

ನವದೆಹಲಿ: ಬಜೆಟ್ ಅಧಿವೇಶನದ ವೇಳೆ ಫೆ.4ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಲೋಕಸಭೆ ಕಲಾಪದಿಂದ ದೂರವುಳಿದದ್ದು ಯಾಕೆಂಬ ವಿಚಾರ ಆಡಳಿತ-ಪ್ರತಿ ಪಕ್ಷಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದ್ದು, ಈ ನಡುವಲ್ಲೇ ಮೋದಿ ಮೇಲೆ ಕಾಂಗ್ರೆಸ್ ಮಹಿಳಾ ಸಂಸದರು ದಾಳಿಗೆ ಸಿದ್ಧರಾಗಿದ್ದರು ಎಂದು ಕೇಂದ್ರ ಸರ್ಕಾರ ಆರೋಪಿಸಿದೆ.
ಇದಕ್ಕೆ ಸಾಕ್ಷಿಯ ರೂಪದಲ್ಲಿ ವೀಡಿಯೋವೊಂದನ್ನೂ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು , ಕಾಂಗ್ರೆಸ್‌ನ ಮಹಿಳಾ ಸಂಸದರ ಗದ್ದಲದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ಅವರು ಕಲಾಪಕ್ಕೆ ಆಗಮಿಸಲು ಕೆಲವೇ ಕ್ಷಣಗಳಿವೆ ಎನ್ನುವಾಗ ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಿ ಕೂರುವ ಸ್ಥಳ ಕ್ಕಾಗಮಿಸಿ ತೀವ್ರ ಗದ್ದಲ ನಡೆಸುತ್ತಿರುವ ವಿಡಿಯೋ ಇದಾಗಿದೆ.
ಜ್ಯೋತಿಮಣಿ ಸೇರಿ ಕೆಲವು ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಿ ಕೂರುವ ಸ್ಥಳವನ್ನು ಸುತ್ತುವರಿದು ಯಾವುದು ಸರಿಯೆನಿಸುತ್ತದೋ ಅದನ್ನೇ ಮಾಡಿ' ಎಂಬ ಘೋಷಣೆಗಳುಳ್ಳ ಭಿತ್ತಿಪತ್ರ ಪದರ್ಶಿಸಿ ಪ್ರತಿಭಟನೆ ನಡೆಸುತ್ತಿರುವ ದೃಶ್ಯಗಳು ವೀಡಿಯೋದಲ್ಲಿ ಕಂಡು ಬಂದಿದೆ.
ಅಲ್ಲದೆ, ಬಿಜೆಪಿಗರಾದ ಕಿರಣ್ ರಿಜಿಜು, ಗಿರಿರಾಜ್ ಸಿಂಗ್ ಅವರು ಕೈಮಗಿದು ಮನವಿ ಮಾಡಿದರೂ ಕೇಳದೇ ಇರುವುದೂ ಕಂಡು ಬಂದಿದೆ.
ನಿವೃತ್ತ ಸೇನಾಮುಖ್ಯಸ್ಥಎಂ.ಎಂ.ನರಾವಣೆ ಅವರ ವಿವಾದಾತ್ಮಕ ಅಪ್ರಕಟಿತ ಪುಸ್ತಕ ಆಧರಿಸಿ ನಿಯತಕಾಲಿಕೆ ವರದಿಯಲ್ಲಿ ಪ್ರಸ್ತಾಪಿಸಲಾದ ಸಾಲನ್ನೇ ಸಂಸದರ ಬ್ಯಾನರ್‌ನಲ್ಲಿ ಪ್ರದರ್ಶಿಸಲಾಗಿತ್ತು.
ಈ ವಿಡಿಯೋ ಮುಂದಿಟ್ಟುಕೊಂಡು ಪ್ರತಿಪಕ್ಷ ವಿರುದ್ಧ ಕಿಡಿಕಾರಿರುವ ರಿಜಿಜು ಅವರು, ಕಾಂಗ್ರೆಸ್ ಪಕ್ಷ ತನ್ನ ಸಂಸದರ ದುರ್ನಡತೆಗೆ ಹೆಮ್ಮೆಪಡುತ್ತದೆ. ನಾವೇನಾದರೂ ಬಿಜೆಪಿ ಸಂಸದರನ್ನು ತಡೆಯದಿದ್ದರೆ ಮತ್ತು ಕಾಂಗ್ರೆಸ್ ಸಂಸದೆಯರನ್ನು ಎದುರಿಸಿ ಎಂದು ಬಿಜೆಪಿಯ ಮಹಿಳಾ ಸಂಸದರಿಗೆ ಹೇಳಿದ್ದರೆ ಅಲ್ಲಿ ಬೇರೆಯದೇ ಸ್ಥಿತಿ ನಿರ್ಮಾಣವಾಗುತ್ತಿತ್ತು. ನಾವು ಸಂಸತ್ತಿನ ಗೌರವ ಮತ್ತು ಘನತೆ ಕಾಪಾಡಲು ಬದ್ಧವಾಗಿರುವವರು ಎಂದು ಹೇಳಿದ್ದಾರೆ.
ಇದೇ ವೇಳೆ ಮಹಿಳಾ ಸಂಸದರ ದಾಳಿ ಉದ್ದೇಶ ಅರಿತು ಲೋಕಸಭಾ ಅಧಿವೇಶನದಿಂದ ದೂರವಿರುವಂತೆ ನಾನೇ ಪ್ರಧಾನಿಗಳಿಗೆ ಸಲಹೆ ನೀಡಿದ್ದಾಗಿಯೂ ತಿಳಿಸಿದ್ದಾರೆ.
Advertisement