

ಹೈದರಾಬಾದ್: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ರಾಷ್ಟ್ರ ರಾಜಧಾನಿಯ ರೋಸ್ ಅವೆನ್ಯೂ ನ್ಯಾಯಾಲಯವು ದೋಷಮುಕ್ತಗೊಳಿಸಿದ ನಂತರ ತೆಲಂಗಾಣ ಜಾಗೃತಿ ಸಂಸ್ಥಾಪಕಿ ಮತ್ತು ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಶುಕ್ರವಾರ 'ಸತ್ಯಕ್ಕೆ ಜಯ' ಸಂದಿದೆ ಎಂದು ಹೇಳಿದ್ದಾರೆ.
ಈ ಪ್ರಕರಣವನ್ನು 'ರಾಜಕೀಯ ಸೇಡಿನ' ಭಾಗವಾಗಿ ತಮ್ಮ ವಿರುದ್ಧ ಹೇರಲಾಗಿತ್ತು ಎಂದು ಅವರು ಹೇಳಿದ್ದಾರೆ.
'ಸತ್ಯಮೇವ ಜಯತೇ' ಎಂದು ದೆಹಲಿ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಕೆ ಕವಿತಾ ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ನಂತರ, ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ನ್ಯಾಯಾಂಗವು ಸುಳ್ಳಿನ ಜಾಲವನ್ನು ಕತ್ತರಿಸಿದೆ' ಎಂದು ಹೇಳಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಗಳಲ್ಲಿ 2024ರ ಮಾರ್ಚ್‌ನಲ್ಲಿ ಬಂಧನಕ್ಕೊಳಗಾಗಿದ್ದ ಕವಿತಾ, ಸುಪ್ರೀಂ ಕೋರ್ಟ್ ಜಾಮೀನು ನೀಡಿದ ನಂತರ ಅದೇ ವರ್ಷ ಆಗಸ್ಟ್ 29 ರಂದು ದೆಹಲಿಯ ತಿಹಾರ್ ಜೈಲಿನಿಂದ ಹೊರಬಂದರು.
ಸಿಬಿಐ (ಕೇಂದ್ರ ತನಿಖಾ ದಳ) ತನಿಖೆ ನಡೆಸಿದ ಪ್ರಕರಣದ ಕುರಿತು ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ಅವರು ಆದೇಶ ಪ್ರಕಟಿಸಿದ್ದಾರೆ. ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕವಿತಾ ಮತ್ತು ಇತರ 20 ಜನರನ್ನು ಶುಕ್ರವಾರ ದೆಹಲಿ ನ್ಯಾಯಾಲಯವು ಖುಲಾಸೆಗೊಳಿಸಿದೆ. ಈ ನೀತಿಯಲ್ಲಿ ಯಾವುದೇ "ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ" ಕಂಡುಬಂದಿಲ್ಲ ಎಂದು ಹೇಳುವ ಮೂಲಕ ಸಿಬಿಐ ಅನ್ನು ತರಾಟೆಗೆ ತೆಗೆದುಕೊಂಡಿದೆ.
ಕವಿತಾ ಅವರು ತಮ್ಮ ಕಷ್ಟದ ಸಮಯದಲ್ಲಿ ಪತಿ, ಅತ್ತೆ, ಮಾವ ಮತ್ತು ಪೋಷಕರು ಸೇರಿದಂತೆ ಕುಟುಂಬ ಸದಸ್ಯರು ಮತ್ತು ತೆಲಂಗಾಣ ಜಾಗೃತಿ ಕಾರ್ಯಕರ್ತರು ತಮ್ಮ ಬೆಂಬಲಕ್ಕೆ ನಿಂತರು. ಅವರ ಬೆಂಬಲಕ್ಕೆ ಧನ್ಯವಾದಗಳು ಎಂದು ಹೇಳಿದರು.
