'ಗೋಮೂತ್ರ' ಕುಡಿಯಲು ಒತ್ತಾಯ; ಉದ್ಧವ್ ಠಾಕ್ರೆ ಬಣದ ಶಿವಸೇನೆ ನಾಯಕ, ಕುಟುಂಬದ ವಿರುದ್ಧ ದೂರು ನೀಡಿದ ಸೊಸೆ!

ತನ್ನ ಅತ್ತೆ-ಮಾವಂದಿರು ತನಗೆ ಮಾನಸಿಕವಾಗಿ ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ ಹಾಗೂ ಪದೇ ಪದೆ ಹಸಿವಿನಿಂದ ಇರಿಸಿದ್ದಾರೆ ಎಂದು ಗಿರಿಜಾ ರಾವುತ್ ಆರೋಪಿಸಿದ್ದಾರೆ.
Shiv Sena (UBT) leader Vinayak Raut
ಶಿವಸೇನೆ (ಯುಬಿಟಿ) ನಾಯಕ ವಿನಾಯಕ್ ರಾವುತ್
Updated on

ಮಹಾರಾಷ್ಟ್ರದ ಥಾಣೆಯಲ್ಲಿರುವ ಪ್ರಭಾವಿ ಕುಟುಂಬವೊಂದರಲ್ಲಿನ ಕೌಟುಂಬಿಕ ಕಲಹ ಇದೀಗ ಮೂಢನಂಬಿಕೆ ಮತ್ತು ಮಾಂತ್ರಿಕ ಆಚರಣೆಗಳ ಆರೋಪಗಳೊಂದಿಗೆ ತಿರುವು ಪಡೆದುಕೊಂಡಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷಕ್ಕೆ ಸೇರಿದ ಮಾಜಿ ಸಂಸದ ವಿನಾಯಕ್ ರಾವುತ್ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಅವರ ಸೊಸೆ ಗೋಮೂತ್ರ ಕುಡಿಯಲು ಒತ್ತಾಯಿಸಿದ್ದಾರೆ ಮತ್ತು ಮೂಢನಂಬಿಕೆ ಆಚರಣೆಗಳಿಗಾಗಿ ತನ್ನ ಕೂದಲನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ.

ಮೂಢನಂಬಿಕೆ ವಿರೋಧಿ ಕಾಯ್ದೆಯಡಿ ವಿನಾಯಕ ರಾವುತ್, ಅವರ ಪತ್ನಿ ಮತ್ತು ಕೌನ್ಸಿಲರ್ ಆಗಿರುವ ಪುತ್ರ ಗಿತೇಶ್ ರಾವುತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್‌ನಲ್ಲಿ ಫಿರೋಜ್ ಮತ್ತು ಖಾಜಿ ಎಂಬ ಇಬ್ಬರು ಮಾಂತ್ರಿಕರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

ತನ್ನ ಅತ್ತೆ-ಮಾವಂದಿರು ತನಗೆ ಮಾನಸಿಕವಾಗಿ ಕಿರುಕುಳ ನೀಡಿ, ಹಲ್ಲೆ ನಡೆಸಿದ್ದಾರೆ ಹಾಗೂ ಪದೇ ಪದೆ ಹಸಿವಿನಿಂದ ಇರಿಸಿದ್ದಾರೆ ಎಂದು ಗಿರಿಜಾ ರಾವುತ್ ಆರೋಪಿಸಿದ್ದಾರೆ.

'ನಾನು ಕಳೆದ ಏಳು ವರ್ಷಗಳಿಂದ ಸಾಮಾಜಿಕ, ಮಾನಸಿಕ ಮತ್ತು ಭಾವನಾತ್ಮಕ ಕಿರುಕುಳವನ್ನು ಅನುಭವಿಸಿದ್ದೇನೆ. ಅವರು ರಾಜಕೀಯ ಹಿನ್ನೆಲೆಯುಳ್ಳ ಹಾಗೂ ಪ್ರಭಾವಿ ಕುಟುಂಬಕ್ಕೆ ಸೇರಿದವರು. ಹೀಗಾಗಿ, ಈ ಹಿಂದೆ ದೂರು ನೀಡಲು ನನಗೆ ಧೈರ್ಯ ಬಂದಿರಲಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ತನ್ನ ಗಂಡನ ಬಂಜೆತನದ ಸಮಸ್ಯೆಗಳ ಬಗ್ಗೆ ಕುಟುಂಬವು ತನ್ನನ್ನು ಮಾಂತ್ರಿಕರ ಬಳಿಗೆ ಕರೆದೊಯ್ದಿದೆ. ಕುಟುಂಬದ ಮುಖ್ಯಸ್ಥನಾಗಿದ್ದರೂ ವಿನಾಯಕ್ ರಾವುತ್ ಎಂದಿಗೂ ತನ್ನ ಪರವಾಗಿ ನಿಲ್ಲಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಊಟಿಯಲ್ಲಿ ತಮ್ಮ ಹನಿಮೂನ್ ಸಮಯದಲ್ಲಿ ತನ್ನ ಪತಿ ದೈಹಿಕ ಸಂಬಂಧವನ್ನು ನಿರಾಕರಿಸಿದ್ದಾರೆ. ತಾನು ಅವರಿಗೆ ಹತ್ತಿರವಾಗಲು ಪ್ರಯತ್ನಿಸಿದಾಗಲೆಲ್ಲ, ಅವರು ತನ್ನನ್ನು ದೂರ ತಳ್ಳಿದ್ದಾರೆ. ಅಂತರರಾಷ್ಟ್ರೀಯ ಸ್ಥಳದಲ್ಲಿ ಮಾತ್ರ ತಾನು ನಿನ್ನೊಂದಿಗೆ ನಿಕಟವಾಗಿರಲು ಸಾಧ್ಯ. ಭಾರತದೊಳಗೆ ಅಲ್ಲ ಎಂದು ಅವರು ನನಗೆ ಹೇಳಿದ್ದರು ಎಂದು ದೂರಿದ್ದಾರೆ.

