

ಮುಂಬೈ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ ಖಾವ್ಡಾ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ 18 ವರ್ಷದ ಮಗನನ್ನು ರಕ್ಷಿಸಲು ಹೋಗಿ ಹೆತ್ತ ಪೋಷಕರೂ ಪ್ರಾಣ ಕಳೆದುಕೊಂಡ ಘಟನೆ ಇದೀಗ ರೋಚಕ ತಿರುವುದು ಪಡೆದುಕೊಂಡಿದೆ.
ಹದಿನೆಂಟು ವರ್ಷದ ಕುನಾಲ್ ಚಂದಗುಡೆ ತಾನು ಖರೀದಿಸಿದ್ದ ಐಫೋನ್‌ನ ಇಎಂಐ ಪಾವತಿಸಲು ಸಾಧ್ಯವಾಗದೆ, ಮನೆಯವರ ಬಳಿ ಹಣದ ಸಹಾಯ ಕೇಳಿದ್ದ.ಆದರೆ, ಮನೆಯವರು ಇದಕ್ಕೆ ಒಪ್ಪದಿದ್ದರಿಂದ ಕುನಾಲ್ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ರಕ್ಷಿಸಲು ಹೋದ ತಂದೆ ಕೂಡ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ಕಣ್ಣಾರೆ ಕಂಡ ತಾಯಿ ಸಂಗೀತಾ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಬರೀ ಐಫೋನ್ ಇಎಂಐ ಸಂಬಂಧ ಈ ದುರಂತ ನಡೆದಿಲ್ಲವೆಂದು ಮೃತ ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್ ಅವರು ಹೇಳಿದ್ದು, ಐಫೋನ್ EMI ಅನ್ನೋದೇ ಬರೀ ಕಟ್ಟು ಕಥೆ ಎಂದು ಬಹಿರಂಗಪಡಿಸಿದ್ದಾರೆ.
ಸಂಗೀತಾ ಅವರ ಸಹೋದರಿ ಪಲ್ಲವಿ ಪಾಟೀಲ್, ಐಫೋನ್ ಅನ್ನೋದು ಕೇವಲ "ಕಟ್ಟು ಕಥೆ" ಎಂದು ಹೇಳಿದ್ದು, ಅಂತಹ ಕಥೆಗಳನ್ನು ಹರಡುವ ಜನರಿಗೆ "ಏನೂ ಗೊತ್ತಿಲ್ಲ". ದಯವಿಟ್ಟು ಇಂತಹ ಸುಳ್ಳು ಸುದ್ದಿಗಳನ್ನು ಹರಡಬೇಡಿ ಎಂದು ಅವರು ಮನವಿ ಮಾಡಿದ್ದಾರೆ.
ಸಹೋದರಿ, ಸೋದರಳಿಯ ಹಾಗೂ ಭಾವನನ್ನು ಕಳೆದುಕೊಂಡ ನೋವಿನಲ್ಲಿರುವ ಪಲ್ಲವಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಕುಟುಂಬಕ್ಕೆ ಮತ್ತಷ್ಟು ನೋವುಂಟು ಮಾಡುತ್ತಿವೆ ಎಂದು ಹೇಳಿದ್ದಾರೆ.
ನಿಮಗೆ ನಮ್ಮ ಕುಟುಂಬದ ಬಗ್ಗೆ ಏನೂ ಗೊತ್ತಿಲ್ಲ. ಘಟನೆ ಹಿಂದೆ ಏನಿದೆ ಎಂಬುದೂ ಗೊತ್ತಿಲ್ಲ. ಆದರೂ ನಿಮ್ಮ ಅಭಿಪ್ರಾಯಗಳನ್ನು ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತಿದ್ದೀರಿ. ದಯವಿಟ್ಟು ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಕುಟುಂಬದೊಳಗಿನ ಹಳೆಯ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಹೊರಬರುತ್ತಿದೆ. ಮುರಳೀಧರ್ ಟ್ರಕ್ ಚಾಲಕರಾಗಿದ್ದು, ಸಂಗೀತಾ ಗೃಹಿಣಿಯಾಗಿದ್ದರು. ಸುಮಾರು ಆರು ವರ್ಷಗಳ ಹಿಂದೆ ದಂಪತಿ ತಮ್ಮ ಹಿರಿಯ ಮಗನನ್ನು ಅನಾರೋಗ್ಯದಿಂದ ಕಳೆದುಕೊಂಡಿದ್ದರು. ಬಳಿಕ ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಿತ್ತು ಎನ್ನಲಾಗಿದೆ.
ಕಳೆದ ಮೂರು ತಿಂಗಳಿನಿಂದ ಹೊರಗಿದ್ದ ಕುನಾಲ್ ತಂದೆ, ದುರಂತಕ್ಕೂ ಎರಡು ದಿನಗಳ ಮುಂಚೆಯಷ್ಟೇ ಮನೆಗೆ ಬಂದಿದ್ದು, ಮತ್ತೆ ಜಗಳ ನಡೆದಿತ್ತು ಎನ್ನಲಾಗಿದೆ.
ಪೊಲೀಸ್ ತನಿಖೆಯಲ್ಲಿ ಸಂಗೀತಾ ಅವರ ಹಳೆಯ ವಿಡಿಯೋ ಒಂದನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಅವರು, "ಆಸ್ತಿಗಾಗಿ ನನ್ನ ಮತ್ತು ನನ್ನ ಮಗನ ಹಕ್ಕನ್ನು ಕಸಿದುಕೊಂಡಿದ್ದೀರಿ. ನನ್ನ ನೆಮ್ಮದಿಯ ಸಂಸಾರವನ್ನು ಹಾಳು ಮಾಡಿದ್ದೀರಿ. ಪುತ್ರನನ್ನು ಹೆತ್ತವರಿಂದ ದೂರ ಮಾಡಿದ ನಿಮ್ಮ ಈ ಪಾಪಕ್ಕೆ ಮುಂದಿನ ಏಳು ತಲೆಮಾರು ನರಕ ಅನುಭವಿಸುತ್ತೆ. ಇದೇ ನನ್ನ ಶಾಪ" ಎಂದು ಹೇಳಿರುವುದು ಕಂಡುಬಂದಿದೆ. ಅಸಲಿಗೆ, ಇದನ್ನು ಯಾರಿಗೆ ಹೇಳಿರುವುದು, ಯಾಕಾಗಿ ಈ ವಿಡಿಯೋ ಮಾಡಿದರು ಎಂಬುದನ್ನು ಭೇದಿಸಲು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.