ಅಮೇರಿಕಾದಲ್ಲಿ ಭೀಕರ ಅಪಘಾತ: ಆಂಧ್ರ ಮೂಲದ ಟೆಕ್ಕಿ ದಂಪತಿ ಸಾವು: ಇಬ್ಬರು ಮಕ್ಕಳ ಸ್ಥಿತಿ ಗಂಭೀರ
ವಾಷಿಂಗ್ಟನ್: ಅಮೇರಿಕಾದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಪತ್ನಿ ಮೃತಪಟ್ಟು, ಇಬ್ಬರು ಮಕ್ಕಳು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿಯಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕೃಷ್ಣ ಕಿಶೋರ್ (45) ಮತ್ತು ಅವರ ಪತ್ನಿ ಆಶಾ (40) ಮೃತಪಟ್ಟ ದಂಪತಿಗಳು. ಕೃಷ್ಣ ಕಿಶೋರ್ ಅವರು ಕಳೆದ 10 ವರ್ಷಗಳಿಂದ ಅಮೇರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು ಕುಟುಂಬ ಸಮೇತ ಅಮೆರಿಕದಲ್ಲಿ ವಾಸವಿದೆ.
ಕೇವಲ 10 ದಿನಗಳ ಹಿಂದೆಯಷ್ಟೇ ಅವರು ತಮ್ಮ ಹುಟ್ಟೂರಾದ ಪಾಲಕೊಲ್ಲುಗೆ ಕುಟುಂಬ ಸಮೇತ ಭೇಟಿ ನೀಡಿ ಅಮೆರಿಕಕ್ಕೆ ವಾಪಸ್ಸಾಗುವ ವೇಳೆ ದುರಂತ ಸಂಭವಿಸಿದೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ದುಬೈನಲ್ಲಿ ತಂಗಿದ್ದ ಕುಟುಂಬ ಬಳಿಕ ಅಮೆರಿಕಕ್ಕೆ ತೆರಳಿದ್ದು ಈ ವೇಳೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ದಂಪತಿಗಳು ಸ್ಥಳದಲ್ಲೇ ಮೃತಪಟ್ಟರೆ ಮಗ ಮತ್ತು ಮಗಳಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಅಪಘಾತದಲ್ಲಿ ಬದುಕುಳಿದ ಮಕ್ಕಳ ನೆರವಿಗೆ ವಾಷಿಂಗ್ಟನ್‌ನ ತೆಲುಗು ಸಮುದಾಯ ಹಾಗೂ ಉತ್ತರ ಅಮೆರಿಕದ ತೆಲುಗು ಅಸೋಸಿಯೇಷನ್ (TANA) ಧಾವಿಸಿದೆ. ಅಲ್ಲದೆ ಮೃತದೇಹಗಳನ್ನು ಭಾರತಕ್ಕೆ ತರಲು ಮತ್ತು ಗಾಯಗೊಂಡ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಅಪಘಾತದ ಸಮಯದಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದರು. ಪೋಷಕರು ಸ್ಥಳದಲ್ಲೇ ಸಾವನ್ನಪ್ಪಿದರೆ, ಅವರ ಮಗ ಮತ್ತು ಮಗಳು ಗಂಭೀರವಾಗಿ ಗಾಯಗೊಂಡರು. ತುರ್ತು ರಕ್ಷಣಾ ಸಿಬ್ಬಂದಿ ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಿದರು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

