ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ನೇಪಾಳದ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಕಾರ್ಮಿಕರು ಹಾಗೂ ತಮಿಳುನಾಡಿನ 21 ಭಾರತೀಯರನ್ನು ಈಗಾಗಲೇ ರಕ್ಷಿಸಲಾಗಿದೆ. ಆದರೆ ಚೀನಾ ಭಾಗದಲ್ಲೂ ಹಲವು ಭಾರತೀಯರು ಇನ್ನೂ ಸಿಲುಕಿಕೊಂಡಿದ್ದಾರೆ.
Rescuers carry a victim of flash flooding to safety along the Trishuli River in Nepal's Nuwakot district, Wednesday, Aug. 26, 2026.
ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು.
Updated on

ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಭೀಕರ ಹಠಾತ್ ಪ್ರವಾಹದ ಬಳಿಕ 290 ಭಾರತೀಯರು ಇನ್ನೂ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುರುವಾರ ತಿಳಿಸಿದೆ.

ಇದೇ ವೇಳೆ ಕೈಲಾಸ-ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಸುಮಾರು 200 ಭಾರತೀಯರು ಸುರಕ್ಷಿತ ಸ್ಥಳಾಂತರಕ್ಕೆ ನೆರವು ಕೋರಿದ್ದಾರೆ.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಮಾತನಾಡಿ, ಸಂಪರ್ಕಕ್ಕೆ ಸಿಗದವರಲ್ಲಿ ಜಲವಿದ್ಯುತ್ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು, ಪ್ರವಾಸಿಗರ ಗುಂಪುಗಳು ಹಾಗೂ ವಿವಿಧ ರಾಜ್ಯಗಳ ಯಾತ್ರಿಕರು ಸೇರಿದ್ದಾರೆ ಎಂದು ತಿಳಿಸಿದರು. ಸದ್ಗುರು ಅವರ ಈಶಾ ಫೌಂಡೇಶನ್‌ನ ದೊಡ್ಡ ಗುಂಪೊಂದು ಕೂಡ ಇನ್ನೂ ಸಂಪರ್ಕಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.

ನೇಪಾಳದ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 63 ಕಾರ್ಮಿಕರು ಹಾಗೂ ತಮಿಳುನಾಡಿನ 21 ಭಾರತೀಯರನ್ನು ಈಗಾಗಲೇ ರಕ್ಷಿಸಲಾಗಿದೆ. ಆದರೆ ಚೀನಾ ಭಾಗದಲ್ಲೂ ಹಲವು ಭಾರತೀಯರು ಇನ್ನೂ ಸಿಲುಕಿಕೊಂಡಿದ್ದಾರೆ.

ಸಂಪರ್ಕಕ್ಕೆ ಸಿಗದ 290 ಭಾರತೀಯರಲ್ಲಿ ತ್ರಿಶೂಲಿ-1 ವಿದ್ಯುತ್ ಯೋಜನೆಯ ಕಾರ್ಮಿಕರು ಹಾಗೂ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಹಲವು ರಾಜ್ಯಗಳಿಂದ ಕೈಲಾಸ-ಮಾನಸ ಸರೋವರ ಯಾತ್ರೆ ಮತ್ತು ಇತರ ಉದ್ದೇಶಗಳಿಗಾಗಿ ನೇಪಾಳಕ್ಕೆ ತೆರಳಿದ್ದವರು ಸೇರಿದ್ದಾರೆಂದು ತಿಳಿಸಿದ್ದಾರೆ.

ಭಾರತೀಯ ಅಧಿಕಾರಿಗಳು ನೇಪಾಳದ ಅಧಿಕಾರಿಗಳು, ರಾಜ್ಯ ಸರ್ಕಾರಗಳು, ಪ್ರವಾಸ ಆಯೋಜಕರು ಹಾಗೂ ಯೋಜನಾ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ಸಂಪರ್ಕಕ್ಕೆ ಸಿಗದ ಭಾರತೀಯರನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

