ಕೇವಲ 3-4 ದೇಶಗಳಲ್ಲಿರುವ Hydrogen train ಈಗ ಭಾರತದಲ್ಲೂ, ವಿಶ್ವದ ಅತ್ಯಂತ ಶಕ್ತಿಶಾಲಿ ರೈಲು ನಮ್ಮದೇ: ಪ್ರಧಾನಿ ಮೋದಿ

ಹೈಡ್ರೋಜನ್ ರೈಲು ತಂತ್ರಜ್ಞಾನ ಜಗತ್ತಿನಲ್ಲಿ ಕಳೆದ ಏಳು-ಎಂಟು ವರ್ಷಗಳಲ್ಲಷ್ಟೇ ಅಭಿವೃದ್ಧಿಯಾಗಿದೆ. ಪ್ರಸ್ತುತ ಕೇವಲ ಮೂರು ಅಥವಾ ನಾಲ್ಕು ದೇಶಗಳು ಮಾತ್ರ ಇಂತಹ ರೈಲುಗಳನ್ನು ಓಡಿಸುತ್ತಿವೆ.
PM modi
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on

ಜಿಂದ್ (ಹರಿಯಾಣ): ಹೈಡ್ರೋಜನ್ ಚಾಲಿತ ರೈಲು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಗಿದ್ದು, ಜಿಂದ್–ಸೋನಿಪತ್ ಮಾರ್ಗದಲ್ಲಿ ಚಾಲನೆ ನೀಡಲಾದ ದೇಶದ ಮೊದಲ ಹೈಡ್ರೋಜನ್ ರೈಲು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.

ಹರಿಯಾಣದ ಜಿಂದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಈ ರೈಲು 3,200 ಹಾರ್ಸ್‌ಪವರ್ ಸಾಮರ್ಥ್ಯದ ಪ್ರೊಪಲ್ಷನ್ ವ್ಯವಸ್ಥೆ ಹೊಂದಿದ್ದು, ಭಾರತದಲ್ಲಿ ಇದುವರೆಗೆ ನಿರ್ಮಿಸಲಾದ ಅತಿ ಉದ್ದದ ಹೈಡ್ರೋಜನ್ ರೈಲು ಕೂಡ ಆಗಿದೆ ಎಂದು ತಿಳಿಸಿದರು.

ಹೈಡ್ರೋಜನ್ ರೈಲು ತಂತ್ರಜ್ಞಾನ ಜಗತ್ತಿನಲ್ಲಿ ಕಳೆದ ಏಳು-ಎಂಟು ವರ್ಷಗಳಲ್ಲಷ್ಟೇ ಅಭಿವೃದ್ಧಿಯಾಗಿದೆ. ಪ್ರಸ್ತುತ ಕೇವಲ ಮೂರು ಅಥವಾ ನಾಲ್ಕು ದೇಶಗಳು ಮಾತ್ರ ಇಂತಹ ರೈಲುಗಳನ್ನು ಓಡಿಸುತ್ತಿವೆ. ಆ ದೇಶಗಳಲ್ಲೂ ತಂತ್ರಜ್ಞಾನ ಇನ್ನೂ ಆರಂಭಿಕ ಹಂತದಲ್ಲಿದೆ. ಆದರೆ, ಭಾರತದ ಹೈಡ್ರೋಜನ್ ರೈಲಿನ ಸಾಮರ್ಥ್ಯ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರಲಿದೆ" ಎಂದು ಹೇಳಿದರು.

ಜಿಂದ್‌ನಿಂದ ಸಂಚರಿಸಲಿರುವ ರೈಲು 3,200 ಹಾರ್ಸ್‌ಪವರ್ ಸಾಮರ್ಥ್ಯದ ಪ್ರೊಪಲ್ಷನ್ ವ್ಯವಸ್ಥೆ ಹೊಂದಿದ್ದು, ಇದು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲಾಗಿದೆ. ಅಲ್ಲದೆ, ಇದು ಭಾರತದ ಅತಿ ಉದ್ದದ ಹೈಡ್ರೋಜನ್ ಚಾಲಿತ ರೈಲು ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ ಎಂದರು.

