

ಲಖನೌ: ಪ್ರಸಿದ್ಧ ಹರಿಯಾಣವಿ ಗಾಯಕ ಮತ್ತು ಯೂಟ್ಯೂಬರ್ ಅಂಕಿತ್ ಬಾಲ್ಯನ್ ಕೊಲೆ ಪ್ರಕರಣದ ಇಬ್ಬರು ಪ್ರಮುಖ ಶೂಟರ್‌ಗಳನ್ನು ಉತ್ತರ ಪ್ರದೇಶ ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ.
ಸೋಮವಾರ (ಆಗಸ್ಟ್ 31, 2026) ಮುಂಜಾನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಆರೋಪಿಗಳು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
ಶಾಮ್ಲಿ ಪೊಲೀಸರ ಪ್ರಕಟಣೆ ಪ್ರಕಾರ, ಮೋಹಿತ್ (22) ಮತ್ತು ಸುಮಿತ್ (24) ತಲಾ ರೂ.50,000 ಬಹುಮಾನ ಘೋಷಿಸಲಾಗಿದ್ದ ಆರೋಪಿಗಳಾಗಿದ್ದರು.
ಕೈರಾನಾ ರಸ್ತೆಯಲ್ಲಿರುವ ಇಂಡಿಯನ್ ಗ್ಯಾಸ್ ಗೋದಾಮಿನ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ನಡೆದ ಪ್ರತಿದಾಳಿ ಗುಂಡಿನ ಚಕಮಕಿಯಲ್ಲಿ ಇಬ್ಬರೂ ಗಾಯಗೊಂಡಿದ್ದರು.
ಗಾಯಗೊಂಡ ಆರೋಪಿಗಳನ್ನು ಶಾಮ್ಲಿಯ ಜಿಲ್ಲಾ ಸಂಯುಕ್ತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ವೇಳೆ ಇಬ್ಬರೂ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 26ರ ಸಂಜೆ ಶಾಮ್ಲಿಯ ಕೊತ್ವಾಲಿ ಪ್ರದೇಶದಲ್ಲಿರುವ ಜಿಮ್‌ನಿಂದ ಅಂಕಿತ್ ಬಾಲ್ಯನ್ ಹೊರಬರುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಅಧಿಕಾರಿಗಳ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಬಾಲ್ಯನ್ ಅವರು ಗುಂಡೇಟಿನಿಂದಾದ ಗಾಯಗಳಿಂದ ಮೃತಪಟ್ಟಿದ್ದಾರೆಂದು ತಿಳಿದುಬಂದಿತ್ತು.