“ಪ್ರವಾಹ ಪೀಡಿತ ಪ್ರದೇಶಗಳಲ್ಲಿರುವ ಎಲ್ಲ ಭಾರತೀಯರ ಸ್ಥಿತಿ ಮತ್ತು ಸುರಕ್ಷತೆಯ ಬಗ್ಗೆ ಮಾಹಿತಿ ಪಡೆಯಲು ತುರ್ತು ಪ್ರಯತ್ನಗಳು ನಡೆಯುತ್ತಿವೆ. ಈ ವಿಚಾರದಲ್ಲೂ ಹಾಗೂ ಪರಿಹಾರ ಕಾರ್ಯಗಳಲ್ಲೂ ನಾವು ನೇಪಾಳದ ಅಧಿಕಾರಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಸಂಪರ್ಕ ವ್ಯವಸ್ಥೆಗಳು ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ನಾಪತ್ತೆಯಾಗಿರುವವರನ್ನು ಸಂಪರ್ಕಿಸುವುದು ಕಷ್ಟಕರವಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಭಾರತವು ಪರಿಹಾರ ಸಾಮಗ್ರಿಗಳನ್ನು ಹೊತ್ತ ಎರಡು ವಿಮಾನಗಳನ್ನು ನೇಪಾಳಕ್ಕೆ ಕಳುಹಿಸಿದ್ದು, ನೇಪಾಳದ ಅಧಿಕಾರಿಗಳೊಂದಿಗೆ ರಕ್ಷಣಾ ಮತ್ತು ಸ್ಥಳಾಂತರ ಕಾರ್ಯಾಚರಣೆಗಳ ಸಮನ್ವಯ ಸಾಧಿಸುತ್ತಿದೆ ಎಂದು ಜೈಸ್ವಾಲ್ ಹೇಳಿದರು.

Rescuers carry a victim of flash flooding to safety along the Trishuli River in Nepal's Nuwakot district, Wednesday, Aug. 26, 2026.
ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 392ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

ವಿಶೇಷ ನಿಯಂತ್ರಣ ಕೊಠಡಿ ಸ್ಥಾಪನೆ

ಈ ನಡುವೆ ನವದೆಹಲಿ ಮೂಲದ ವಿದೇಶಾಂಗ ಸಚಿವಾಲಯದ ಕೇಂದ್ರ ಕಚೇರಿಯಲ್ಲಿ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ನೇಪಾಳದಲ್ಲಿರುವ ಭಾರತದ ರಾಜತಾಂತ್ರಿಕ ಕಚೇರಿಗಳು ತುರ್ತು ಸಹಾಯವಾಣಿ ಸಕ್ರಿಯಗೊಳಿಸಿದ್ದು, ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ ಪ್ರವಾಹ ಪೀಡಿತ ಭಾರತೀಯರನ್ನು ಪತ್ತೆಹಚ್ಚುವ ಕಾರ್ಯ ನಡೆಸುತ್ತಿವೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ವಿದೇಶಾಂಗ ಕಾರ್ಯದರ್ಶಿ ಹಾಗೂ ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಜತಾಂತ್ರಿಕ ತಂಡಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ.

ಸಹಾಯವಾಣಿ ಸಂಖ್ಯೆಗಳು ಬಿಡುಗಡೆ

ನೇಪಾಳದ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ನೆರವು ಮತ್ತು ಮಾಹಿತಿಗಾಗಿ +977 985 131 6807 ಹಾಗೂ +977 970 910 7500 ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಚೀನಾ ಭಾಗದಲ್ಲಿ ಸಿಲುಕಿರುವ ಭಾರತೀಯರಿಗಾಗಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ 0086 185 1428 4905 ಸಂಖ್ಯೆಯನ್ನು ನೀಡಿದೆ.

ನೇಪಾಳ ಪ್ರವಾಸೋದ್ಯಮ ಮಂಡಳಿಯು 1234 ಮತ್ತು 1144 ಸಹಾಯವಾಣಿ ಸಂಖ್ಯೆಯನ್ನು ಸಕ್ರಿಯಗೊಳಿಸಿದೆ. ಪ್ರವಾಸಿ ಪೊಲೀಸರನ್ನು 9851289445 ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

362 ಮಂದಿ ಸಾವು, 900ಕ್ಕೂ ಹೆಚ್ಚು ನಾಪತ್ತೆ

ನೇಪಾಳದ ಅಧಿಕಾರಿಗಳ ಪ್ರಕಾರ, ಹಠಾತ್ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 362ಕ್ಕೆ ಏರಿಕೆಯಾಗಿದ್ದು, 900ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.

