Somalia ಕರಾವಳಿಯಲ್ಲಿ ಹಡಗುಗಳ ಹೈಜಾಕ್: ಕಡಲ್ಗಳ್ಳರ ವಶದಲ್ಲಿದ್ದ 22 ಮಂದಿ ಭಾರತೀಯರು ಸೇಫ್; ಕೇಂದ್ರ ಸರ್ಕಾರ

ಮೊದಲ ಘಟನೆ ಕ್ಯಾಮರೂನ್ ಧ್ವಜ ಹೊಂದಿರುವ ಎಂವಿ ಲುತುಫ್ ಹಡಗಿಗೆ ಸಂಬಂಧಿಸಿದೆ. ಆ.17ರಂದು ಸೊಮಾಲಿಯಾದ ಪುಂಟ್‌ಲ್ಯಾಂಡ್ ಕರಾವಳಿ ಬಳಿ ಹಡಗನ್ನು ಅಪಹರಿಸಲಾಗಿದ್ದು, ಅದರಲ್ಲಿದ್ದ 10 ಸಿಬ್ಬಂದಿಯಲ್ಲಿ ಆರು ಮಂದಿ ಭಾರತೀಯರಾಗಿದ್ದರು.
File photo
ಸಂಗ್ರಹ ಚಿತ್ರ
Updated on

ನವದೆಹಲಿ: ಗಲ್ಫ್ ಆಫ್ ಅಡೆನ್ ಮತ್ತು ಸೊಮಾಲಿಯಾ ಕರಾವಳಿಯಲ್ಲಿ ಇತ್ತೀಚೆಗೆ ಅಪಹರಣಕ್ಕೊಳಗಾಗಿದ್ದ ಎರಡು ವಾಣಿಜ್ಯ ಹಡಗುಗಳಲ್ಲಿದ್ದ ಎಲ್ಲಾ 22 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಕೀನ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಕುರಿತು ಸೊಮಾಲಿಯಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಭಾರತೀಯ ನಾವಿಕರ ಸುರಕ್ಷತೆ ಮತ್ತು ಕ್ಷೇಮವೇ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದೆ.

“ಎಂಟಿಟಿ ಸಿಬು (MT Sibu) ಮತ್ತು ಎಂವಿ ಲುತುಫ್ (MV Lutuf) ಹಡಗುಗಳಲ್ಲಿರುವ ಭಾರತೀಯ ನಾವಿಕರ ವಿಚಾರವನ್ನು ಸೊಮಾಲಿಯಾದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದ್ದೇವೆ. ಎಂಟಿಟಿ ಸಿಬುನಲ್ಲಿ 16 ಭಾರತೀಯ ನಾವಿಕರು ಹಾಗೂ ಎಂವಿ ಲುತುಫ್‌ನಲ್ಲಿ 6 ಭಾರತೀಯ ನಾವಿಕರು ಇದ್ದಾರೆ ಎಂದು ತಿಳಿದುಬಂದಿದೆ. ಎಲ್ಲ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ” ಎಂದು ರಾಯಭಾರ ಕಚೇರಿ ಹೇಳಿದೆ.

ಮೊದಲ ಘಟನೆ ಕ್ಯಾಮರೂನ್ ಧ್ವಜ ಹೊಂದಿರುವ ಎಂವಿ ಲುತುಫ್ ಹಡಗಿಗೆ ಸಂಬಂಧಿಸಿದೆ. ಆ.17ರಂದು ಸೊಮಾಲಿಯಾದ ಪುಂಟ್‌ಲ್ಯಾಂಡ್ ಕರಾವಳಿ ಬಳಿ ಹಡಗನ್ನು ಅಪಹರಿಸಲಾಗಿದ್ದು, ಅದರಲ್ಲಿದ್ದ 10 ಸಿಬ್ಬಂದಿಯಲ್ಲಿ ಆರು ಮಂದಿ ಭಾರತೀಯರಾಗಿದ್ದರು.

ಎಕೆ-47 ಮಾದರಿಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಎನ್ನಲಾದ ಎಂಟು ಶಸ್ತ್ರಸಜ್ಜಿತ ಕಡಲ್ಗಳ್ಳರು ಎರಡು ಸಣ್ಣ ದೋಣಿಗಳ ಮೂಲಕ ಹಡಗನ್ನು ಹತ್ತಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.

File photo
Yemen, Somalia ಕರಾವಳಿಯಲ್ಲಿ ಕಡಲ್ಗಳ್ಳರ ಅಟ್ಟಹಾಸ: 22 ಮಂದಿ ಭಾರತೀಯರಿದ್ದ 2 ಹಡಗುಗಳ ಅಪಹರಣ..!

ಪುಂಟ್‌ಲ್ಯಾಂಡ್‌ನ ಈಲ್ ಜಿಲ್ಲೆಯ ಮರಯ್ಯಾ ಪ್ರದೇಶದಿಂದ ಸುಮಾರು ಮೂರೂವರೆ ನಾಟಿಕಲ್ ಮೈಲು ದೂರದಲ್ಲಿ ಹಡಗನ್ನು ವಶಪಡಿಸಿಕೊಂಡು, ಬಳಿಕ ಸೊಮಾಲಿಯಾದ ನುಗಾಲ್ ಕರಾವಳಿ ಕಡೆಗೆ ಕೊಂಡೊಯ್ದಿದ್ದಾರೆ ಎನ್ನಲಾಗಿದೆ.

