

ನವದೆಹಲಿ: ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ಪಾಸ್ ಪ್ರಿಂಟ್ ತೆಗೆದುಕೊಳ್ಳುವ, ಐಡಿ ಕಾರ್ಡ್ ಹುಡುಕುವ ಟೆನ್ಷನ್ ಇನ್ನು ಮುಗಿದಂತೆ. ಇನ್ಮುಂದೆ ನಿಮ್ಮ ಮುಖವೇ ನಿಮ್ಮ ಬೋರ್ಡಿಂಗ್ ಪಾಸ್. ಯಾಕಂದ್ರೆ, ಭಾರತದಲ್ಲಿ ಪೇಪರ್ ಲೆಸ್ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಬ್ಯೂರೋ ಆಫ್ ಇಮಿಗ್ರೇಷನ್, ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸೆಪ್ಟೆಂಬರ್ 1, 2026 ರಿಂದ ಭೌತಿಕ ಬೋರ್ಡಿಂಗ್ ಪಾಸ್ ಹೊಂದುವ ಮತ್ತು ಅದಕ್ಕೆ ಸೀಲ್ ಹಾಕಿಸುವ ಕಡ್ಡಾಯ ನಿಯಮವನ್ನು ಕೊನೆಗೊಳಿಸಲಾಗುತ್ತಿದೆ. ಅದರಂತೆ, ಇನ್ನು ಕೈಯಲ್ಲಿ ಕಾಗದ ಬೇಡ, ಮೊಬೈಲ್ ನಲ್ಲೇ ಎಲ್ಲವೂ ಮುಗಿಯಲಿದೆ. ಆ ಕುರಿತ ವರದಿ ಇಲ್ಲಿದೆ:
ಹೊಸ ನಿಯಮದ ಪ್ರಮುಖ ಅಂಶಗಳು:
ಇ-ಬೋರ್ಡಿಂಗ್ ಪಾಸ್ ಬಳಕೆ: ಪ್ರಯಾಣಿಕರು ಇನ್ನು ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಡಿಜಿಟಲ್ ಇ-ಬೋರ್ಡಿಂಗ್ ಪಾಸ್ ಅನ್ನು ವಲಸೆ ಕೌಂಟರ್‌ಗಳಲ್ಲಿ ತೋರಿಸಿ ಕ್ಲಿಯರೆನ್ಸ್ ಪಡೆಯಬಹುದು.
ಸೀಲ್ ಅಥವಾ ಸ್ಟಾಂಪಿಂಗ್ ಇರುವುದಿಲ್ಲ: ವಲಸೆ ಅಧಿಕಾರಿಗಳು ಇನ್ನು ಮುಂದೆ ಬೋರ್ಡಿಂಗ್ ಪಾಸ್‌ಗಳ ಮೇಲೆ ಯಾವುದೇ ಭೌತಿಕ ಸ್ಟಾಂಪ್ ಅಥವಾ ಸೀಲ್ ಹಾಕುವುದಿಲ್ಲ.
ಕಾಗದದ ಪಾಸ್ ಕೂಡ ಲಭ್ಯ: ಯಾರಾದರೂ ಹಳೆಯ ಪದ್ಧತಿಯಂತೆ ಮುದ್ರಿತ ಬೋರ್ಡಿಂಗ್ ಪಾಸ್ ತಂದರೂ ಅದನ್ನು ಸ್ವೀಕರಿಸಲಾಗುತ್ತದೆ. ಆದರೆ ಅದಕ್ಕೂ ಅಧಿಕಾರಿಗಳು ಯಾವುದೇ ಸೀಲ್ ಹಾಕುವುದಿಲ್ಲ.
ಬದಲಾವಣೆಗೆ ಕಾರಣವೇನು?
