

ವೆಚೂಚಿ: ಬಿರಿಯಾನಿ ಮಳಿಗೆಯೊಂದರ ಆಹಾರ ಸೇವಿಸಿದ ನಂತರ ಅನಾರೋಗ್ಯಕ್ಕೀಡಾದೆ ಎಂದು ಆರೋಪಿಸಿದ ಮಹಿಳೆಗೆ 96,500 ರೂ.ಗಳನ್ನು ಜಂಟಿಯಾಗಿ ಪಾವತಿಸುವಂತೆ ಆ ಮಳಿಗೆಯ ಮಾಲೀಕರು ಮತ್ತು ವ್ಯವಸ್ಥಾಪಕರಿಗೆ ಕೇರಳದ ಗ್ರಾಹಕ ಪರಿಹಾರ ಆಯೋಗವು ನಿರ್ದೇಶನ ನೀಡಿದೆ.
ಕಿಂಗ್ಸ್ ಬಿರಿಯಾನಿ ಕೆಫೆ'ಯ ಮಾಲೀಕ ಆಶಿಶ್ ಜಾನ್ ಮ್ಯಾಥ್ಯೂ ಮತ್ತು ರಾನ್ನಿಯಲ್ಲಿರುವ ಅದರ ವ್ಯವಸ್ಥಾಪಕರಿಗೆ (ಪ್ರತಿವಾದಿಗಳು) ಈ ಮೊತ್ತವನ್ನು ಪಾವತಿಸುವಂತೆ ಪಥನಮತಿಟ್ಟ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಇದರಲ್ಲಿ ಆಸ್ಪತ್ರೆ ವೆಚ್ಚಕ್ಕಾಗಿ 36,500 ರೂ. ಪರಿಹಾರವಾಗಿ 50,000 ರೂ ಮತ್ತು ಕಾನೂನು ಹೋರಾಟದ ವೆಚ್ಚಕ್ಕಾಗಿ 10,000 ರೂ. ಸೇರಿವೆ. ಈ ಮೊತ್ತವನ್ನು 30 ದಿನಗಳೊಳಗೆ ಪಾವತಿಸಬೇಕಾಗಿದೆ.
ವೆಚೂಚಿರಾದ ರೀನಾ ಥಾಮಸ್ ಅವರು ಈ ದೂರು ದಾಖಲಿಸಿದ್ದರು. ಅಕ್ಟೋಬರ್ 21, 2025 ರಂದು ತಾವು ಮತ್ತು ತಮ್ಮ ಸಹೋದರಿ ರಾನ್ನಿಯ ಚೆಥೋನ್ಕರಾದಲ್ಲಿರುವ ಕೆಫೆಗೆ ಭೇಟಿ ನೀಡಿ, ಅರೇಬಿಯನ್ ಖಾದ್ಯವಾದ 'ಅಲ್ಫಾಹಮ್' ಅನ್ನು ಆರ್ಡರ್ ಮಾಡಿದ್ದಾಗಿ ಅವರು ತಿಳಿಸಿದ್ದರು.
ದೂರಿನ ಪ್ರಕಾರ, ಊಟ ಆರಂಭಿಸಿದ ತಕ್ಷಣವೇ ರುಚಿಯಲ್ಲಿ ವ್ಯತ್ಯಾಸವಿರುವುದನ್ನು ಗಮನಿಸಿದ ಅವರು, ವೇಟರ್‌ಗೆ ಆ ವಿಷಯ ತಿಳಿಸಿದ್ದಾರೆ. ಆದರೆ, ಆಹಾರದಲ್ಲಿ ಯಾವುದೇ ದೋಷವಿಲ್ಲ ಮತ್ತು ಅದು ಕೇವಲ ಅವರ ಭ್ರಮೆ ಎಂದು ವೇಟರ್ ಹೇಳಿದರೆಂದು ಆರೋಪಿಸಲಾಗಿದೆ.
ತಮ್ಮ ಸಹೋದರಿ ಆಹಾರವನ್ನು ಹೆಚ್ಚು ಸೇವಿಸಲಿಲ್ಲ ಮತ್ತು ಉಳಿದ ಭಾಗವನ್ನು ಪ್ಯಾಕ್ ಮಾಡಿಸಲಾಯಿತು ಎಂದು ಥಾಮಸ್ ತಿಳಿಸಿದ್ದಾರೆ. ಅವರು ಡೆಬಿಟ್ ಕಾರ್ಡ್ ಮೂಲಕ 740 ರೂ.ಗಳ ಬಿಲ್ ಪಾವತಿಸಿದ್ದರು. ಮನೆಗೆ ಮರಳುವಾಗ ತಮಗೆ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿತು.
ತದ ನಂತರ ತಲೆತಿರುಗುವಿಕೆ, ವಾಂತಿ, ಅಸ್ವಸ್ಥತೆ ಹೆಚ್ಚಾಗಿದ್ದರಿಂದ ವೆಚೂಚಿರಾದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆಯಲಾಯಿತು. ಆದರೆ ರೋಗಲಕ್ಷಣಗಳು ಮುಂದುವರಿದಿದ್ದರಿಂದ ನಂತರ ಕಂಜಿರಪಳ್ಳಿಯ ಮತ್ತೊಂದು ಆಸ್ಪತ್ರೆಗೆ ದಾಖಲಾಯಿತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ಒಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದದ್ದು, ಸರಿಯಾಗಿ ಬೇಯಿಸದ ಅಥವಾ ಹಳಸಲು ಆಹಾರವನ್ನು ಸೇವಿಸಿದ್ದರಿಂದ 'ಸಾಲ್ಮೊನೆಲ್ಲಾ' ಸೋಂಕು ಉಂಟಾಗಿದೆ ಎಂದು ವೈದ್ಯರು ಅವರಿಗೆ ತಿಳಿಸಿರುವುದಾಗಿ ದೂರಿನಲ್ಲಿ ಆರೋಪಿಸಿದ್ದರು.