

ನೋಯ್ಡಾ: ನೋಯ್ಡಾದ ಸೆಕ್ಟರ್ 150ಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಸಾವನ್ನಪ್ಪಿದ ಟೆಕ್ಕಿಯ ತಂದೆ ಪುತ್ರನ ಸಾವಿನ ಅಂತಿಮ ಕ್ಷಣದ ಪರಿಸ್ಥಿತಿ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಹೌದು.. ದಟ್ಟ ಮಂಜಿನಿಂದಾಗಿ, ಟೆಕ್ಕಿಯೊಬ್ಬರು ಕಾರು ಸಮೇತ 70 ಅಡಿ ಆಳದ ನೀರಿನ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಧಾರುಣ ಘಟನೆ ನೋಯ್ಡಾದಲ್ಲಿ ನಡೆದಿತ್ತು. ನೋಯ್ಡಾದ ಸೆಕ್ಟರ್ 150ಯಲ್ಲಿ ಟೆಕ್ಕಿಯೋರ್ವ ಕಾರಿನಲ್ಲಿ ತೆರಳುತ್ತಿದ್ದಾಗ ದಟ್ಟಮಂಜಿನ ಪರಿಣಾಮ ರಸ್ತೆ ಕಾಣದೇ ಕಾರು ಸಮೇತ ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಶುಕ್ರವಾರ ರಾತ್ರಿ ಸೆಕ್ಟರ್ 150 ರ ಬಳಿ ಈ ದುರಂತ ಘಟನೆ ನಡೆದಿದ್ದು, ಟೆಕ್ಕಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ದಟ್ಟವಾದ ಮಂಜು ಮತ್ತು ಕಡಿಮೆ ಗೋಚರತೆಯಿಂದಾಗಿ ಕಾರು ನಿಯಂತ್ರಣ ತಪ್ಪಿ ರಸ್ತೆ ತಿರುವಿನ ಬಳಿ ಇರುವ ನೀರು ತುಂಬಿದ ನಿರ್ಮಾಣ ಗುಂಡಿಗೆ ಡಿಕ್ಕಿ ಹೊಡೆದಿದೆ.
ಕಾರು ಎರಡು ಗಂಟೆಗಳ ಕಾಲ ಕಾರು ನೀರಿನ ಮೇಲೆ ತೇಲುತ್ತಿತ್ತು. ಆದರೆ ಯಾರ ಕಣ್ಣಿಗೂ ಬೀಳಲಿಲ್ಲ, ಇದೇ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಡೆಲಿವರಿ ಏಜೆಂಟ್ ಅದನ್ನು ಗಮನಿಸಿ ಕೂಡಲೇ ಕೆಳಗೆ ದುಮುಕಿದ್ದಾರೆ. ಸತತ ಹರಸಾಹಸದ ಹೊರತಾಗಿಯೂ ಟೆಕ್ಕಿ ಸಾವನ್ನಪ್ಪಿದ್ದಾರೆ.
ಪುತ್ರನ ಜೀವ ಉಳಿಸರು ತಂದೆ ಹರಸಾಹಸ
ಇನ್ನು ಈ ದುರಂತದ ವೇಳೆ ಟೆಕ್ಕಿ ಯುವರಾಜ್ ಮೆಹ್ತಾ ಸಾವಿಗೂ ಮುನ್ನ ತನ್ನ ತಂದೆಗೆ ಕರೆ ಮಾಡಿ, ಅಪ್ಪಾ ನನಗೆ ಸಾಯಲು ಇಷ್ಟವಿಲ್ಲ, ನಾನು ಹೀಗೆ ನೀರಿನಲ್ಲಿ ಬಿದ್ದಿದ್ದೇನೆ ಬಂದು ಕಾಪಾಡಿ ಎಂದು ಬೇಡಿಕೊಂಡಿದ್ದರು. ಫೋನ್ನಲ್ಲಿ ಎಂಜಿನಿಯರ್ ಮಗನ ಈ ವಿನಂತಿಯನ್ನು ಕೇಳಿದ ನಂತರ, ತಂದೆ ರಾಜ್ ಕುಮಾರ್ ಮೆಹ್ತಾ ಅವರು ದಟ್ಟ ಮಂಜು ಮತ್ತು ತೀವ್ರ ಚಳಿಯ ನಡುವೆಯೂ ಘಟನಾ ಸ್ಥಳಕ್ಕೆ ತೆರಳಿದ್ದರು.
ಘಟನಾ ಸ್ಥಳಕ್ಕೆ ತೆರಳಿದ ಕೂಡಲೇ ಮಗನನ್ನು ಉಳಿಸಲು ಪೊಲೀಸರಿಗೆ ಕರೆ ಮಾಡಿದರು. ಕೂಡಲೇ ಬಂದ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕದಳದೊಂದಿಗೆ ಸತತ ಕಾರ್ಯಾಚರಣೆ ನಡೆಸಿದರು. ಆದರೆ ಅಷ್ಟು ಹೊತ್ತಿಗಾಗಲೇ ಕಾರಿನೊಳಗೆ ನೀರು ನುಗ್ಗಿ ಅದು ನೀರಿನಲ್ಲಿ ಮುಳಿಗಿತ್ತು.
