

ಭುವನೇಶ್ವರ: ಕಲ್ಲು ಗಣಿಗಾರಿಕೆಯ ವೇಳೆ ಸಂಭವಿಸಿದ ಭಾರಿ ಭೂ ಕುಸಿತದಲ್ಲಿ ಹಲವು ಕಾರ್ಮಿಕರು ಸಾವನ್ನಪ್ಪಿರುವ ಘಟನೆಯೊಂದು ಒಡಿಶಾದ ಧೆಂಕಾನಾಲ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.
ಧೆಂಕಾನಾಲ್ ಜಿಲ್ಲೆಯ ಮೊಟಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲಪುರ ಗ್ರಾಮದ ಸಮೀಪ ಕಾರ್ಮಿಕರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ದೊಡ್ಡ ಪ್ರಮಾಣದ ಬಂಡೆಗಳು ಏಕಾಏಕಿ ಕುಸಿದು ಬಿದ್ದಿವೆ. ಘಟನೆ ವೇಳೆ ಹಲವು ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ಹೇಳಲಾಗುತ್ತಿದ್ದು, ಎಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆಂಬ ನಿಖರ ಮಾಹಿತಿಗಳು ಇನ್ನೂ ತಿಳಿದುಬಂದಿಲ್ಲ.
ಘಟನೆಯ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳ, ಒಡಿಶಾ ವಿಪತ್ತು ತ್ವರಿತ ಕಾರ್ಯಪಡೆ (ODRAF), ಶ್ವಾನ ದಳ ಹಾಗೂ ಭಾರೀ ಯಂತ್ರೋಪಕರಣಗಳನ್ನು ರವಾನಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧೆಂಕಾನಾಲ್ ಜಿಲ್ಲಾಧಿಕಾರಿ ಆಶಿಷ್ ಇಶ್ವರ್ ಪಾಟೀಲ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಸೋಂಕರ್ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ದುರ್ಘಟನೆ ಕುರಿತು ಪ್ರತಿಪಕ್ಷ ನಾಯಕ ನವೀನ್ ಪಟ್ನಾಯಕ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ಸಂತಾಪ ಸೂಚಿಸಿದ್ದಾರೆ.
ಧೆಂಕಾನಾಲ್‌ನ ಕಲ್ಲುಗಣಿಯಲ್ಲಿ ಸ್ಫೋಟದ ನಂತರ ಸಂಭವಿಸಿದ ಬಂಡೆ ಕುಸಿತದಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿರುವುದು ಅತ್ಯಂತ ದುಃಖಕರ ಸಂಗತಿ. ಈ ದುಃಖದ ಸಂದರ್ಭದಲ್ಲಿ ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆಂದು ಹೇಳಿದ್ದಾರೆ.
ಇದೇ ವೇಳೆ ಕಾರ್ಮಿಕರ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಬೇಕು ಹಾಗೂ ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Advertisement