Nitin Gadkari
ನಿತಿನ್ ಗಡ್ಕರಿ

INTERVIEW | ಎಥೆನಾಲ್ ವಿರುದ್ಧ ಪ್ರಚಾರ ಪ್ರಾಯೋಜಿತ; ದೇಶದ ಹಿತಾಸಕ್ತಿ ಮೇಲೆ ನನ್ನ ಗಮನ: ನಿತಿನ್ ಗಡ್ಕರಿ

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಪ್ರತಿನಿಧಿ ಪರ್ವೇಜ್ ಸುಲ್ತಾನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ವಿರುದ್ಧದ ವೈಯಕ್ತಿಕ ಆರೋಪಗಳು ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ಹಣ ಕಳ್ಳತನದ ಆರೋಪಗಳ ಕುರಿತು ಮಾತನಾಡಿದ್ದಾರೆ.
Published on

ನವದೆಹಲಿ: ಇಂಧನದಲ್ಲಿ ಎಥೆನಾಲ್ ಮಿಶ್ರಣ (E20) ಕುರಿತು ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ತಮ್ಮ ವಿರುದ್ಧ ನಡೆಯುತ್ತಿರುವ ನಕಾರಾತ್ಮಕ ಪ್ರಚಾರದ ಹಿಂದೆ ಪಳೆಯುಳಿಕೆ ಇಂಧನ (Fossil Fuel) ಆಮದು ವ್ಯವಸ್ಥೆಯಿಂದ ಲಾಭ ಪಡೆಯುವ ಲಾಬಿ ಇದೆ ಎಂದು ಆರೋಪಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ (The New Indian Express) ಪ್ರತಿನಿಧಿ ಪರ್ವೇಜ್ ಸುಲ್ತಾನ್ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ತಮ್ಮ ವಿರುದ್ಧದ ವೈಯಕ್ತಿಕ ಆರೋಪಗಳು ಹಾಗೂ ಅಯೋಧ್ಯೆಯ ರಾಮಮಂದಿರ ದೇಣಿಗೆ ಹಣ ಕಳ್ಳತನದ ಆರೋಪಗಳ ಕುರಿತು ಮಾತನಾಡಿದ ಅವರು, ಟೀಕೆಗಳಿಂದ ತಾವು ವಿಚಲಿತರಾಗಿಲ್ಲ. ಪಳೆಯುಳಿಕೆ ಇಂಧನ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯ ನಿಯಂತ್ರಿಸುವುದು ಹಾಗೂ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದೇ ತಮ್ಮ ಗುರಿ ಎಂದು ಹೇಳಿದರು.

ಸಂದರ್ಶನದ ಮುಖ್ಯಾಂಶಗಳು:

Q

ಪ್ರಶ್ನೆ: E20 ಪೆಟ್ರೋಲ್‌ನಿಂದ ಸಾಮಾನ್ಯ ಪೆಟ್ರೋಲ್‌ಗೆ ವಿನ್ಯಾಸಗೊಳಿಸಲಾದ ವಾಹನಗಳಿಗೆ ಹಾನಿಯಾಗುತ್ತದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ನಿಮ್ಮ ಪ್ರತಿಕ್ರಿಯೆ?

A

ಮೊದಲು ಎಥೆನಾಲ್ ಹಾಗೂ ಪರ್ಯಾಯ ಇಂಧನಗಳನ್ನು ಏಕೆ ಉತ್ತೇಜಿಸುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಭಾರತವು ಪ್ರತಿ ವರ್ಷ ಸುಮಾರು 22 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತದೆ. ಈ ಹಣ ದೇಶದಿಂದ ಹೊರಹೋಗುತ್ತದೆ. ಜೊತೆಗೆ ಇವು ಪರಿಸರ ಮಾಲಿನ್ಯಕ್ಕೂ ಪ್ರಮುಖ ಕಾರಣ.

