

ನವದೆಹಲಿ: ಕಳೆದ ಮೂರು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಹೋರಾಟಗಾರ ಸೋನಂ ವಾಂಗ್ಚುಕ್, ತಮ್ಮ ಎರಡು ಪ್ರಮುಖ ಷರತ್ತುಗಳನ್ನು ಈಡೇರಿಸಿದರೆ ಸೋಮವಾರವೇ ಉಪವಾಸವನ್ನು ಅಂತ್ಯಗೊಳಿಸಲು ಸಿದ್ಧರಾಗಿದ್ದಾರೆ ಎಂದು ಅವರ ಪತ್ನಿ ಗೀತಾಂಜಲಿ ಆಂಗ್ಮೋ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್, ವಾಂಗ್ಚುಕ್ ಅವರನ್ನು ಸರ್ಕಾರಿ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ನಿರಾಕರಿಸಿದ ಕೆಲವೇ ಗಂಟೆಗಳ ಬಳಿಕ ಅವರು ಈ ಘೋಷಣೆ ಮಾಡಿದ್ದಾರೆ.
ವಾಂಗ್ಚುಕ್, ಇತ್ತೀಚಿನ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಉಪವಾಸ ನಡೆಸುತ್ತಿದ್ದಾರೆ. ಈಗಾಗಲೇ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ.
ಅದಾಗ್ಯೂ ಅವರು ಉಪವಾಸ ಮುಂದುವರೆಸಿದ್ದು, ತಮ್ಮ ಬೇಡಿಕೆ ಈಡೇರದ ಹೊರತು ಉಪವಾಸ ಅಂತ್ಯಗೊಳಿಸಲ್ಲ ಎಂಬ ಸಂದೇಶ ಸಾರಿದ್ದಾರೆ.
ಯಾವುವು ಆ 2 ಷರತ್ತುಗಳು?
ಗೀತಾಂಜಲಿ ಆಂಗ್ಮೋ ಅವರ ಪ್ರಕಾರ, ಸೋಮವಾರ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ, ಶಿಕ್ಷಣ ಕ್ಷೇತ್ರದಲ್ಲಿ ಹೊಣೆಗಾರಿಕೆಯ ವಿಚಾರವನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಸ್ತಾಪಿಸುವ ಭರವಸೆ ನೀಡಬೇಕು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸ್ಪಂದಿಸಬೇಕು ಮತ್ತು ಈ ಭರವಸೆ ದೊರೆತರೆ ಸೋನಂ ವಾಂಗ್ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಜಂತರ್ ಮಂತರ್‌ನಿಂದ ಆಸ್ಪತ್ರೆಗೆ ಸ್ಥಳಾಂತರ
ಶನಿವಾರ ಬೆಳಗ್ಗೆ ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನು ಜಂತರ್ ಮಂತರ್‌ನಿಂದ ತೆರವುಗೊಳಿಸಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, ಸರ್ಕಾರದ ಕ್ರಮದಲ್ಲಿ ಯಾವುದೇ ಅಕ್ರಮ ಕಂಡುಬರುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಹೈಕೋರ್ಟ್ ಹೇಳಿದ್ದೇನು?
ನ್ಯಾಯಮೂರ್ತಿ ಮಿನಿ ಪುಷ್ಕರ್ಣಾ ನೇತೃತ್ವದ ಪೀಠ, ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದ್ದರೂ ಅವರು ಸ್ವಯಂ ಆಸ್ಪತ್ರೆಗೆ ದಾಖಲಾಗಿರಲಿಲ್ಲ. ಹೀಗಾಗಿ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಅಧಿಕಾರ ಸರ್ಕಾರಕ್ಕಿತ್ತು ಎಂದು ಅಭಿಪ್ರಾಯಪಟ್ಟಿತು. "ಈ ಹಂತದಲ್ಲಿ ಮಧ್ಯಂತರ ಆದೇಶ ನೀಡುವ ಅಗತ್ಯವಿಲ್ಲ," ಎಂದು ನ್ಯಾಯಾಲಯ ಹೇಳಿದೆ.
