

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬೆಂಗಾವಲು ಕಾರೊಂದು ಅಪಘಾತಕ್ಕೀಡಾಗಿದೆ. ಅಕ್ಷಯ್ ಕುಮಾರ್ ಹಾಗೂ ಅವರ ಪತ್ನಿ ಟ್ವಿಂಕಲ್ ಖನ್ಹಾ ವಿದೇಶ ಪ್ರವಾಸ ಮುಗಿಸಿ ಮುಂಬೈನ ವಿಮಾನ ನಿಲ್ದಾಣದಿಂದ ಮನೆಗೆ ಬರುವಾಗ ಈ ಅಪಘಾತ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಕಾರೊಂದು ಮೊದಲು ಆಟೋಗೆ ಡಿಕ್ಕಿ ಹೊಡೆದಿದೆ.
ತದನಂತರ ಈ ಕಾರು ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ, ಅಕ್ಷಯ್ ಕುಮಾರ್ ಪ್ರಯಾಣಿಸುತ್ತಿದ್ದ ಕಾರಿಗೂ ತಾಗಿದೆ ಎಂದು ವರದಿಯಾಗಿದೆ. ಅಕ್ಷಯ್ ಕುಮಾರ್ ಅವರ ಭದ್ರತಾ ಸಿಬ್ಬಂದಿಯ ಕಾರು ಉರುಳಿ ಬಿದ್ದಿದೆ.
ಸೋಮವಾರ ರಾತ್ರಿ ಜುಹುವಿನ ಮುಕ್ತೇಶ್ವರ ರಸ್ತೆಯಲ್ಲಿ ಈ ಅಪಘಾತದ ಘಟನೆ ನಡೆದಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಆಟೋರಿಕ್ಷಾ ಚಾಲಕ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮರ್ಸಿಡಿಸ್ ಚಾಲಕನ ವಿರುದ್ಧ ಜುಹು ಪೊಲೀಸರು ಅಜಾಗರೂಕ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣವನ್ನು ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Advertisement