ತಿರುವನಂತಪುರಂ: ಆಲಪ್ಪುಳದಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದ ಭಿಕ್ಷುಕನೊಬ್ಬ ₹4.5 ಲಕ್ಷಕ್ಕೂ ಹೆಚ್ಚು ನಗದು ಸಾಗಿಸುತ್ತಿರುವ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಚಾರುಮ್ಮೂಟ್ ಮತ್ತು ಆಲಪ್ಪುಳ ಸಮೀಪದ ಪ್ರದೇಶಗಳಲ್ಲಿ ಪರಿಚಿತ ಮುಖವಾಗಿದ್ದ ಆ ವ್ಯಕ್ತಿಗೆ ಸೇರಿದ ಪಾತ್ರೆಯಲ್ಲಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಸೋಮವಾರ ರಾತ್ರಿ ಅಪಘಾತ ಸಂಭವಿಸಿ ಭಿಕ್ಷುಕ ಗಾಯಗೊಂಡಿದ್ದ ಘಟನೆ ನಡೆದಿದೆ. ಸ್ಥಳೀಯ ನಿವಾಸಿಗಳು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ, ಯಾರೊಂದಿಗೂ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳದೆ, ಆ ವ್ಯಕ್ತಿ ಆಸ್ಪತ್ರೆಯಿಂದ ತಾನಾಗಿಯೇ ಹೊರಟುಹೋಗಿದ್ದಾನೆ.
ಆಸ್ಪತ್ರೆಯ ದಾಖಲೆಗಳ ಪ್ರಕಾರ, ಆ ವ್ಯಕ್ತಿ ತನ್ನ ಹೆಸರು ಅನಿಲ್ ಕಿಶೋರ್ ಎಂದು ಹೇಳಿದ್ದಾನೆ. ಮಂಗಳವಾರ ಬೆಳಿಗ್ಗೆ, ಕಿಶೋರ್ ಅಂಗಡಿಯೊಂದರ ಹೊರಗೆ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಶವದ ಬಳಿ ಕಂಡುಬಂದ ಪಾತ್ರೆಯನ್ನು ಪರಿಶೀಲನೆಗಾಗಿ ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು. ಪ್ಲಾಸ್ಟಿಕ್ ಡಬ್ಬಿಗಳ ಒಳಗೆ ಹಣವನ್ನು ಸಂಗ್ರಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಪಂಚಾಯತ್ ಸದಸ್ಯ ಫಿಲಿಪ್ ಉಮ್ಮನ್ ಅವರ ಸಮ್ಮುಖದಲ್ಲಿ ಪಾತ್ರೆಯನ್ನು ತೆರೆದಾಗ, ಅಧಿಕಾರಿಗಳು ದಿಗ್ಭ್ರಮೆಗೊಂಡಿದ್ದಾರೆ. ಅದರ ತುಂಬ ನಗದು ಇತ್ತು ಮತ್ತು ಒಟ್ಟು ₹4.5 ಲಕ್ಷಕ್ಕಿಂತ ಹೆಚ್ಚು ಹಣ ಪತ್ತೆಯಾಗಿದೆ. ಈ ಪೈಕಿ ನಿಷೇಧಿತ ₹2,000 ನೋಟುಗಳು ಮತ್ತು ವಿದೇಶಿ ಕರೆನ್ಸಿ ಸೇರಿವೆ.
ಸ್ಥಳೀಯರ ಪ್ರಕಾರ, ಕಿಶೋರ್ ಪ್ರತಿದಿನ ಭಿಕ್ಷೆ ಬೇಡುತ್ತಿದ್ದರು. ಆಹಾರಕ್ಕಾಗಿ ಹಣ ಕೇಳುತ್ತಿದ್ದರು. ಅವರು ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಹೊಂದಿದ್ದಾರೆ ಎಂದು ಯಾರಿಗೂ ತಿಳಿದಿರಲಿಲ್ಲ. ಈಗ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ ಎಂದು ಪಂಚಾಯತ್ ಸದಸ್ಯ ಉಮ್ಮನ್ ಹೇಳಿದ್ದಾರೆ.
ಆ ವ್ಯಕ್ತಿಯ ಕುಟುಂಬ ಸದಸ್ಯರು ಮುಂದೆ ಬಂದರೂ ಅಥವಾ ಇಲ್ಲದಿದ್ದರೂ, ಹಣವನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Advertisement