

ಭೋಪಾಲ್: ನಟಿ-ಮಾಡೆಲ್ ತ್ವಿಷಾ ಶರ್ಮಾ ಸಾವಿನ ಪ್ರಕರಣದಲ್ಲಿ ತನಿಖೆಯ ದಿಕ್ಕನ್ನೇ ಬದಲಾಯಿಸಬಹುದಾದ ಮಹತ್ವದ ಬೆಳವಣಿಗೆ ನಡೆದಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಎರಡನೇ ಮರಣೋತ್ತರ ಪರೀಕ್ಷೆ ನಡೆಸಿದ ದೆಹಲಿಯ ಏಮ್ಸ್ (AIIMS) ವೈದ್ಯಕೀಯ ಮಂಡಳಿ, ನೇಣು ಬಿಗಿಯಲು ಬಳಸಲಾಗಿದೆ ಎನ್ನಲಾದ ಜಿಮ್ನಾಸ್ಟಿಕ್ಸ್ ಬೆಲ್ಟ್‌ನಲ್ಲಿ ಚರ್ಮದ ಕಣಗಳು ಪತ್ತೆಯಾಗಿದ್ದು, ಅವು ತ್ವಿಷಾ ಕುತ್ತಿಗೆಯ ಗಾಯದ ಮಾದರಿಯೊಂದಿಗೆ ಹೊಂದಿಕೆಯಾಗುತ್ತವೆ ಎಂದು ತನ್ನ ಅಂತಿಮ ಫೊರೆನ್ಸಿಕ್ ವರದಿಯಲ್ಲಿ ಉಲ್ಲೇಖಿಸಿದೆ.
ಆದರೆ, ನ್ಯಾಯಾಲಯದ ನಿರ್ದೇಶನದಂತೆ ವರದಿಯ ಅಂತಿಮ ಅಭಿಪ್ರಾಯಗಳನ್ನು ಗೌಪ್ಯವಾಗಿಡಲಾಗಿದ್ದು, ಅವುಗಳನ್ನು ಬಹಿರಂಗಪಡಿಸಲಾಗಿಲ್ಲ.
ವರದಿಯ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಏಮ್ಸ್‌ನ ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ಅವರು, ವೈದ್ಯಕೀಯ ಮಂಡಳಿ ಸುಮಾರು ಒಂದು ತಿಂಗಳ ಕಾಲ ದೇಶ-ವಿದೇಶಗಳ ವೈದ್ಯಕೀಯ ಅಧ್ಯಯನಗಳು ಮತ್ತು ಲಭ್ಯವಿದ್ದ ಎಲ್ಲ ವೈಜ್ಞಾನಿಕ ದಾಖಲೆಗಳನ್ನು ಪರಿಶೀಲಿಸಿ ಸಮಗ್ರ ವರದಿ ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.
ಈ ಪ್ರಕರಣವನ್ನು ಪ್ರತಿಯೊಂದು ಆಯಾಮದಿಂದ ಸೂಕ್ಷ್ಮವಾಗಿ ಪರಿಶೀಲಿಸಿದ್ದೇವೆ. ವೈಜ್ಞಾನಿಕ ಆಧಾರಗಳೊಂದಿಗೆ ಸ್ಪಷ್ಟ ಅಭಿಪ್ರಾಯ ನೀಡಲಾಗಿದೆ. ಸತ್ಯ ಮತ್ತು ನ್ಯಾಯದ ಹಿತದೃಷ್ಟಿಯಿಂದ ಸಿಬಿಐ ಹಾಗೂ ನ್ಯಾಯಾಂಗಕ್ಕೆ ಇದು ಅತ್ಯಂತ ಸ್ಪಷ್ಟವಾದ ವರದಿಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ನ್ಯಾಯಾಲಯದ ನಿರ್ದೇಶನದಂತೆ ವರದಿ ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಕೆಯಾಗಿರುವುದರಿಂದ ಅದರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಐವರು ಸದಸ್ಯರ ವೈದ್ಯಕೀಯ ಮಂಡಳಿಯು 11 ಪುಟಗಳ ವರದಿಯನ್ನು ಜುಲೈ 10ರಂದು ಸಿಬಿಐಗೆ ಸೀಲ್ ಮಾಡಿದ ಲಕೋಟೆಯಲ್ಲಿ ಸಲ್ಲಿಸಿದೆ. ಈ ಕ್ರಮವನ್ನು ಮಧ್ಯಪ್ರದೇಶ ಹೈಕೋರ್ಟ್ ಆದೇಶದಂತೆ ಕೈಗೊಳ್ಳಲಾಗಿದೆ.