ಇದೇ ವೇಳೆ ರೈಲ್ವೆ ತಂತ್ರಜ್ಞಾನದ ಬೆಳವಣಿಗೆಯನ್ನು ಉಲ್ಲೇಖಿಸಿದ ಪ್ರಧಾನಿ, 19ನೇ ಶತಮಾನ ಸ್ಟೀಮ್ ಎಂಜಿನ್‌ಗಳ ಯುಗವಾಗಿದ್ದರೆ, 20ನೇ ಶತಮಾನ ಡೀಸೆಲ್ ಮತ್ತು ವಿದ್ಯುತ್ ರೈಲುಗಳ ಯುಗವಾಗಿತ್ತು. 21ನೇ ಶತಮಾನ ಹೈಡ್ರೋಜನ್ ರೈಲುಗಳ ಯುಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ರೈಲ್ವೆಯ ಸಾಧನೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, 1925ರಿಂದ 2014ರವರೆಗೆ ಸುಮಾರು 90 ವರ್ಷಗಳಲ್ಲಿ ದೇಶದ ಕೇವಲ ಶೇ.30ರಷ್ಟು ರೈಲು ಮಾರ್ಗ ಮಾತ್ರ ವಿದ್ಯುದೀಕರಣಗೊಂಡಿತ್ತು. ಕಳೆದ 12 ವರ್ಷಗಳಲ್ಲಿ ಶೇ.99ರಷ್ಟು ರೈಲು ಜಾಲವನ್ನು ವಿದ್ಯುದೀಕರಣಗೊಳಿಸಲಾಗಿದೆ. ಹರಿಯಾಣದಲ್ಲಿ ಶೇ.100ರಷ್ಟು ರೈಲು ಮಾರ್ಗ ವಿದ್ಯುದೀಕರಣಗೊಂಡಿದೆ. ಜಾಗತಿಕ ಸಂಘರ್ಷಗಳು ಮತ್ತು ತೈಲ ಬಿಕ್ಕಟ್ಟಿನ ನಡುವೆಯೂ ಭಾರತದ ರೈಲು ಸಂಚಾರ ನಿರಂತರವಾಗಿ ಮುಂದುವರಿಯಲು ಇದೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ದೆಹಲಿ–ಅಮೃತಸರ–ಕತ್ರಾ ಎಕ್ಸ್‌ಪ್ರೆಸ್‌ವೇಯ ಹರಿಯಾಣ ವಿಭಾಗ, ಜಿಂದ್–ಗೋಹಾನಾ ರಾಷ್ಟ್ರೀಯ ಹೆದ್ದಾರಿ ಹಾಗೂ ಅಂಬಾಲಾ–ಕಾಲಾ ಅಂಬ್ ನಾಲ್ಕು ಪಥದ ರಸ್ತೆ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ರೈಲು ಮತ್ತು ರಸ್ತೆ ಸಂಪರ್ಕದಂತಹ ಯೋಜನೆಗಳು ಜನರಿಗೆ ಅನುಕೂಲ ಕಲ್ಪಿಸುವುದರ ಜೊತೆಗೆ ಅಭಿವೃದ್ಧಿಯ ವೇಗವನ್ನು ಹಲವು ಪಟ್ಟು ಹೆಚ್ಚಿಸುತ್ತವೆ" ಎಂದು ಹೇಳಿದರು.

ಇತ್ತೀಚೆಗೆ ಇಂಡೋನೇಷ್ಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗೆ ಭೇಟಿ ನೀಡಿದ್ದನ್ನು ಉಲ್ಲೇಖಿಸಿದ ಮೋದಿ, ಕ್ರೀಡಾ ಉದ್ಯಮ ಹಾಗೂ ಅಥ್ಲೀಟ್‌ಗಳ ತರಬೇತಿ ಕ್ಷೇತ್ರದಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜೊತೆ ಭಾರತ ಜಂಟಿಯಾಗಿ ಕೆಲಸ ಮಾಡಲಿದೆ. ಇದರಿಂದ ಹರಿಯಾಣ ಸೇರಿದಂತೆ ದೇಶದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದರು.

PM modi
ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು: ದೇಶದ ಮೊದಲ ಮಾಲಿನ್ಯರಹಿತ Hydrogen ಚಾಲಿತ ರೈಲಿಗೆ ಪ್ರಧಾನಿ ಮೋದಿ ಚಾಲನೆ! Video

ಅಲ್ಲದೆ, 'ಖೇಲೋ ಭಾರತ್' ನೀತಿ, 'ಖೇಲೋ ಇಂಡಿಯಾ' ಅಭಿಯಾನ ಹಾಗೂ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಸ್ಕೀಮ್ (TOPS) ಮೂಲಕ ಕ್ರೀಡಾಪಟುಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಸೌಲಭ್ಯ ಮತ್ತು ಅವಕಾಶಗಳನ್ನು ಸರ್ಕಾರ ಒದಗಿಸುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಸುಮಾರು 14,700 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಹಾಗೂ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com