Shiv Sena (UBT) leader Vinayak Raut
ಗೋಮೂತ್ರ ಒಂದು ಔಷಧ: IIT Madras ನಿರ್ದೇಶಕ ಕಾಮಕೋಟಿ ಹೇಳಿಕೆ ವಿಡಿಯೋ ವೈರಲ್!

ಊಟಿಯಿಂದ ಮರಳಿದ ನಂತರ, ತಮ್ಮ ಪೂರ್ವಜರ ಊರಾದ ತಲ್ಗಾಂವ್‌ನಲ್ಲಿ ನಡೆಯಲಿದ್ದ ಆರತಕ್ಷತೆ ಸಮಾರಂಭಕ್ಕೆ ತೆರಳುತ್ತಿದ್ದಾಗ ಅವರು ಸಾರ್ವಜನಿಕವಾಗಿ ತಮ್ಮನ್ನು ಅವಮಾನಿಸಿದರು. ನಿಧಾನವಾಗಿ ನಡೆಯುತ್ತಿದ್ದಕ್ಕಾಗಿ ಅವರು ಎಲ್ಲರ ಎದುರೇ ನನ್ನ ಮೇಲೆ ರೇಗಾಡಿದರು ಎಂದು ಆಕೆ ಆರೋಪಿಸಿದ್ದಾರೆ.

ಇಂತಹ ಜಗಳಗಳು ಆಗಾಗ್ಗೆ ನಡೆಯುತ್ತಿದ್ದವು ಮತ್ತು ಆಗ ಸುತ್ತಮುತ್ತಲಿನ ಪರಿಸರದ ಬಗ್ಗೆ ಅವರು ಕಿಂಚಿತ್ತೂ ಗಮನ ಹರಿಸುತ್ತಿರಲಿಲ್ಲ. ಸಮಯ ಅಥವಾ ಸ್ಥಳದ ಪರಿವೆಯೇ ಇಲ್ಲದೆ, ತಮ್ಮ ಕೋಪ ತಣ್ಣಗಾಗುವವರೆಗೂ ಅವರು ವಾದಿಸುತ್ತಲೇ ಇರುತ್ತಿದ್ದರು. ಮುಂಬೈನ ಮನೆಯಲ್ಲಿ ತಾವು ಜಗಳವಾಡುವುದನ್ನು ಕೇಳಿಸಿಕೊಂಡಿದ್ದರಿಂದ ತಮ್ಮ ಅತ್ತೆಗೆ ಎಲ್ಲವೂ ತಿಳಿದಿತ್ತು ಎಂದು ಗಿರಿಜಾ ರಾವುತ್ ಹೇಳಿದರು.

2018ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ, ತನ್ನ ಪತಿ ತನ್ನನ್ನು ಅವಾಯ್ಡ್ ಮಾಡುತ್ತಲೇ ಇದ್ದರು. ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದಾಗ, ನನ್ನ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ದೈಹಿಕವಾಗಿ ಹತ್ತಿರವಾದರೆ ಅವರು ಸಾಯುತ್ತಾರೆ ಎಂದು ಎಚ್ಚರಿಸಲಾಯಿತು.

ತನ್ನ ಪತಿ ಮಾತ್ರವಲ್ಲದೆ ಕುಟುಂಬದ ಇತರರು ನನಗೆ ಮಾನಸಿಕ ಕಿರುಕುಳ, ನಿಂದನೀಯ ನಡವಳಿಕೆ, ಕೌಟುಂಬಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆಯ ಆರೋಪಗಳ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ವಿನಾಯಕ ರಾವುತ್ ಅವರನ್ನು ಉದ್ಧವ್ ಠಾಕ್ರೆ ಅವರ ಆಪ್ತ ಸಹವರ್ತಿ ಎಂದು ಪರಿಗಣಿಸಲಾಗುತ್ತದೆ. ಈ ಆರೋಪಗಳಿಗೆ ಅವರು ಮತ್ತು ಅವರ ಕುಟುಂಬ ಇನ್ನೂ ಪ್ರತಿಕ್ರಿಯಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com