ನನ್ನ ಉದ್ದೇಶ ಆಮದನ್ನು ಕಡಿಮೆ ಮಾಡುವುದು, ಮಾಲಿನ್ಯ ತಗ್ಗಿಸುವುದು ಮತ್ತು ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದು. ಆರಂಭದಿಂದಲೂ ಕೃಷಿಯನ್ನು ಇಂಧನ ಮತ್ತು ಶಕ್ತಿ ಕ್ಷೇತ್ರದತ್ತ ವೈವಿಧ್ಯಗೊಳಿಸುವ ದೃಷ್ಟಿಕೋನವನ್ನೇ ಹೊಂದಿದ್ದೇನೆ. ನಾನು ಕೇವಲ ಎಥೆನಾಲ್ ಮಾತ್ರವಲ್ಲ, ಮೆಥೆನಾಲ್, ಬಯೋ-ಸಿಎನ್‌ಜಿ, ವಿದ್ಯುತ್ ವಾಹನಗಳು ಮತ್ತು ಹೈಡ್ರೋಜನ್ ಸೇರಿದಂತೆ ಹಲವು ಪರ್ಯಾಯ ಇಂಧನಗಳ ಬಗ್ಗೆ ಮಾತನಾಡಿದ್ದೇನೆ.

ಎಥೆನಾಲ್ ಭಾರತಕ್ಕೆ ಹೊಸ ಪ್ರಯೋಗವಲ್ಲ. ಬ್ರೆಜಿಲ್, ಅಮೆರಿಕ, ಥಾಯ್ಲೆಂಡ್ ಹಾಗೂ ಹಲವು ಯುರೋಪಿಯನ್ ರಾಷ್ಟ್ರಗಳು ಹಲವು ದಶಕಗಳಿಂದ ಎಥೆನಾಲ್ ಬಳಸುತ್ತಿವೆ. ಬ್ರೆಜಿಲ್‌ನಲ್ಲಿ 1970ರಿಂದಲೇ 100 ಶೇಕಡಾ ಎಥೆನಾಲ್ ಬಳಸಬಹುದಾದ ಫ್ಲೆಕ್ಸ್-ಫ್ಯುಯೆಲ್ ಎಂಜಿನ್‌ಗಳು ಬಳಕೆಯಲ್ಲಿವೆ.

ಎಥೆನಾಲ್ ಮಿಶ್ರಣ ಜಾರಿಗೆ ಮುನ್ನ ವಾಹನ ತಯಾರಕರು ಹಾಗೂ ಪರೀಕ್ಷಾ ಸಂಸ್ಥೆಗಳು ವ್ಯಾಪಕ ಪರೀಕ್ಷೆ ನಡೆಸಿದ್ದವು. ಆಟೋಮೊಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ಯಶಸ್ವಿ ಪರೀಕ್ಷೆಗಳ ಬಳಿಕ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಹೊಸ ವಾಹನಗಳಲ್ಲಿ ವಾಷರ್‌ಗಳಂತಹ ಬಿಡಿಭಾಗಗಳಲ್ಲೂ ಅಗತ್ಯ ಬದಲಾವಣೆ ಮಾಡಲಾಗಿದೆ.

ಭಾರತದಲ್ಲಿ ವಾಹನಗಳನ್ನು ತಯಾರಿಸುವ ಜಾಗತಿಕ ಕಂಪನಿಗಳು ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತವೆ. ಎಥೆನಾಲ್ ಸುರಕ್ಷಿತವಾಗಿರದಿದ್ದರೆ, ಅವು ಎಂದಿಗೂ ಎಥೆನಾಲ್ ಹೊಂದಾಣಿಕೆಯ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿರಲಿಲ್ಲ.

ನಾಲ್ಕು ವರ್ಷಗಳ ಹಿಂದೆ ಗಣರಾಜ್ಯೋತ್ಸವದ ವೇಳೆ ಹೆಲಿಕಾಪ್ಟರ್ ಹಾಗೂ ಯುದ್ಧವಿಮಾನಗಳಲ್ಲಿ ಎಥೆನಾಲ್ ಮಿಶ್ರಿತ ಇಂಧನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಈಗ ಎಥೆನಾಲ್‌ನಿಂದ ಐಸೋಬ್ಯುಟನಾಲ್ ತಯಾರಿಸಿ ಭವಿಷ್ಯದಲ್ಲಿ ಡೀಸೆಲ್‌ಗೆ ಪರ್ಯಾಯವಾಗಿ ಬಳಸುವ ಪ್ರಯತ್ನ ನಡೆಯುತ್ತಿದೆ.