ತ್ವಿಷಾ ಶರ್ಮಾ ನೇಣು ಬಿಗಿದಿದ್ದಾಗಿ ಹೇಳಲಾದ ಲೋಹದ ಉಂಗುರ ಹೊಂದಿದ್ದ ಜಿಮ್ನಾಸ್ಟಿಕ್ಸ್ ಬೆಲ್ಟ್ ನಿಜವಾಗಿಯೂ ದೌರ್ಜನ್ಯದಲ್ಲಿ ಬಳಸಲಾಗಿತ್ತೇ ಮತ್ತು ಅದು ಕುತ್ತಿಗೆಯ ಗಾಯಗಳೊಂದಿಗೆ ಹೊಂದಿಕೆಯಾಗುತ್ತದೆಯೇ ಎಂಬುದು ಈ ಪ್ರಕರಣದ ಪ್ರಮುಖ ಪ್ರಶ್ನೆಯಾಗಿತ್ತು.
ಆರಂಭಿಕ ಮರಣೋತ್ತರ ಪರೀಕ್ಷೆಯ ವೇಳೆ ಆ ಬೆಲ್ಟ್ ಅನ್ನು ವೈದ್ಯಕೀಯ ಮಂಡಳಿಯ ಮುಂದೆ ಹಾಜರುಪಡಿಸದ ಕಾರಣ, ಗಾಯಗಳು ಮತ್ತು ಬೆಲ್ಟ್ ನಡುವಿನ ಸಂಬಂಧವನ್ನು ವೈದ್ಯರು ದೃಢಪಡಿಸಲು ಸಾಧ್ಯವಾಗಿರಲಿಲ್ಲ.
ಇದೇ ಕಾರಣಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಮಧ್ಯಪ್ರವೇಶಿಸಿ, ಏಮ್ಸ್ ದೆಹಲಿಯ ತಜ್ಞ ವೈದ್ಯರ ತಂಡದಿಂದ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಆದೇಶಿಸಿತ್ತು.
ಈ ವರ್ಷದ ಮೇ 12ರಂದು, ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ಅವರ ಸೊಸೆ ತ್ವಿಷಾ ಶರ್ಮಾ ಭೋಪಾಲ್‌ನಲ್ಲಿರುವ ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಪ್ರಾಥಮಿಕ ಪೊಲೀಸ್ ತನಿಖೆ ಹಾಗೂ ಮೊದಲ ಮರಣೋತ್ತರ ಪರೀಕ್ಷೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆರೋಪಿಸಿ ತ್ವಿಷಾ ಕುಟುಂಬ ಸದಸ್ಯರು ಮಧ್ಯಪ್ರದೇಶ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಎರಡನೇ ಮರಣೋತ್ತರ ಪರೀಕ್ಷೆಗೆ ಆದೇಶ ನೀಡುವುದರ ಜೊತೆಗೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು. AIIMS ವೈದ್ಯಕೀಯ ಮಂಡಳಿಯ ಅಂತಿಮ ವರದಿ ಇದೀಗ ಸಿಬಿಐ ತನಿಖೆಯಲ್ಲಿ ಮಹತ್ವದ ಸಾಕ್ಷ್ಯವಾಗುವ ಸಾಧ್ಯತೆ ಇದೆ.