ಅತ್ತ ಕೆಳಗೆ ಎಂಜಿನಿಯರ್ ಮಗ ನೀರಿನಲ್ಲಿ ಮುಳುಗುತ್ತಿದ್ದರೆ, ಇತ್ತ ಮೇಲೆ ನಿಂತಿದ್ದ ಅಸಹಾಯಕ ತಂದೆ ತನ್ನ ಎಲ್ಲಾ ಶಕ್ತಿಯನ್ನು ಬಳಸಿ ಮಗನ ಉಳಿಸಲು ಒದ್ದಾಡುತ್ತಿದ್ದರು. ಆದರೆ ಅವರು ಮಗನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣ ಮುಂದೆಯೇ ಪುತ್ರನ ಸಾವು ಕಂಡ ತಂದೆ ಅಸಹಾಯಕರಾಗಿ ಅಳುತ್ತಾ ನಿಂತಿದ್ದರು. ಚಿಕ್ಕ ಮಗನನ್ನು ಕಳೆದುಕೊಂಡ ನಂತರ, ತಂದೆಯ ಸ್ಥಿತಿ ದಯನೀಯವಾಗಿ ಮಾರ್ಪಟ್ಟಿತ್ತು.
ಕೈಲಾದ ಎಲ್ಲವನ್ನೂ ಮಾಡಿದೆ.. ಆದರೂ ಪುತ್ರನ ಉಳಿಸಿಕೊಳ್ಳಲಾಗಲಿಲ್ಲ
ಇನ್ನು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಂದೆ ರಾಜ್ ಕುಮಾರ್ ಮೆಹ್ತಾ ಅಳುತ್ತಲೇ, 'ನನ್ನ ಮಗನನ್ನು ಉಳಿಸಲು ನಾನು ನನ್ನ ಎಲ್ಲಾ ಶಕ್ತಿ ಬಳಿಸಿದೆ. ಆದರೆ ಅವನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಭಾವುಕರಾದರು. ಅಂತೆಯೇ ದಟ್ಟವಾದ ಮಂಜಿನ ನಡುವೆ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಅಂತೆಯೇ ತಮ್ಮ ಪುತ್ರನ ಕುರಿತು ಮಾತನಾಡಿದ ಅವರು, ಯುವರಾಜ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ಸಾಕಷ್ಟು ಪರಿಶ್ರಮ ಪಟ್ಟಿದ್ದ. ಅಂತೆಯೇ ತನ್ನ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಯಾರು ಈ ಯುವರಾಜ್ ಮೆಹ್ತಾ?
ಮೂಲತಃ ಬಿಹಾರದ ಸೀತಾಮರ್ಹಿ ಮೂಲದ ಯುವರಾಜ್ ಅವರು ಗುರುಗ್ರಾಮದ ಡನ್ಹಂಬಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಯುವರಾಜ್ ಅವರ ತಾಯಿ ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರ ಸಹೋದರಿ ಯುಕೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಹೇಳಿದ್ದಾರೆ.
ದೂರು ದಾಖಲು
ಇನ್ನುಘಟನೆಯ ನಂತರ, ಮೆಹ್ತಾ ಅವರ ಕುಟುಂಬವು ದೂರು ದಾಖಲಿಸಿ, ಅಧಿಕಾರಿಗಳು ಸರ್ವಿಸ್ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳನ್ನು ಅಳವಡಿಸಿಲ್ಲ ಅಥವಾ ಚರಂಡಿಗಳನ್ನು ಮುಚ್ಚಿಲ್ಲ ಎಂದು ಆರೋಪಿಸಿದರು. ದಟ್ಟವಾದ ಮಂಜಿನ ನಡುವೆ ರಸ್ತೆಯ ಉದ್ದಕ್ಕೂ ಪ್ರತಿಫಲಕಗಳು ಇಲ್ಲದಿರುವುದು ಅಪಘಾತಕ್ಕೆ ಕಾರಣ ಎಂದು ತಂದೆ ಹೇಳಿದರು.
ಈ ಕುರಿತು ಮಾಹಿತಿ ನೀಡಿದ ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯ ಉಸ್ತುವಾರಿ ಸರ್ವೇಶ್ ಕುಮಾರ್ ಅವರು, 'ಪ್ರಕರಣದಲ್ಲಿ ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ತನಿಖೆ ನಡೆಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಸ್ಥಳೀಯರ ಆಕ್ರೋಶ, ಪ್ರತಿಭಟನೆ
ಈ ಘಟನೆಯು ನಿವಾಸಿಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು, ಕೆಲವು ಸ್ಥಳೀಯರು ಪ್ರತಿಭಟನೆಗಳನ್ನು ಆಯೋಜಿಸಿ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಸರ್ವಿಸ್ ರಸ್ತೆಯಲ್ಲಿ ಪ್ರತಿಫಲಕಗಳು ಮತ್ತು ಸೂಚನಾ ಫಲಕಗಳನ್ನು ಅಳವಡಿಸುವಂತೆ ಅವರು ಪದೇ ಪದೇ ಒತ್ತಾಯಿಸಿದ್ದರು, ಆದರೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆರೋಪಿಸಿದರು. ಸ್ವಲ್ಪ ಸಮಯದ ನಂತರ, ಅಧಿಕಾರಿಗಳು ಆಳವಾದ ಕಂದಕವನ್ನು ಹಲವಾರು ಟನ್ ಕಸ ಮತ್ತು ಅವಶೇಷಗಳಿಂದ ತುಂಬಿಸಿ ಮುಚ್ಚಿದರು.
Advertisement