ಹಿಂದೆ ಸುಟ್ಟು ಮಾಲಿನ್ಯ ಉಂಟುಮಾಡುತ್ತಿದ್ದ ಕೃಷಿ ತ್ಯಾಜ್ಯ ಹಾಗೂ ಬೆಳೆ ಅವಶೇಷಗಳಿಂದ ಈಗ ಬಯೋ-ಸಿಎನ್‌ಜಿ ಮತ್ತು ಮೀಥೇನ್ ಉತ್ಪಾದಿಸಲಾಗುತ್ತಿದೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಸುಮಾರು 4,000 ಯೋಜನೆಗಳು ಇದಕ್ಕಾಗಿ ಅಭಿವೃದ್ಧಿಯಾಗುತ್ತಿವೆ. ಬೆಳೆ ಅವಶೇಷಗಳ ಮೌಲ್ಯ ಪ್ರತಿ ಟನ್‌ಗೆ ಸುಮಾರು 2,500 ರೂಪಾಯಿ ಆಗಿದ್ದು, ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿದೆ.

ರೈತರು ಕಳೆ ಸುಡುವುದನ್ನು ನಿಲ್ಲಿಸಿದರೆ ದೆಹಲಿ ಸೇರಿದಂತೆ ಉತ್ತರ ಭಾರತದ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗುತ್ತದೆ. ಜೊತೆಗೆ ರೈತರೂ ಆರ್ಥಿಕವಾಗಿ ಲಾಭ ಪಡೆಯುತ್ತಾರೆ.

Q

ಪೆಟ್ರೋಲ್ ಬೆಲೆ ಏಕೆ ಇಳಿದಿಲ್ಲ?

A

ಪೆಟ್ರೋಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ದರವನ್ನು ಅವಲಂಬಿಸಿವೆ. ಕಚ್ಚಾತೈಲದ ಬೆಲೆ ಬ್ಯಾರೆಲ್‌ಗೆ 130 ಡಾಲರ್ವರೆಗೆ ಏರಿದ್ದೂ, ನಂತರ ಇಳಿದಿದ್ದೂ ಇದೆ.

ಎಥೆನಾಲ್ ಮಿಶ್ರಣ ಒಂದೇ ಕಾರಣದಿಂದ ಇಂಧನ ಬೆಲೆ ನಿರ್ಧಾರವಾಗುವುದಿಲ್ಲ. ಭವಿಷ್ಯದಲ್ಲಿ ಎಥೆನಾಲ್ ಆಧಾರಿತ ವಾಹನಗಳ ಬಳಕೆ ಹೆಚ್ಚಾದಂತೆ ಅದರ ಆರ್ಥಿಕ ಲಾಭವೂ ಹೆಚ್ಚಾಗುತ್ತದೆ. ಎಥೆನಾಲ್ ಕಡಿಮೆ ವೆಚ್ಚದ, ದೇಶೀಯ ಮತ್ತು ಪರಿಸರ ಸ್ನೇಹಿ ಇಂಧನವಾಗಿದೆ.

Q

ಎಥೆನಾಲ್ ವಿರುದ್ಧ ಇಷ್ಟು ನಕಾರಾತ್ಮಕ ಪ್ರಚಾರ ಏಕೆ?

A

ಈಗಿರುವ ಪಳೆಯುಳಿಕೆ ಇಂಧನ ಆಮದು ವ್ಯವಸ್ಥೆಯಿಂದ ಸಾವಿರಾರು ಕೋಟಿ ರೂಪಾಯಿ ಲಾಭ ಪಡೆಯುವ ಲಾಬಿಯೊಂದು ಇದೆ. ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ಉದ್ದೇಶಪೂರ್ವಕವಾಗಿ ಎಥೆನಾಲ್ ವಾಹನಗಳನ್ನು ಹಾಳುಮಾಡುತ್ತದೆ ಎಂಬ ತಪ್ಪು ಮಾಹಿತಿಯನ್ನು ಹರಡುತ್ತಿವೆ.

ಇಂಧನ ಆಮದು ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಖಾಸಗಿ ಸಂಸ್ಥೆಗಳು ಈ ಅಭಿಯಾನಕ್ಕೆ ಪ್ರಾಯೋಜಕತ್ವ ನೀಡುತ್ತಿದ್ದು, ಎಥೆನಾಲ್ ಬಗ್ಗೆ ತಪ್ಪು ಕಲ್ಪನೆ ಮೂಡಿಸಿ ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿವೆ.

