ನವದೆಹಲಿ: ವೇದಾಂತ ಲಿಮಿಟೆಡ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರು ತಮ್ಮ ಮಗ ಅಗ್ನಿವೇಶ್ ಅಗರ್ವಾಲ್ ಅವರ ಹಠಾತ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದು, ಅಗ್ನಿವೇಶ್ 49ನೇ ವಯಸ್ಸಿನಲ್ಲಿ ಹೃದಯ ಸ್ತಂಭನದಿಂದ ನ್ಯೂಯಾರ್ಕ್‌ನಲ್ಲಿ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.
ನಗರದ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಸ್ಕೀಯಿಂಗ್ (skiing) ಅಪಘಾತದಿಂದ ಅಗ್ನಿವೇಶ್ ಚೇತರಿಸಿಕೊಳ್ಳುತ್ತಿದ್ದರು.
ಇದು ತಮ್ಮ ಜೀವನದ 'ಅತ್ಯಂತ ಕರಾಳ ದಿನ' ಎಂದು ಕರೆದ ಅಗರ್ವಾಲ್, 'ನನ್ನ ಪ್ರೀತಿಯ ಮಗ ಅಗ್ನಿವೇಶ್ ನಮ್ಮನ್ನು ತುಂಬಾ ಬೇಗ ಅಗಲಿದ್ದಾನೆ. ಅವನಿಗೆ ಕೇವಲ 49 ವರ್ಷ ವಯಸ್ಸಾಗಿತ್ತು. ಆರೋಗ್ಯವಾಗಿದ್ದ, ಜೀವನವು ಕನಸುಗಳಿಂದ ತುಂಬಿತ್ತು. ಅಮೆರಿಕದಲ್ಲಿ ಸ್ಕೀಯಿಂಗ್ ಅಪಘಾತದ ನಂತರ, ಅವನು ನ್ಯೂಯಾರ್ಕ್‌ನ ಮೌಂಟ್ ಸಿನಾಯ್ ಆಸ್ಪತ್ರೆಯಲ್ಲಿ ಚೆನ್ನಾಗಿಯೇ ಚೇತರಿಸಿಕೊಳ್ಳುತ್ತಿದ್ದ. ಆತ ಅಪಾಯದಿಂದ ಪಾರಾಗಿದ್ದಾನೆ ಎಂದೇ ನಮ್ಮ ಕುಟುಂಬ ಭಾವಿಸಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಹಠಾತ್ ಹೃದಯ ಸ್ತಂಭನವು ನಮ್ಮ ಮಗನನ್ನು ನಮ್ಮಿಂದ ದೂರ ಮಾಡಿತು' ಎಂದು ಹೇಳಿದರು.
ಜೂನ್ 3, 1976 ರಂದು ಪಾಟ್ನಾದಲ್ಲಿ ಜನಿಸಿದಾಗಿನಿಂದ ಬ್ಯುಸಿನೆಲ್ ಲೀಡರ್ ಆಗುವವರೆಗಿನ ಅಗ್ನಿವೇಶ್ ಅವರ ಪ್ರಯಾಣವನ್ನು ನೆನಪಿಸಿಕೊಂಡ ಅಗರ್ವಾಲ್, 'ಮಧ್ಯಮ ವರ್ಗದ ಬಿಹಾರಿ ಕುಟುಂಬದಿಂದ, ಆತ ಶಕ್ತಿ, ಸಹಾನುಭೂತಿ ಮತ್ತು ಉದ್ದೇಶವನ್ನು ಹೊಂದಿದ್ದ ವ್ಯಕ್ತಿಯಾಗಿ ಬೆಳೆದನು. ಆತ ತಾಯಿಯ ಜೀವನದ ಬೆಳಕು, ರಕ್ಷಣಾತ್ಮಕ ಸಹೋದರ, ನಿಷ್ಠಾವಂತ ಸ್ನೇಹಿತ ಮತ್ತು ಅವರು ಭೇಟಿಯಾದ ಪ್ರತಿಯೊಬ್ಬರನ್ನು ಮುಟ್ಟುವ ಸೌಮ್ಯ ಆತ್ಮವಾಗಿದ್ದನು' ಎಂದು ಅವರು 'X' ನಲ್ಲಿನ ಸುದೀರ್ಘ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಅಗ್ನಿವೇಶ್ ಅಜ್ಮೀರ್‌ನ ಮೇಯೊ ಕಾಲೇಜಿನಲ್ಲಿ ಅಧ್ಯಯನ ಮಾಡಿ, ಫುಜೈರಾ ಗೋಲ್ಡ್ ಅನ್ನು ಸ್ಥಾಪಿಸಿದರು. ನಂತರ ಹಿಂದೂಸ್ತಾನ್ ಜಿಂಕ್‌ನ ಅಧ್ಯಕ್ಷರಾದರು. ಅವರ ಸಾಧನೆಗಳ ಹೊರತಾಗಿಯೂ, ನನ್ನ ಮಗ 'ಸರಳ, ಬೆಚ್ಚಗಿನ ಮತ್ತು ಆಳವಾದ ಮಾನವೀಯ' ಗುಣಗಳುಳ್ಳ ವ್ಯಕ್ತಿಯಾಗಿದ್ದನು. ನನಗೆ, ಅವನು ಮಗನಷ್ಟೇ ಅಲ್ಲದೆ, ಸ್ನೇಹಿತನಾಗಿದ್ದನು. ನನ್ನ ಹೆಮ್ಮೆ. ನನ್ನ ಪ್ರಪಂಚ' ಎಂದಿದ್ದಾರೆ.
