ ಮತ್ತು ಕಾನೂನುಬಾಹಿರತೆಯನ್ನು ಹರಡಬಾರದು. ಹೌದು, ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕು. ನಮ್ಮ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ವಹಿಸಬೇಕು. ಆದರೆ ಇದೆಲ್ಲವನ್ನೂ ಪ್ರಜಾಸತ್ತಾತ್ಮಕ ಮತ್ತು ಸಾಂವಿಧಾನಿಕ ಮಿತಿಗಳನ್ನು ಗಮನದಲ್ಲಿಟ್ಟುಕೊಂಡೇ ಮಾಡಬೇಕು,” ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com