

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಲೀಕ್ ಪ್ರಕರಣದಲ್ಲಿ ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದರು. ಇದರೊಂದಿಗೆ ನೀಟ್ ಪರೀಕ್ಷೆ ಆಯೋಜನೆ ಮಾಡಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಸಂಪೂರ್ಣ ಟೀಮ್ ಅನ್ನೇ ಪುನರಚನೆ ಮಾಡಲಾಗಿತ್ತು. ಆದ್ರೂ ಕೂಡ NTA ಹಣೆಬರಹ ಬದಲಾದಂತೆ ಕಾಣುತ್ತಿಲ್ಲ! ಯಾಕಂದ್ರೆ, ಇದೇ ಸಂಸ್ಥೆ ಆಯೋಜನೆ ಮಾಡಿದ್ದ ಮತ್ತೊಂದು ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿ ದೋಷದ ಪರಿಣಾಮ, ಯುಜಿಸಿ-ನೆಟ್ 2026ರ ಮೂರು ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ಘೋಷಿಸಿದೆ. ಆ ಕುರಿತ ವರದಿ ಇಲ್ಲಿದೆ:
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಜೂನ್ 22 ರಿಂದ 30ರ ವೇಳೆಯಲ್ಲಿ ಆಯೋಜನೆ ಮಾಡಿದ್ದ ಯುಜಿಸಿ-ನೆಟ್ 2026ರ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ, ಹಲವು ತಪ್ಪುಗಳು ಮತ್ತು ಪುನರಾವರ್ತನೆಯಾದಂತಹ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಡೆಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ಅಭ್ಯರ್ಥಿಗಳಿಂದ ವ್ಯಾಪಕ ದೂರುಗಳು ಬಂದ ಹಿನ್ನೆಲೆಯಲ್ಲಿ NTA ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಮರುಪರೀಕ್ಷೆಯ ವೇಳಾಪಟ್ಟಿ
ಸೆಪ್ಟೆಂಬರ್ 9, 2026: ಇಂಗ್ಲಿಷ್ - ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 (ಶಿಫ್ಟ್ 1)
ಸೆಪ್ಟೆಂಬರ್ 9, 2026: ವಾಣಿಜ್ಯ - ಮಧ್ಯಾಹ್ನ 3:00 ರಿಂದ ಸಂಜೆ 6:00 (ಶಿಫ್ಟ್ 2)
ಸೆಪ್ಟೆಂಬರ್ 10, 2026: ಸಮಾಜಶಾಸ್ತ್ರ - ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:00 (ಶಿಫ್ಟ್ 1)
ಪ್ರಶ್ನೆಪತ್ರಿಕೆಯಲ್ಲಿದ್ದ ಪ್ರಮುಖ ದೋಷಗಳು:
NTA ರಚಿಸಿದ್ದ ತಜ್ಞರ ಸಮಿತಿಯು ಪರಿಶೀಲನೆ ನಡೆಸಿದಾಗ ಕೆಲವೊಂದು ದೋಷಗಳು ಪತ್ತೆಯಾಗಿವೆ:
ತಪ್ಪು ಹೆಸರುಗಳು: ಪ್ರಮುಖ ವಿದ್ವಾಂಸರ ಹೆಸರುಗಳು ತಪ್ಪಾಗಿ ಮುದ್ರಿತವಾಗಿದ್ದವು (ಉದಾಹರಣೆಗೆ: 'Ritzer' ಪದವನ್ನು 'Putzer' ಎಂದು, 'Parsons' ಪದವನ್ನು 'Parsow' ಎಂದು ಮುದ್ರಿಸಲಾಗಿತ್ತು).
ಭಾಷಾಂತರ ದೋಷಗಳು: ಪ್ರಶ್ನೆಗಳ ಕನ್ನಡ ಅಥವಾ ಇತರೆ ಭಾಷೆಯ ಅನುವಾದದಲ್ಲಿ ಗೊಂದಲಗಳಿದ್ದವು.
ಪ್ರಶ್ನೆಗಳ ಪುನರಾವರ್ತನೆ: ಇಂಗ್ಲಿಷ್ ಪತ್ರಿಕೆಯ 150 ಪ್ರಶ್ನೆಗಳಲ್ಲಿ ಬರೋಬ್ಬರಿ 67 ಪ್ರಶ್ನೆಗಳು ಹಿಂದಿನ ವರ್ಷದ (2024) ಪರೀಕ್ಷೆಯಿಂದ ನೇರವಾಗಿ ಪುನರಾವರ್ತನೆಯಾಗಿದ್ದವು.
ವ್ಯಾಕರಣ ತಪ್ಪುಗಳು: ಲಿಂಗ, ಸಂಖ್ಯೆ ಹಾಗೂ ವಿರಾಮಚಿಹ್ನೆಗಳ ಬಳಕೆಯಲ್ಲಿ ಸಾಲು ಸಾಲು ತಪ್ಪುಗಳಿದ್ದವು.
ಏತನ್ಮಧ್ಯೆ, ಈ ಮೂರು ವಿಷಯಗಳ ಮರುಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಂದ ಯಾವುದೇ ಹೆಚ್ಚುವರಿ ಪರೀಕ್ಷಾ ಶುಲ್ಕವನ್ನು ಪಡೆಯಲಾಗುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ. ಹಾಗಾಗಿ, ಉಳಿದ 84 ವಿಷಯಗಳ ತಾತ್ಕಾಲಿಕ ಕೀಲಿ ಉತ್ತರದ ಪಿಡಿಎಫ್‌ಗಳನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳ ಫಲಿತಾಂಶ ನಿಗದಿತ ಸಮಯದಲ್ಲೇ ಪ್ರಕಟವಾಗಲಿದೆ. ಈ ಮೂರು ವಿಷಯಗಳ ಮರುಪರೀಕ್ಷೆಯಿಂದಾಗಿ ಉಳಿದ ವಿಷಯಗಳ ಜೆಆರ್‌ಎಫ್ (JRF) ಮತ್ತು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪ್ರಮಾಣಪತ್ರ ವಿತರಣೆ ತಡವಾಗುವುದಿಲ್ಲ.