

ಹೈದರಾಬಾದ್: ಡ್ರಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಹಿಡಿದಿದ್ದ ತನ್ನ ಆಟೋ ಬಿಡುವಂತೆ ಪಾನಮತ್ತ ಚಾಲಕ ಹಾವು ತೋರಿಸಿ ಪೊಲೀಸರಿಗೆ ಬೆದರಿಕೆ ಹಾಕಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೈದರಾಬಾದ್ ನ ಪಾತಬಸ್ತಿ ಚಂದ್ರಯಾನಗುಟ್ಟದ ಚೌರಸ್ತಾಯಲ್ಲಿ ಈ ಘಟನೆ ನಡೆದಿದ್ದು, ಎಂದಿನಂತೆ ಪೊಲೀಸರು ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಿದ್ದು ಈ ವೇಳೆ ಓರ್ವ ಆಟೋ ಚಾಲಕ ಪಾನಮತ್ತನಾಗಿ ಆಟೋ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಹೀಗಾಗಿ ಪೊಲೀಸರು ಆತನ ಆಟೋವನ್ನು ವಶಕ್ಕೆ ಪಡೆದಿದ್ದಾರೆ.
ಮದ್ಯಪಾನ ಪರೀಕ್ಷೆಯಲ್ಲಿ ಚಾಲಕನ ರೀಡಿಂಗ್ 150 ಬಂದಿದ್ದು ಆತ ಪಾನಮತ್ತನಾಗಿರುವುದು ದೃಢಪಟ್ಟಿದೆ. ಹೀಗಾಗಿ ಪೊಲೀಸರು ಆತನ ಆಟೋ ಸೀಜ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಆಟೋ ಚಾಲಕ ತನ್ನ ಆಟೋವನ್ನು ಬಿಡುವಂತೆ ಪೊಲೀಸರ ಬಳಿ ಕೇಳಿದ್ದಾನೆ. ಆದರೆ ಪೊಲೀಸರು ದಂಡ ಪಾವತಿಸದ ಹೊರತು ಆಟೋ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಚಾಲಕ ತನ್ನ ಕೈಗೆ ಒಂದು ಹಾವನ್ನು ಎತ್ತಿಕೊಂಡು ಅದನ್ನು ಪೊಲೀಸರ ಬಳಿ ತಂದು ತೋರಿಸಿ ಬೆದರಿಸಿದ್ದಾನೆ. ಆಟೋ ಚಾಲಕನ ಕೈಯಲ್ಲಿ ಹಾವನ್ನು ನೋಡುತ್ತಲೇ ಹೌಹಾರಿದ ಪೊಲೀಸರು ಅತನಿಂದ ದೂರಕ್ಕೆ ಹೋಗಿದ್ದಾರೆ. ಬಳಿಕ ಇತರೆ ಪೊಲೀಸರ ಎಚ್ಚರಿಕೆ ನೀಡಿದ್ದು ಕೂಡಲೇ ಪಾನಮತ್ತ ಚಾಲಕ ಹಾವಿನ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ.
ಪೊಲೀಸ್ ದೂರು, ಚಾಲಕನಿಗಾಗಿ ಶೋಧ
ಇನ್ನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈದರಾಬಾದ್ ಪೊಲೀಸರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಪೊಲೀಸರಿಗೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪರಾರಿಯಾಗಿರುವ ಆಟೋ ಚಾಲಕನನ್ನು ಬಂಧಿಸಲು ಬಲೆ ಬೀಸಿದ್ದಾರೆ. ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳನ್ನು ಆಧರಿಸಿ ಆರೋಪಿ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.
ಕೊನೆಗೂ ಸಿಕ್ಕಿಬಿದ್ದ ಚಾಲಕ ಹೇಳಿದ್ದೇನು?
ಇನ್ನು ಹಾವು ತೋರಿಸಿ ಪೊಲೀಸರ ಬೆದರಿಸಿದ್ದ ಆಟೋ ಚಾಲಕನನ್ನು ಹಿಡಿಯುವಲ್ಲಿ ಕೊನೆಗೂ ಪೊಲೀಸರು ಯಶಸ್ನಿಯಾಗಿದ್ದು, ಮಾಧ್ಯಮಗಳ ಮುಂದೆ ಆತ ಕ್ಷಮೆ ಯಾಚಿಸಿದ್ದಾನೆ. ಆರೋಪಿ 23 ವರ್ಷದ ಸೈಯದ್ ಇರ್ಫಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಇನ್ನು ಮುಂದೆ ಇಂತಹ ಕೃತ್ಯಗಳನ್ನು ಪುನರಾವರ್ತಿಸುವುದಿಲ್ಲ ಎಂದು ಆತ ಕೈಮುಗಿದು ಕೇಳಿಕೊಂಡಿದ್ದಾನೆ.
ಅಂತೆಯೇ ಟ್ರಾಫಿಕ್ ರೂಲ್ಸ್ ಪಾಲಿಸಿ. ಪೊಲೀಸರಿಗೆ ಮರ್ಯಾದೆ ಕೊಟ್ಟು ಮಾತನಾಡಿ.. ನೀವು ಮರ್ಯಾದೆ ಕೊಟ್ಟರೆ ಅವರೂ ಮರ್ಯಾದೆ ಕೊಡುತ್ತಾರೆ. ಕುಡಿದು ಗಾಡಿ ಚಲಾಯಿಸಬೇಡಿ.. ಎಂದು ಮನವಿ ಮಾಡಿದ್ದಾನೆ.
Advertisement