

ನವದೆಹಲಿ: ರವಿಶಂಕರ್ ನೇತೃತ್ವದ 'ಆರ್ಟ್ ಆಫ್ ಲಿವಿಂಗ್' ಫೌಂಡೇಶನ್‌ಗೆ ಸುಪ್ರೀಂಕೋರ್ಟ್ ಶನಿವಾರ ಬಿಗ್ ರಿಲೀಫ್ ನೀಡಿದೆ. ದೆಹಲಿಯ ಪರಿಸರ ಸೂಕ್ಷ್ಮ ಯಮುನಾ ನದಿ ಪಾತ್ರದ ಪ್ರದೇಶಕ್ಕೆ (floodplains) ಹಾನಿ ಉಂಟುಮಾಡಿದ ಆರೋಪದ ಮೇರೆಗೆ 2016ರಲ್ಲಿ ನಡೆದ ವಿವಾದಾತ್ಮಕ ವಿಶ್ವ ಸಂಸ್ಕೃತಿ ಉತ್ಸವ ಕಾರ್ಯಕ್ರಮಕ್ಕೆ ಪಾವತಿಸಿದ್ದ 5 ಕೋಟಿ ರೂ. ದಂಡದ ಮೊತ್ತವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮರುಪಾವತಿಸುವಂತೆ ಮಹತ್ವದ ಆದೇಶ ಪ್ರಕಟಿಸಿದೆ.
ವಿಶ್ವ ಸಂಸ್ಕೃತಿ ಉತ್ಸವ ಯಮುನಾ ನದಿಯ ಸೂಕ್ಷ್ಮ ಪರಿಸರ ವ್ಯವಸ್ಥೆಗೆ ಹಾನಿ ಉಂಟುಮಾಡಿದೆ ಎಂಬುದಕ್ಕೆ ಯಾವುದೇ ನೇರ ಸಾಕ್ಷ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. 'ಆರ್ಟ್ ಆಫ್ ಲಿವಿಂಗ್'ನ ಆಶ್ರಯದಲ್ಲಿರುವ ನೋಂದಾಯಿತ ಸಾರ್ವಜನಿಕ ಧರ್ಮದತ್ತಿ ಸಂಸ್ಥೆಯಾದ 'ವ್ಯಕ್ತಿ ವಿಕಾಸ್ ಕೇಂದ್ರ'ವು ಪಾವತಿಸಿದ್ದ ದಂಡದ ಹಣವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರವು (DDA) ಮರುಪಾವತಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.
2016ರ ಮಾರ್ಚ್‌ನಲ್ಲಿ ನಡೆದಿದ್ದ "ವಿಶ್ವ ಸಂಸ್ಕೃತಿ ಉತ್ಸವ"ದ (World Culture Festival) ಸಿದ್ಧತೆಗಳ ಸಂದರ್ಭದಲ್ಲಿ ಯಮುನಾ ನದಿ ಪಾತ್ರದ ಪ್ರದೇಶಕ್ಕೆ ಹಾನಿ ಉಂಟುಮಾಡಿದ್ದಕ್ಕಾಗಿ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯನ್ನು ಹೊಣೆಗಾರರನ್ನಾಗಿಸಿ, ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ (NGT) ಡಿಸೆಂಬರ್ 2017ರಲ್ಲಿ ಈ ದಂಡವನ್ನು ವಿಧಿಸಿತ್ತು.
ಆರ್ಟ್ ಆಫ್ ಲಿವಿಂಗ್'ಗೆ ಬಿಗ್ ರಿಲೀಫ್ ನೀಡುವ ಸಂದರ್ಭದಲ್ಲಿ, ಯಮುನಾ ನದಿ ಪಾತ್ರದ ಪ್ರದೇಶವನ್ನು ರಕ್ಷಿಸುವ ತನ್ನ ಕರ್ತವ್ಯವನ್ನು ನಿರ್ವಹಿಸುವಲ್ಲಿ ಡಿಡಿಎ (DDA) ವಿಫಲವಾಗಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿತು. ಅಲ್ಲದೆ, ಎನ್‌ಜಿಟಿ (NGT) ನಿರ್ದೇಶಿಸಿದಂತೆ ಯಮುನಾ ನದಿ ಪಾತ್ರದ ಪ್ರದೇಶದ ಪುನಶ್ಚೇತನ ಕಾರ್ಯವನ್ನು ಮುಂದುವರಿಸುವಂತೆಯೂ ನಗರ ಯೋಜನೆ ಮತ್ತು ಅಭಿವೃದ್ಧಿ ಸಂಸ್ಥೆಗೆ ನ್ಯಾಯಾಲಯ ಸೂಚನೆ ನೀಡಿದೆ.