'ಸ್ವಾವಲಂಬಿ ಭಾರತ ನಿರ್ಮಿಸುವಲ್ಲಿ ಅಗ್ನಿ ಆಳವಾಗಿ ನಂಬಿಕೆ ಇಟ್ಟಿದ್ದನು. ಅವನು ಆಗಾಗ್ಗೆ 'ಅಪ್ಪಾ, ನಮಗೆ ರಾಷ್ಟ್ರವಾಗಿ ಏನೂ ಕೊರತೆಯಿಲ್ಲ. ನಾವು ಏಕೆ ಹಿಂದೆ ಇರಬೇಕು?' ಎಂದು ನನಗೆ ಹೇಳುತ್ತಿದ್ದ. ಹೀಗಾಗಿ, ನಾವು ಗಳಿಸುವ ಶೇ 75 ಕ್ಕಿಂತ ಹೆಚ್ಚಿನದನ್ನು ಸಮಾಜಕ್ಕೆ ಹಿಂತಿರುಗಿಸಲಾಗುವುದು ಎಂದು ನಾನು ಅಗ್ನಿಗೆ ಭರವಸೆ ನೀಡಿದ್ದೆ. ಇಂದು, ನಾನು ಆ ಭರವಸೆಯನ್ನು ನವೀಕರಿಸುತ್ತೇನೆ ಮತ್ತು ಇನ್ನೂ ಸರಳ ಜೀವನವನ್ನು ನಡೆಸಲು ಸಂಕಲ್ಪ ಮಾಡುತ್ತೇನೆ' ಎಂದು ಅವರು ಹೇಳಿದರು.
'ಬೇಟಾ, ನೀನು ನಮ್ಮ ಹೃದಯಗಳಲ್ಲಿ, ನಮ್ಮ ಕೆಲಸದಲ್ಲಿ ಮತ್ತು ಜೀವನದ ಪ್ರತಿಯೊಂದು ಹಂತದಲ್ಲಿಯೂ ನೀನಿದ್ದೆ. ನೀನಿಲ್ಲದೆ ಈ ಹಾದಿಯಲ್ಲಿ ಹೇಗೆ ನಡೆಯಬೇಕೆಂದು ನನಗೆ ತಿಳಿದಿಲ್ಲ. ಆದರೆ, ನಾನು ನಿನ್ನ ಬೆಳಕನ್ನು ಮುಂದಕ್ಕೆ ಸಾಗಿಸಲು ಪ್ರಯತ್ನಿಸುತ್ತೇನೆ' ಎಂದು ಅಗರ್ವಾಲ್ ಹೃದಯಪೂರ್ವಕ ಸಂದೇಶದೊಂದಿಗೆ ಮುಕ್ತಾಯಗೊಳಿಸಿದರು.
ಅಗರ್ವಾಲ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಮಗಳು ಪ್ರಿಯಾ, ವೇದಾಂತ ಲಿಮಿಟೆಡ್‌ನ ಮಂಡಳಿಯಲ್ಲಿದ್ದಾರೆ ಮತ್ತು ಹಿಂದೂಸ್ತಾನ್ ಜಿಂಕ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದಾರೆ.
ಅಗ್ನಿವೇಶ್ ಅವರು ವೇದಾಂತ ಅಂಗಸಂಸ್ಥೆ ತಲ್ವಾಂಡಿ ರೋಬೋಟ್ ಪವರ್ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು.
Advertisement