ಪ್ರವಾಹದಿಂದ ಹಲವು ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, ಮನೆಗಳು, ರಸ್ತೆಗಳು, ಸೇತುವೆಗಳು, ಜಲವಿದ್ಯುತ್ ಘಟಕಗಳು ಹಾಗೂ ಇತರ ಪ್ರಮುಖ ಮೂಲಸೌಕರ್ಯಗಳು ಹಾನಿಗೊಳಗಾಗಿವೆ.

ಮತ್ತೊಂದು ಪ್ರವಾಹದ ಭೀತಿ

ದುರಂತದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ. ಪ್ರವಾಹದ ಸ್ಥಳದಲ್ಲಿ ನದಿ ಹರಿವು ತಡೆಯಲ್ಪಟ್ಟ ಪರಿಣಾಮ ಹೊಸದಾಗಿ ನಿರ್ಮಾಣವಾಗಿರುವ ಸರೋವರದ ನೀರಿನ ಮಟ್ಟವೂ ಏರುತ್ತಿದೆ ಎಂದು ವರದಿಯಾಗಿದೆ. ಸರೋವರ ಒಡೆದು ಭಾರೀ ಪ್ರಮಾಣದ ನೀರು ಹೊರಬೀಳುವ ಸಾಧ್ಯತೆಯ ಬಗ್ಗೆ ನೇಪಾಳದ ವಿಪತ್ತು ನಿರ್ವಹಣಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ನದಿ ದಡಗಳಿಂದ ದೂರವಿರುವಂತೆ ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿಗೆ ಸೂಚಿಸಲಾಗಿದೆ.

ಯಾತ್ರಿಕರು, ಚಾರಣಿಗರು ಮತ್ತು ಕಾರ್ಮಿಕರಿಂದ ತುಂಬಿರುವ ಪ್ರದೇಶದಲ್ಲೇ ಈ ದುರಂತ ಸಂಭವಿಸಿದೆ. ರಸುವಾ ಜಿಲ್ಲೆಯಲ್ಲಿ ಲಾಂಗ್‌ಟಾಂಗ್ ಕಣಿವೆ, ಗೋಸಾಯಿಕುಂಡ ಮತ್ತು ಟಿಮುರೆ ಸೇರಿದಂತೆ ಪ್ರಮುಖ ಚಾರಣ ಹಾಗೂ ಧಾರ್ಮಿಕ ಪ್ರವಾಸಿ ತಾಣಗಳಿವೆ. ವಿಶಾಲ ಹಿಮಾಲಯ ಪ್ರದೇಶವು ಕೈಲಾಸ ಮತ್ತು ಮಾನಸ ಸರೋವರದತ್ತ ತೆರಳುವ ಯಾತ್ರಿಕರ ಪ್ರಮುಖ ಮಾರ್ಗವೂ ಆಗಿದೆ.

ರಕ್ಷಾಬಂಧನ ಮತ್ತು ಶ್ರಾವಣ ಪೂರ್ಣಿಮೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎತ್ತರದ ಪ್ರದೇಶಗಳಲ್ಲಿನ ಯಾತ್ರಾ ಚಟುವಟಿಕೆಗಳು ಹೆಚ್ಚಾಗಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ದೂರದ ಹಾಗೂ ದುರ್ಗಮ ಪ್ರದೇಶಗಳ ಮೂಲಕ ಸಂಚರಿಸುತ್ತಿರುವ ಯಾತ್ರಿಕರ ಸಮಗ್ರ ದಾಖಲೆ ಲಭ್ಯವಿಲ್ಲದಿರುವುದು, ದುರಂತದಿಂದ ನಿಜವಾಗಿ ಎಷ್ಟು ಮಂದಿ ಬಾಧಿತರಾಗಿದ್ದಾರೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಅಧಿಕಾರಿಗಳಿಗೆ ಮತ್ತಷ್ಟು ಸವಾಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com