ಒಂದು ವೈರಲ್ ವಿಡಿಯೊದಲ್ಲಿ, ಎಥೆನಾಲ್ ಕಬ್ಬಿನಿಂದ ತಯಾರಾಗುವುದರಿಂದ ಪೆಟ್ರೋಲ್ ಟ್ಯಾಂಕ್ ಸುತ್ತ ಇರುವೆಗಳು ಸೇರುತ್ತವೆ ಎಂದು ಹೇಳಲಾಗಿತ್ತು. ಇದು ಸಂಪೂರ್ಣ ಅಸಂಬದ್ಧ. ಬ್ರಾಂಡಿ, ವಿಸ್ಕಿ ಅಥವಾ ರಮ್ ಬಾಟಲಿಯ ಸುತ್ತ ಇರುವೆಗಳು ಅಥವಾ ನೊಣಗಳು ಸೇರುವುದನ್ನು ಯಾರಾದರೂ ನೋಡಿದ್ದೀರಾ?

ಒಬ್ಬರು ತಮ್ಮ ಟೊಯೊಟಾ ಕಾರಿಗೆ ಎಥೆನಾಲ್‌ನಿಂದ ತೊಂದರೆಯಾಗಿದೆ ಎಂದು ಹೇಳಿದ್ದರು. ಆದರೆ ಕಂಪನಿ ಪರಿಶೀಲಿಸಿದಾಗ, ಅದು ನೀರು ಬೆರೆಸಿದ ಕಳಪೆ ಇಂಧನದಿಂದ ಉಂಟಾದ ಸಮಸ್ಯೆ ಎಂದು ತಿಳಿದುಬಂತು.

Q

ಎಥೆನಾಲ್ ಉತ್ಪಾದನೆಯಿಂದ ನೀವು ವೈಯಕ್ತಿಕವಾಗಿ ಲಾಭ ಪಡೆಯುತ್ತಿದ್ದೀರಾ?

A

ಇದು ಸಂಪೂರ್ಣ ಆಧಾರರಹಿತ ಆರೋಪ. ಸರ್ಕಾರ ಟೆಂಡರ್ ಮೂಲಕ ಎಥೆನಾಲ್ ಖರೀದಿಸುತ್ತದೆ. ದರವನ್ನು ಸಚಿವ ಸಂಪುಟವೇ ನಿಗದಿಪಡಿಸುತ್ತದೆ. ಯಾವ ಕಂಪನಿಗೆ ಗುತ್ತಿಗೆ ಸಿಗಬೇಕು ಎಂಬುದರಲ್ಲಿ ನನಗೆ ಯಾವುದೇ ಪಾತ್ರವಿಲ್ಲ.

ದೇಶದಲ್ಲಿ ಸುಮಾರು 550 ಎಥೆನಾಲ್ ಉತ್ಪಾದನಾ ಘಟಕಗಳು ಇವೆ. ಎಥೆನಾಲ್ ನೀತಿ ಜಾರಿಗೆ ಬರುವ ಮೊದಲೇ ನಾನು ಮದ್ಯ ಉತ್ಪಾದಿಸುವ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದ್ದೆ. ಈಗ ಅದನ್ನು ನನ್ನ ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

ಇಂತಹ ಆರೋಪ ಮಾಡುವುದು ಎಂದರೆ, ಗೋಧಿ ಬೆಳೆದು ಸರ್ಕಾರಕ್ಕೆ ಮಾರುವ ಪ್ರತಿಯೊಬ್ಬ ರೈತನೂ ಆಹಾರ ನೀತಿಯಿಂದ ವೈಯಕ್ತಿಕ ಲಾಭ ಪಡೆಯುತ್ತಿದ್ದಾನೆ ಎನ್ನುವಂತಿದೆ. ನಮ್ಮ ಕುಟುಂಬದ ಪಾಲು ದೇಶದ ಒಟ್ಟು ಎಥೆನಾಲ್ ಉತ್ಪಾದನೆಯಲ್ಲಿ ಕೇವಲ 1 ಶೇಕಡಾ ಮಾತ್ರ.

Q

ಟೀಕೆಗಳ ನಡುವೆಯೂ ಎಥೆನಾಲ್ ನೀತಿಯನ್ನು ಏಕೆ ಸಮರ್ಥಿಸುತ್ತೀರಿ?

A

ನನ್ನ ಗಮನ ದೇಶದ ಹಿತಾಸಕ್ತಿಯ ಮೇಲಿದೆ. ವೈಯಕ್ತಿಕ ಲಾಭಕ್ಕಾಗಿ ನಾನು ಎಥೆನಾಲ್ ಪರ ಮಾತನಾಡುತ್ತಿಲ್ಲ. ಇದು ದೇಶಕ್ಕೆ, ಸಮಾಜಕ್ಕೆ ಮತ್ತು ರೈತರಿಗೆ ಪ್ರಯೋಜನಕಾರಿ.