ಪೂರ್ಣ ದಂಡದ ಮೊತ್ತವನ್ನು ಪಾವತಿಸಲು ಒಪ್ಪಿಕೊಂಡ ನಂತರ, ಯಮುನಾ ನದಿಯ ದಡದಲ್ಲಿ ತಮ್ಮ ಬೃಹತ್ ಕಾರ್ಯಕ್ರಮವನ್ನು ನಡೆಸಲು 'ಆರ್ಟ್ ಆಫ್ ಲಿವಿಂಗ್'ಗೆ ಪರಿಸರ ಸಮಿತಿಯು ಅನುಮತಿ ನೀಡಿತ್ತು. 2016ರ ಮಾರ್ಚ್ 11 ರಿಂದ-13ರವರೆಗೂ ಈ ಕಾರ್ಯಕ್ರಮ ನಡೆದಿತ್ತು. ವಿಶ್ವ ಸಂಸ್ಕೃತಿ ಉತ್ಸವ"ದ (World Culture Festival) ಉದ್ಘಾಟನಾ ದಿನವಾದ 2016ರ ಮಾರ್ಚ್ 11ರಂದು, ಒಟ್ಟು ಮೊತ್ತ ಪಾವತಿಸಲು ನಾಲ್ಕು ವಾರಗಳ ಕಾಲಾವಕಾಶ ಕೋರಿ ಆಯೋಜಕರು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು (NGT) ಸಂಪರ್ಕಿಸಿದ್ದರು.
ಆ ದಿನವೇ 25 ಲಕ್ಷ ರೂಪಾಯಿಗಳನ್ನು ಪಾವತಿಸಲು ಸಂಸ್ಥೆಗೆ ಅನುಮತಿ ನೀಡಿದ ನ್ಯಾಯಮಂಡಳಿಯು, ಉಳಿದ ಮೊತ್ತವನ್ನು ಪಾವತಿಸಲು ಮೂರು ವಾರಗಳ ಕಾಲಾವಕಾಶವನ್ನು ನೀಡಿತ್ತು. ಆ ಸಮಯದಲ್ಲಿ 25 ಲಕ್ಷ ರೂಪಾಯಿಗಳನ್ನು ಪಾವತಿಸಲಾಯಿತಾದರೂ, ನಂತರ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ತಾವು ಪಾವತಿಸಬೇಕಿದ್ದ 4.75 ಕೋಟಿ ರೂಪಾಯಿಗಳನ್ನು "ಬಾಕಿ ಮೊತ್ತದ ಪಾವತಿ"ಯ ಬದಲಾಗಿ "ಬ್ಯಾಂಕ್ ಗ್ಯಾರಂಟಿ"ಯಾಗಿ ಪರಿಗಣಿಸಬೇಕು ಮತ್ತು ಆ ಹಣವನ್ನು ಆ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನವನ್ನು ಸ್ಥಾಪಿಸಲು ಬಳಸಬೇಕು ಎಂದು ಕೋರಿತು.
ಅಂತಿಮವಾಗಿ ದಂಡದ ಮೊತ್ತವನ್ನು ಪೂರ್ಣವಾಗಿ ಪಾವತಿಸಲಾಯಿತಾದರೂ, ನಂತರ 'ಆರ್ಟ್ ಆಫ್ ಲಿವಿಂಗ್' ಸಂಸ್ಥೆಯು ಸುಪ್ರೀಂ ಕೋರ್ಟ್‌ನಲ್ಲಿ ಎನ್‌ಜಿಟಿ (NGT) ತೀರ್ಪನ್ನು ಪ್ರಶ್ನಿಸಿತು. ಇದು ದೀರ್ಘಕಾಲದ ಕಾನೂನು ಹೋರಾಟಕ್ಕೆ ನಾಂದಿ ಹಾಡಿತು. ಈಗ ಮಹತ್ವದ ಆದೇಶ ಹೊರಬಿದ್ದಿದ್ದು, ಆರ್ಟ್ ಆಫ್ ಲಿವಿಂಗ್ ಸಂಸ್ಥೆಗೆ ಬಿಗ್ ರಿಲೀಫ್ ಸಿಕ್ಕಿದೆ.