

ಮಸ್ಕತ್: ಒಮನ್ ರಾಷ್ಟ್ರದ ಮಸ್ಕತ್ ನಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಟ್ರೆಕ್ಕಿಂಗ್ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಓಮನ್‌ನ ಜೆಬೆಲ್ ಶಾಮ್ಸ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು 52 ವರ್ಷದ ಶಾರದ ಅಯ್ಯರ್ ಎಂದು ಗುರುತಿಸಲಾಗಿದೆ.
ಮೃತರು ಮೂಲತ: ಕೇರಳದ ಥಝಾವದವರಾಗಿದ್ದು, ದಿವಂಗತ ಕೃಷಿ ವಿಜ್ಞಾನಿಗಳಾದ ಆರ್‌ಡಿ ಅಯ್ಯರ್ ಮತ್ತು ರೋಹಿಣಿ ಅಯ್ಯರ್ ಅವರ ಪುತ್ರಿ ಮತ್ತು ಮಲಯಾಳಂ ಹಿನ್ನೆಲೆ ಗಾಯಕಿ ಚಿತ್ರಾ ಅಯ್ಯರ್ ಅವರ ಸಹೋದರಿಯಾಗಿದ್ದಾರೆ.
ಜನವರಿ 2 ರಂದು ಒಮನ್ ನ ಅಲ್ ದಖಿಲಿಯಾ ಗವರ್ನರೇಟ್‌ನಲ್ಲಿರುವ ಜೆಬೆಲ್ ಶಾಮ್ಸ್ ನ ಕಡಿದಾದ ಪ್ರದೇಶದಲ್ಲಿ ಸಂಭವಿಸಿದ ಅಪಘಾತದಲ್ಲಿ Omen Airನ ಮಾಜಿ ಮ್ಯಾನೇಜರ್ ಒಬ್ಬರು ಟ್ರೆಕ್ಕಿಂಗ್ ಗುಂಪಿನ ಭಾಗವಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
ಆಕೆಯ ಸಾವಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಆದರೆ ಟ್ರೆಕ್ಕಿಂಗ್ ಸ್ಥಳ ಬಂಡೆಗಳಿಂದ ಕೂಡಿದ ಕಡಿದಾದ ಪ್ರದೇಶವಾಗಿತ್ತು. ಇದೇ ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗಿದೆ.
ಅಯ್ಯರ್ ಅವರ ಮೃತದೇಹವನ್ನು ಒಮಾನ್‌ನಿಂದ ಕೇರಳಕ್ಕೆ ಕೊಂಡೊಯ್ಯಲಾಗುತ್ತಿದ್ದು, ಜನವರಿ 7 ರಂದು ಥಾಝವದಲ್ಲಿರುವ ಕುಟುಂಬದ ಪೂರ್ವಜರ ಮನೆಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುವುದು ಎಂದು ಕುಟುಂಬ ತಿಳಿಸಿದೆ.
ಡಿಸೆಂಬರ್ 11 ರಂದು ನಿಧನರಾದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದ ಅಯ್ಯರ್, ಡಿಸೆಂಬರ್ 24 ರಂದು ಒಮನ್‌ಗೆ ಮರಳಿದ್ದರು.
ತನ್ನ ಸಹೋದರಿಯ ನಿಧನದ ಸುದ್ದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಚಿತ್ರಾ ಅಯ್ಯರ್ ಹಂಚಿಕೊಂಡಿದ್ದಾರೆ.
Advertisement