ರಾಜಕೀಯದಲ್ಲಿ ನಾನು ಹಿಂದೆಯೂ ಟೀಕೆಗಳನ್ನು ಎದುರಿಸಿದ್ದೇನೆ. ಆದರೆ ಸತ್ಯವನ್ನು ಜನ ಅರ್ಥಮಾಡಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ಆಮದು ಕಡಿಮೆ ಮಾಡುವ, ಮಾಲಿನ್ಯ ನಿಯಂತ್ರಿಸುವ ಹಾಗೂ ರೈತರ ಆದಾಯ ಹೆಚ್ಚಿಸುವ ನೀತಿಯನ್ನು ಮುಂದುವರಿಸಲೇಬೇಕು.

ಮಹಾತ್ಮ ಗಾಂಧೀಜಿ ಸ್ವದೇಶಿ ಮತ್ತು ಸ್ವಾವಲಂಬನೆಯ ಚಳವಳಿಯನ್ನು ಆರಂಭಿಸಿದಾಗ, ವಿದೇಶಿ ವಸ್ತುಗಳನ್ನು ತ್ಯಜಿಸುವಂತೆ ಕರೆ ನೀಡಿದ್ದರು. ಆಗ ವಿದೇಶಿ ವಸ್ತುಗಳು ಕೆಟ್ಟ ಗುಣಮಟ್ಟದವುಗಳಾಗಿದ್ದವೆಯೇ? ಅಲ್ಲ. ಆದರೆ ಭಾರತ ಎಲ್ಲವನ್ನೂ ಆಮದು ಮಾಡಿಕೊಳ್ಳಬೇಕೋ ಅಥವಾ ತನ್ನದೇ ಸಾಮರ್ಥ್ಯ ಬೆಳೆಸಿಕೊಳ್ಳಬೇಕೋ ಎಂಬ ಪ್ರಶ್ನೆ ಆಗಿತ್ತು.

ನಾನು ಬಂದಿರುವ ವಿದರ್ಭ ಪ್ರದೇಶದಲ್ಲಿ ಸುಮಾರು 10,000 ರೈತರು ಕೃಷಿ ಸಂಕಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಭಾರತದಲ್ಲಿ ಗೋಧಿ, ಅಕ್ಕಿ, ಜೋಳ ಹಾಗೂ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎಥೆನಾಲ್ ನೀತಿ ಇರದಿದ್ದರೆ ಸಕ್ಕರೆ ಉದ್ಯಮವೇ ಸಂಕಷ್ಟಕ್ಕೆ ಸಿಲುಕುತ್ತಿತ್ತು. ರೈತರು ಬೆಳೆದ ಕಬ್ಬನ್ನು ಯಾರು ಖರೀದಿಸುತ್ತಿದ್ದರು?

Q

ಭವಿಷ್ಯದ ಇಂಧನ ಯಾವುದು?

A

ಪೆಟ್ರೋಲ್ ಮತ್ತು ಡೀಸೆಲ್‌ನ್ನು ಒಂದೇ ದಿನದಲ್ಲಿ ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿಸುವುದು ನಮ್ಮ ಗುರಿ. ವಿದ್ಯುತ್ ವಾಹನಗಳು, ಎಥೆನಾಲ್, ಮೆಥೆನಾಲ್, ಬಯೋಡೀಸೆಲ್, ಎಲ್‌ಎನ್‌ಜಿ ಹಾಗೂ ಹೈಡ್ರೋಜನ್ ಸೇರಿದಂತೆ ಹಲವು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕಿದೆ.

ಪ್ರತಿ ವರ್ಷ ಇಂಧನ ಆಮದಿಗೆ ಖರ್ಚಾಗುವ 22 ಲಕ್ಷ ಕೋಟಿ ರೂಪಾಯಿ ದೇಶದಿಂದ ಹೊರಹೋಗುವ ಬದಲು, ಅದು ರೈತರಿಗೆ ಲಾಭವಾಗಬೇಕು, ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಹಾಗೂ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕು. ಇದೇ ಆತ್ಮನಿರ್ಭರ ಭಾರತದ ಕನಸು.