ಇದೇ ವೇಳೆ, ಆಸ್ಪತ್ರೆಯ ವೈದ್ಯರು ವಾಂಗ್ಚುಕ್ ಅವರ ಒಪ್ಪಿಗೆಯೊಂದಿಗೆ ಬಾಯಿಯ ಮೂಲಕ ಔಷಧಿ ನೀಡುತ್ತಿದ್ದು, ಅವರ ಮೇಲೆ ಯಾವುದೇ ಬಲವಂತ ಅಥವಾ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆ ನಡೆದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಸರ್ಕಾರದ ಕ್ರಮವು ಮೇಲ್ನೋಟಕ್ಕೆ ಮನಬಂದಂತೆ ತೆಗೆದುಕೊಂಡ ನಿರ್ಧಾರ ಎಂದು ಹೇಳಲಾಗುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಖಾಸಗಿ ಆಸ್ಪತ್ರೆಗೆ ಸ್ಥಳಾಂತರಕ್ಕೆ ಕುಟುಂಬದ ಬೇಡಿಕೆ
ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಆಂಗ್ಮೋ, ಅವರನ್ನು ಗುರುಗ್ರಾಮದ ಮೆಡಾಂಟಾ ಆಸ್ಪತ್ರೆಗೆ ಸ್ಥಳಾಂತರಿಸಲು ಮನವಿ ಸಲ್ಲಿಸಿದ್ದರು. ಕುಟುಂಬದ ಒಪ್ಪಿಗೆ ಇಲ್ಲದೆ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗೂ ಅವರ ಇಚ್ಛೆಗೆ ವಿರುದ್ಧವಾಗಿ ಅಲ್ಲಿಯೇ ಇರಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರದ ಪರ ವಕೀಲರು, ದೀರ್ಘಕಾಲದ ಉಪವಾಸದಿಂದ ವಾಂಗ್ಚುಕ್ ಅವರ ಆರೋಗ್ಯ ಹದಗೆಟ್ಟಿದ್ದು, ಆರೋಗ್ಯದ ಮಾನದಂಡಗಳು ಕುಸಿದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಜುಲೈ 16ರಂದು ದ್ವಿಸದಸ್ಯ ಪೀಠ ನೀಡಿದ್ದ ಆದೇಶದಂತೆ, ವಾಂಗ್ಚುಕ್ ಅವರ ಆರೋಗ್ಯವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿ ಅಗತ್ಯವಿದ್ದರೆ ಮಧ್ಯಪ್ರವೇಶ ಮಾಡಬೇಕೆಂದು ಸೂಚಿಸಲಾಗಿತ್ತು. ಅದಕ್ಕೆ ಅನುಗುಣವಾಗಿಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೈಕೋರ್ಟ್ ಗಮನಿಸಿತು.
ಆಸ್ಪತ್ರೆಯಿಂದಲೇ ಬೆಂಬಲಿಗರಿಗೆ ಸಂದೇಶ
ಇಂದು ಆಸ್ಪತ್ರೆಯಿಂದಲೇ ವಾಂಗ್ಚುಕ್ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿ, ಜುಲೈ 20ರಂದು 'Cockroach Janta Party' ಆಯೋಜಿಸಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.
ವಾಂಗ್ಚುಕ್ ಆರೋಗ್ಯ ಸ್ಥಿರ
ಸಫ್ದರ್‌ಜಂಗ್ ಆಸ್ಪತ್ರೆ ನೀಡಿರುವ ಆರೋಗ್ಯ ಮಾಹಿತಿ ಪ್ರಕಾರ, ಸೋನಂ ವಾಂಗ್ಚುಕ್ ಅವರ ಪ್ರಮುಖ ಆರೋಗ್ಯ ಸೂಚಕಗಳು (Vital Parameters) ಸ್ಥಿರವಾಗಿವೆ. ರಕ್ತ ಪರೀಕ್ಷೆಯ ಫಲಿತಾಂಶದಲ್ಲಿ ಅಲ್ಪ ಮಟ್ಟಿನ ಸುಧಾರಣೆ ಕಂಡುಬಂದಿದ್ದರೂ, ದೀರ್ಘಕಾಲದ ಉಪವಾಸದಿಂದ ಉಂಟಾಗಿರುವ ದೈಹಿಕ ಒತ್ತಡ ಮತ್ತು ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
ಬಹುಶಾಖಾ ತಜ್ಞರ ತಂಡದ ನಿಗಾದಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, 24 ಗಂಟೆಗಳ ವೈದ್ಯಕೀಯ ಮೇಲ್ವಿಚಾರಣೆ ಅನಿವಾರ್ಯವಾಗಿದೆ ಎಂದು ಆಸ್ಪತ್ರೆ ಸ್ಪಷ್ಟಪಡಿಸಿದೆ.