'ನನ್ನ ಮಕ್ಕಳ ಜೊತೆ ಕಳೆಯಬೇಕಿದ್ದ ಸಮಯವನ್ನು (ಐದು ತಿಂಗಳ ಕಾಲ ಜೈಲಿನಲ್ಲಿ ಇರಿಸಿದ್ದರಿಂದ) ಕಳೆದುಕೊಂಡಿದ್ದಕ್ಕೆ ಯಾರು ಜವಾಬ್ದಾರರು? ನನ್ನ ಕುಟುಂಬವನ್ನು ಮಿಸ್ ಮಾಡಿಕೊಂಡಿದ್ದಕ್ಕೆ ಯಾರು ಹೊಣೆ. ಆನ್‌ಲೈನ್‌ನಲ್ಲಿ ತನಗಾಗಿರುವ ಕಿರುಕುಳ ಮತ್ತು ಸಾರ್ವಜನಿಕ ಸಭೆಗಳಲ್ಲಿ (ರಾಜಕೀಯ ನಾಯಕರಿಂದ) ನಿಂದನೆಗಳಿಗೆ ಯಾರು ಉತ್ತರಿಸುತ್ತಾರೆ' ಎಂದು ಪ್ರಶ್ನಿಸಿದರು.
ತಂದೆ ಕೆಸಿಆರ್ ಮತ್ತು ಸಹೋದರ ಮತ್ತು ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ಅವರೊಂದಿಗೆ ಈ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತೀರಾ ಎಂದು ಕೇಳಿದಾಗ, 'ಈ ಫಲಿತಾಂಶ ಬಂದ ನಂತರ ನಾನು ನನ್ನ ತಾಯಿಯ ಆಶೀರ್ವಾದ ಪಡೆದೆ. ಬೇರೆ ವಿಷಯಗಳ ಬಗ್ಗೆ ಮಾತನಾಡಲು ಇದು ಸಮಯವಲ್ಲ. ಈ ಪ್ರಕರಣದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ನಾನು ಕೃತಜ್ಞಳಾಗಿದ್ದೇನೆ' ಎಂದರು.
ಬಿಆರ್‌ಎಸ್ ಆಡಳಿತಾವಧಿಯಲ್ಲಿ ನಿರ್ಮಿಸಲಾದ ಕಾಳೇಶ್ವರಂ ಏತ ನೀರಾವರಿ ಯೋಜನೆಯ ವಿಚಾರದಲ್ಲಿ ಕವಿತಾ ಅವರ ಸೋದರಸಂಬಂಧಿ ಮತ್ತು ಪಕ್ಷದ ನಾಯಕರಾದ ಟಿ ಹರೀಶ್ ರಾವ್ ಮತ್ತು ಜೆ ಸಂತೋಷ್ ಕುಮಾರ್ ಅವರು ತಮ್ಮ ತಂದೆಯ ಪ್ರತಿಷ್ಠೆಗೆ 'ಕಳಂಕ ತಂದಿದ್ದಾರೆ' ಎಂದು ಆರೋಪಿಸಿದ ನಂತರ ಅವರನ್ನು 2025ರ ಸೆಪ್ಟೆಂಬರ್‌ರಲ್ಲಿ ಬಿಆರ್‌ಎಸ್‌ನಿಂದ ಅಮಾನತುಗೊಳಿಸಲಾಯಿತು.
ಅವರನ್ನು ಅಮಾನತುಗೊಳಿಸಿದಾಗಿನಿಂದ, ಅವರು ತಮ್ಮ ನೇತೃತ್ವದ ಸಾಂಸ್ಕೃತಿಕ ಸಂಘಟನೆಯಾದ ತೆಲಂಗಾಣ ಜಾಗೃತಿಯ ಬ್ಯಾನರ್ ಅಡಿಯಲ್ಲಿ ಸಾರ್ವಜನಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ರಾಜಕೀಯ ವೇದಿಕೆಯು ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು.
Advertisement