ಹೆದ್ದಾರಿ ಸೂಚನಾ ಫಲಕಗಳಲ್ಲಿ ಕ್ಯೂಆರ್ ಕೋಡ್

ಮುಂದಿನ ದಿನಗಳಲ್ಲಿ ಎಲ್ಲಾ ಹೆದ್ದಾರಿ ಸೂಚನಾ ಫಲಕಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗುವುದು. ಪ್ರಯಾಣಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಂಬಂಧಿತ ಹೆದ್ದಾರಿಯ ಮಾಹಿತಿ, ಸಮೀಪದ ಪೆಟ್ರೋಲ್ ಬಂಕ್, ವಿಶ್ರಾಂತಿ ಕೇಂದ್ರ, ಹೋಟೆಲ್ ಸೇರಿದಂತೆ ಅಗತ್ಯ ಸೇವೆಗಳ ವಿವರಗಳನ್ನು ಮೊಬೈಲ್‌ನಲ್ಲೇ ಪಡೆಯಬಹುದು.

ಈ ವ್ಯವಸ್ಥೆಯಿಂದ ದೂರುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಈ ವರ್ಷವೇ ಸುಮಾರು 10 ಶೇಕಡಾ ದೂರುಗಳು ಇಳಿಕೆಯಾಗಲಿದ್ದು, ಇನ್ನೆರಡು ವರ್ಷಗಳಲ್ಲಿ ಇಂತಹ ದೂರುಗಳು ಬಹುತೇಕ ಇಲ್ಲದಂತಾಗಲಿವೆ.

Q

ರಾಮಮಂದಿರ ಕಾಣಿಕೆ ಕಳ್ಳತನ ಆರೋಪ ಬಗ್ಗೆ ಏನು ಹೇಳುತ್ತೀರಿ?

A

ನನಗೆ ಚಂಪತ್ ರೈ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಅವರು ತಮ್ಮ ಜೀವನವನ್ನೇ ದೇಶಕ್ಕಾಗಿ ಮುಡಿಪಾಗಿಟ್ಟಿದ್ದಾರೆ. ಯಾವುದೇ ಆರೋಪ ಬಂದರೆ ತನಿಖೆಯಾಗಬೇಕು. ವ್ಯವಸ್ಥೆಯಲ್ಲಿ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಬೇಕು. ಆದರೆ ಟ್ರಸ್ಟ್‌ನವರು ಉದ್ದೇಶಪೂರ್ವಕವಾಗಿ ಇಂತಹ ಕೆಲಸ ಮಾಡುತ್ತಾರೆ ಎಂಬುದನ್ನು ನಾನು ನಂಬುವುದಿಲ್ಲ.

ದೇವಾಲಯ ಸೇರಿದಂತೆ ಎಲ್ಲೆಡೆ ಇಂತಹ ಘಟನೆಗಳು ಸಂಭವಿಸಬಹುದು. ತಂತ್ರಜ್ಞಾನ ಬಳಸಿ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಜವಾಬ್ದಾರಿ ನಮ್ಮದು.

ಟ್ರಸ್ಟ್ ಸದಸ್ಯರಾದ ಚಂಪತ್ ರೈ ಮತ್ತು ಗೋವಿಂದ ಗಿರಿ ಮಹಾರಾಜ್ ಅವರ ಪ್ರಾಮಾಣಿಕತೆಯ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ. ಅವರ ಉದ್ದೇಶವನ್ನು ಪ್ರಶ್ನಿಸುವುದು ಸರಿಯಲ್ಲ.

ತಾಂತ್ರಿಕ ಅಥವಾ ಆಡಳಿತಾತ್ಮಕ ದೋಷಗಳಿದ್ದರೆ ಅವುಗಳನ್ನು ಸರಿಪಡಿಸಬೇಕು. ಪ್ರಾಮಾಣಿಕ ತಪ್ಪು (ಬೋನಾ ಫೈಡ್) ಮತ್ತು ದುರುದ್ದೇಶಪೂರಿತ ತಪ್ಪು (ಮಾಲಾ ಫೈಡ್) ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು. ಉದ್ದೇಶಪೂರ್ವಕವಾಗಿ ತಪ್ಪು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು. ಆದರೆ ನಿಜವಾದ ತಾಂತ್ರಿಕ ದೋಷವಿದ್ದರೆ ವ್ಯಕ್ತಿಗಳನ್ನು ದೂಷಿಸುವ ಬದಲು ವ್ಯವಸ್ಥೆಯನ್ನು ಸುಧಾರಿಸುವತ್ತ ಗಮನಹರಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com