ಕಡ್ಡಾಯವಾಗಿ ಕಾಗದದ ಬೋರ್ಡಿಂಗ್ ಪಾಸ್ ಇಟ್ಟುಕೊಳ್ಳುವುದು ಮತ್ತು ಅದಕ್ಕೆ ಸೀಲ್ ಹಾಕಿಸಲು ಕೌಂಟರ್‌ಗಳಲ್ಲಿ ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಯಾಕಂದ್ರೆ, ಹಳೆಯ ಪದ್ಧತಿಯಲ್ಲಿ ಬೋರ್ಡಿಂಗ್ ಪಾಸ್ ಮೇಲೆ ಸರಿಯಾಗಿ ಅಥವಾ ಸ್ಪಷ್ಟವಾಗಿ ಸೀಲ್ ಬೀಳದಿದ್ದಾಗ, ತಾಂತ್ರಿಕವಾಗಿ ಅದನ್ನು ರೀಡ್ ಮಾಡಲು (ಓದಲು) ಕಷ್ಟವಾಗುತ್ತಿತ್ತು. ಇದು ಪ್ರಯಾಣಿಕರ ಗೊಂದಲಕ್ಕೂ ಕಾರಣವಾಗುತ್ತಿತ್ತು. ಇದರೊಂದಿಗೆ, ಭಾರತದ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಸಂಪೂರ್ಣವಾಗಿ ಡಿಜಿಟಲ್ ಮತ್ತು ಕಾಗದರಹಿತವಾಗಿಸುವ ಗುರಿಯನ್ನು ಇದು ಹೊಂದಿದೆ. ಅದರಲ್ಲೂ, ದೇಶೀಯ ಪ್ರಯಾಣದಲ್ಲಿ ಈಗಾಗಲೇ ಇರುವ ಡಿಜಿ ಯಾತ್ರೆ ಯಶಸ್ಸಿನ ಬೆನ್ನಲ್ಲೇ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರಯಾಣಿಕರಿಗೆ ಆಗುವ ಲಾಭವೇನು?
ಭೌತಿಕ ಬೋರ್ಡಿಂಗ್ ಅಂತ್ಯದಿಂದ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯವಾಗಲಿದೆ. ಪೇಪರ್ ಕಳೆದುಹೋಗುವ ಅಥವಾ ಹರಿದು ಹೋಗುವ ಭಯ ಇರುವುದಿಲ್ಲ. ಪರಿಸರಕ್ಕೂ ಇದು ದೊಡ್ಡ ಕೊಡುಗೆ. ಕೋಟ್ಯಂತರ ಪೇಪರ್ ಬಳಕೆ ತಪ್ಪುತ್ತದೆ. ಜೊತೆಗೆ ಭದ್ರತಾ ತಪಾಸಣೆಯೂ ಇನ್ನಷ್ಟು ವೇಗವಾಗಿ ಮತ್ತು ಸುರಕ್ಷಿತವಾಗಿ ನಡೆಯಲಿದೆ. ವಿಮಾನ ನಿಲ್ದಾಣಗಳಲ್ಲಿನ ದಟ್ಟಣೆ ಶೇಕಡ 30 ರಷ್ಟು ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಏತನ್ಮಧ್ಯೆ, ಬೋರ್ಡಿಂಗ್ ಪಾಸ್ ಸ್ಟಾಂಪಿಂಗ್ ನಿಲ್ಲಿಸಿದ ನಂತರ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಪಾಸ್‌ಪೋರ್ಟ್ ಮೇಲಿನ ವಲಸೆ ಎಂಟ್ರಿ ಮತ್ತು ಎಕ್ಸಿಟ್ ಸ್ಟಾಂಪ್‌ಗಳನ್ನು ಸಹ ಕೊನೆಗೊಳಿಸಲು ಸರ್ಕಾರ ಪ್ರಾಯೋಗಿಕ ಯೋಜನೆ ನಡೆಸುತ್ತಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಮೇಲೂ ಸೀಲ್ ಹಾಕುವ ಪ್ರಕ್ರಿಯೆ ಸಂಪೂರ್ಣ ನಿಲ್ಲಲಿದೆ.