ಕಡಲ್ಗಳ್ಳರ ದಾಳಿ ಆರಂಭವಾದಾಗ ಸಿಬ್ಬಂದಿ ಹಡಗಿನ ಸುರಕ್ಷಿತ ಕೊಠಡಿ (ಸಿಟಾಡೆಲ್)ನಲ್ಲಿ ಆಶ್ರಯ ಪಡೆದಿದ್ದರು. ಕಡಲ್ಗಳ್ಳರ ದಾಳಿಯ ಸಂದರ್ಭದಲ್ಲಿ ಸಿಬ್ಬಂದಿಯನ್ನು ರಕ್ಷಿಸಲು ಈ ಸುರಕ್ಷಿತ ಪ್ರದೇಶವನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಆದರೆ, ಬಳಿಕ ಕಡಲ್ಗಳ್ಳರು ಸಿಟಾಡೆಲ್‌ಗೂ ಪ್ರವೇಶಿಸಿದ್ದಾರೆ ಎನ್ನಲಾಗಿದೆ.

ಹಡಗಿನ ಸಿಬ್ಬಂದಿಯಲ್ಲಿ ಆರು ಭಾರತೀಯರ ಜೊತೆಗೆ ಟರ್ಕಿ, ಜಾರ್ಜಿಯಾ ಮತ್ತು ಸರ್ಬಿಯಾ ದೇಶಗಳ ಪ್ರಜೆಗಳೂ ಇದ್ದರು. ಇಬ್ಬರು ಸರ್ಬಿಯಾ ಪ್ರಜೆಗಳು ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.

ಮೊದಲ ಹಡಗು ಮೊಗಾದಿಶುವಿನಲ್ಲಿರುವ ಟರ್ಕಿ ಸೇನಾ ತರಬೇತಿ ಕೇಂದ್ರಕ್ಕೆ ಕೊಂಡೊಯ್ಯಲಾಗುತ್ತಿದ್ದ ಟರ್ಕಿ ನಿರ್ಮಿತ ಶಸ್ತ್ರಾಸ್ತ್ರಗಳು, ಸಂವಹನ ಸಾಧನಗಳು ಮತ್ತು ಉಪಗ್ರಹ ಉಪಕರಣಗಳನ್ನು ಸಾಗಿಸುತ್ತಿತ್ತು ಎಂದು ವರದಿಯಾಗಿದೆ.

ಇನ್ನು ಎರಡನೇ ಘಟನೆ ಎರಿಟ್ರಿಯಾ ಧ್ವಜ ಹೊಂದಿರುವ ತೈಲ ಉತ್ಪನ್ನಗಳ ಸಾಗಣೆ ಹಡಗು ಎಂಟಿ ಸಿಬು 1, ಮತ್ತೊಂದು ಹೆಸರಿನಲ್ಲಿ ಸೀಮುಲ್ (Seamull),ಗೆ ಸಂಬಂಧಿಸಿದೆ. 20 ಸಿಬ್ಬಂದಿಯನ್ನು ಹೊತ್ತಿದ್ದ ಈ ಹಡಗಿನಲ್ಲಿ 16 ಭಾರತೀಯರು ಇದ್ದರು.

ಆ.20ರಂದು ಏಡನ್ ಕೊಲ್ಲಿಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ಹಡಗನ್ನು ಹತ್ತಿ, ಅದರ ದಿಕ್ಕನ್ನು ಸೊಮಾಲಿಯಾ ಕಡೆಗೆ ಬದಲಾಯಿಸುವಂತೆ ಒತ್ತಾಯಿಸಿದ ಬಳಿಕ ಹಡಗಿನಿಂದ ತುರ್ತು ಸಂದೇಶ ರವಾನಿಸಲಾಗಿದೆ. ಸುಮಾರು ಆರು ಮಂದಿ ಶಸ್ತ್ರಸಜ್ಜಿತ ಕಡಲ್ಗಳ್ಳರು ಹಡಗಿನ ನಿಯಂತ್ರಣವನ್ನು ವಹಿಸಿಕೊಂಡಿದ್ದರು ಎನ್ನಲಾಗಿದೆ.

ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಭಾರತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಿದ್ದಾರೆ.

ಎರಡು ವಿದೇಶಿ ಧ್ವಜ ಹೊಂದಿರುವ ಹಡಗುಗಳು ಈ ಘಟನೆಗಳಲ್ಲಿ ಸಿಲುಕಿವೆ. ಒಂದು ಹಡಗಿನಲ್ಲಿ 16 ಭಾರತೀಯರು ಹಾಗೂ ಮತ್ತೊಂದರಲ್ಲಿ ಆರು ಭಾರತೀಯರು ಇದ್ದಾರೆ. ನಾವು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ” ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com