20ನೇ ದಿನಕ್ಕೆ ಕಾಲಿಟ್ಟ Sonam Wangchuk ಉಪವಾಸ ಸತ್ಯಾಗ್ರಹ: ‘ಜುಲೈ 20ರವರೆಗೆ ಜೀವ ಉಳಿಸಿಕೊಂಡಿರುತ್ತೇನೆ’ ಎಂದ ಹೋರಾಟಗಾರ..!

ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 28ನೇ ದಿನಕ್ಕೆ ಕಾಲಿಟ್ಟಿದೆ.
Sonam Wangchuk
ಸೋನಮ್ ವಾಂಗ್ಚುಕ್
Updated on

ನವದೆಹಲಿ: ರಾಷ್ಟ್ರೀಯ ಪರೀಕ್ಷೆಗಳಲ್ಲಿ ನಡೆದಿರುವ ಪೇಪರ್ ಲೀಕ್ ಹಾಗೂ NEET UG ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಪ್ರಖ್ಯಾತ ಶಿಕ್ಷಣ ಸುಧಾರಕ ಹಾಗೂ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವು ಇಂದು (ಜುಲೈ 17, 2026) 20ನೇ ದಿನಕ್ಕೆ ತಲುಪಿದೆ.

ದಿನದಿಂದ ದಿನಕ್ಕೆ ಅವರ ಆರೋಗ್ಯ ಕ್ಷೀಣಿಸುತ್ತಿದ್ದರೂ, ಕೇಂದ್ರ ಸರ್ಕಾರದ ಮೌನದ ವಿರುದ್ಧ ಅವರು ತಮ್ಮ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.

ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ 28ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ, ಜುಲೈ 20ರಂದು ಸಂಸತ್ತಿಗೆ ಹಮ್ಮಿಕೊಳ್ಳಲಾಗಿರುವ ಶಾಂತಿಯುತ ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಾಂಗ್‌ಚುಕ್ ಜನತೆಗೆ ಕರೆ ನೀಡಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ವಾಂಗ್‌ಚುಕ್, ತಮ್ಮ ದೈಹಿಕ ಸ್ಥಿತಿ ಹದಗೆಟ್ಟಿದ್ದರೂ ಮನೋಬಲ ಅಚಲವಾಗಿದೆ ಎಂದು ಹೇಳಿದರು.

"ಹೊರಗೆ ನಾನು ದುರ್ಬಲನಾಗಿರಬಹುದು. ಆದರೆ, ಒಳಗೆ ತುಂಬಾ ಗಟ್ಟಿಯಾಗಿದ್ದೇನೆ. ಜುಲೈ 20ರಂದು ನಾವು ಎಲ್ಲರೂ ಸೇರಿ ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿಗೆ ತೆರಳಿ ನಮ್ಮ ಮನವಿಯನ್ನು ಸಲ್ಲಿಸೋಣ" ಎಂದು ತಿಳಿಸಿದರು.

"ಜುಲೈ 20ರವರೆಗೆ ಹೇಗಾದರೂ ಬದುಕಿರುತ್ತೇನೆ. ನೀವು ಬರದೇ ಜುಲೈ 20ರ ಪ್ರತಿಭಟನೆ ಯಶಸ್ವಿಯಾಗದಿದ್ದರೆ, ನಾನು ಭೂತವಾಗಿ ಮರಳಿ ಬರುತ್ತೇನೆ" ಎಂದು ಭಾವನಾತ್ಮಕವಾಗಿ ಹೇಳಿದರು.

ಈ ನಡುವೆ ವಾಂಗ್‌ಚುಕ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಅವರ ಆರೋಗ್ಯ ಅತ್ಯಂತ ಗಂಭೀರ ಹಂತ ತಲುಪಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Sonam Wangchuk
ಸೋನಮ್ ವಾಂಗ್‌ಚುಕ್ ಉಪವಾಸ ಅಂತ್ಯಗೊಳಿಸುತ್ತೇನೆ: ರಾಖಿ ಸಾವಂತ್ ಶಪಥ, ಜಂತರ್ ಮಂತರ್'ನತ್ತ ನಟಿ ಹೆಜ್ಜೆ!

ಉಪವಾಸ ಮುಂದುವರಿದರೆ ಮೂತ್ರಪಿಂಡ ಸೇರಿದಂತೆ ಪ್ರಮುಖ ಅಂಗಗಳಿಗೆ ಹಾನಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಆದರೆ, ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಸಿಗದೇ ಉಪವಾಸ ಕೈಬಿಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ವಾಂಗ್‌ಚುಕ್ ಹೇಳಿದ್ದು, ತಮ್ಮ ಉಪವಾಸ ಮುಂದುವರಿಸುವ ನಿರ್ಧಾರದಲ್ಲಿ ಅಚಲರಾಗಿದ್ದಾರೆ.

ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ದೆಹಲಿ ಹೈಕೋರ್ಟ್, ವಾಂಗ್‌ಚುಕ್ ಅವರ ಆರೋಗ್ಯವನ್ನು ಪ್ರತಿದಿನ ಪರಿಶೀಲಿಸುವಂತೆ ಮತ್ತು ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಇದೇ ಪ್ರತಿಭಟನೆಯ ಮತ್ತೊಂದು ವೇದಿಕೆಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿರುವ ಎಐಎಸ್‌ಎ (AISA) ಸಂಘಟನೆಯ ಸದಸ್ಯರಾದ ನೇಹಾ, ಮನೀಶ್ ಮತ್ತು ಅಮೀನ್ ಅವರ ಆರೋಗ್ಯವೂ ಹದಗೆಟ್ಟಿದೆ ಎಂದು ಸಂಘಟನೆ ತಿಳಿಸಿದೆ.

ಆದರೂ, ಸರ್ಕಾರದ ವಿರುದ್ಧದ ಹೋರಾಟದಲ್ಲಿ ಸೋನಂ ವಾಂಗ್‌ಚುಕ್ ಅವರೊಂದಿಗೆ ಐಕ್ಯತೆ ತೋರಿಸುತ್ತಾ ಉಪವಾಸ ಮುಂದುವರಿಸುವುದಾಗಿ ಎಐಎಸ್‌ಎ ತಿಳಿಸಿದೆ.

ಕಾಕ್‌ರೋಚ್ ಜನತಾ ಪಾರ್ಟಿ (CJP) ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಹಾಗೂ ಪರೀಕ್ಷಾ ಅಕ್ರಮಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ವಿದ್ಯಾರ್ಥಿಗಳ ಕುಟುಂಬಗಳಿಗೆ 1 ಕೋಟಿ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದೆ.

ಜೂನ್ 20ರಂದು ಆರಂಭವಾದ ಈ ಪ್ರತಿಭಟನೆಯಲ್ಲಿ ಜೂನ್ 28ರಂದು ಸೋನಂ ವಾಂಗ್‌ಚುಕ್ ಸೇರಿಕೊಂಡಿದ್ದು, ಅಂದಿನಿಂದ ಅವರು ನಿರಂತರ ಅನಿರ್ದಿಷ್ಟಾವಧಿ ಉಪವಾಸ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com