'ಪ್ರತಿಭಟನಾಕಾರರ ಮೇಲೆ ಕಣ್ಗಾವಲು? ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಿದ್ದೀರಾ?': ದೆಹಲಿ ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ

ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿರುವವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸಿತು.
CJP Protest
ಸಿಜೆಪಿ ಪ್ರತಿಭಟನೆ
Updated on

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿರುವವರ ಮೇಲೆ ನಿರಂತರ ನಿಗಾ ಇರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್, "ಸುಪ್ರೀಂ ಕೋರ್ಟ್ ನೀಡಿರುವ ಕಣ್ಗಾವಲು ಮಾರ್ಗಸೂಚಿಗಳನ್ನು ದೆಹಲಿ ಪೊಲೀಸರು ಪಾಲಿಸಿದ್ದಾರೆಯೇ?" ಎಂದು ಪ್ರಶ್ನಿಸಿದೆ.

2017ರಲ್ಲಿ ನೀಡಿದ್ದ ಐತಿಹಾಸಿಕ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಗೌಪ್ಯತೆಯ ಹಕ್ಕು (Right to Privacy) ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಘೋಷಿಸಿತ್ತು. ಅಲ್ಲದೆ, ಸರ್ಕಾರದ ಯಾವುದೇ ರೀತಿಯ ಕಣ್ಗಾವಲು ಕಾನೂನುಬದ್ಧ, ಅಗತ್ಯ ಮತ್ತು ಉದ್ದೇಶಕ್ಕೆ ಅನುಗುಣ (Proportionate) ಆಗಿರಬೇಕು ಎಂಬ ತತ್ವವನ್ನೂ ಪ್ರತಿಪಾದಿಸಿತ್ತು.

CJP Protest
CJP Protest LIVE Updates | ಜುಲೈ 20 ಕೇವಲ ಟ್ರೇಲರ್; ಇನ್ನೂ ಲಕ್ಷಾಂತರ ಮಂದಿ ದೆಹಲಿಗೆ ಬರಲಿದ್ದಾರೆ: ಸಿಜೆಪಿ

ಐಶೆ ಘೋಷ್ ಅರ್ಜಿ

ಈ ಹಿನ್ನೆಲೆಯಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಜೂನ್ 20ರಿಂದ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆ ಆರಂಭವಾದ ಬಳಿಕ ಪ್ರತಿಭಟನಾಕಾರರ ಮೇಲೆ ನಿರಂತರವಾಗಿ ಫೋಟೋ, ವಿಡಿಯೊ ಚಿತ್ರೀಕರಣ ನಡೆಸಲಾಗುತ್ತಿದೆ. ಅಲ್ಲದೆ, ಶಾಶ್ವತ ಕಣ್ಗಾವಲು ಗೋಪುರದ (Surveillance Tower) ಮೂಲಕ 24 ಗಂಟೆಗಳ ಕಾಲ ನಿಗಾ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅರ್ಜಿಯಲ್ಲಿ, ಪ್ರತಿಭಟನೆಯ ದಾಖಲಾತಿಗೆ ಮಾತ್ರ ಸೀಮಿತವಾಗದೇ, ಪ್ರತಿಭಟನಾಕಾರರು ಊಟ ಮಾಡುವುದು, ವಿಶ್ರಾಂತಿ ಪಡೆಯುವುದು, ವೈದ್ಯಕೀಯ ನೆರವು ಪಡೆಯುವುದು ಸೇರಿದಂತೆ ಅವರ ದೈನಂದಿನ ವೈಯಕ್ತಿಕ ಚಟುವಟಿಕೆಗಳನ್ನೂ ಚಿತ್ರೀಕರಿಸಲಾಗುತ್ತಿದೆ ಎಂದು ದೂರಲಾಗಿದೆ.

ಅರ್ಜಿಯಲ್ಲಿ ಮಹಿಳಾ ಪ್ರತಿಭಟನಾಕಾರರ ಕುರಿತೂ ಗಂಭೀರ ಆರೋಪ ಮಾಡಲಾಗಿದ್ದು, ಮಳೆಯ ವೇಳೆ ಬಟ್ಟೆಗಳು ಒದ್ದೆಯಾಗಿದ್ದ ಸಂದರ್ಭದಲ್ಲೂ ಮಹಿಳೆಯರ ಫೋಟೋ ಮತ್ತು ವಿಡಿಯೊಗಳನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ.

'ಸುಪ್ರೀಂ ಸೂಚನೆ ಪಾಲಿಸಿದ್ದೀರಾ?' – ಹೈಕೋರ್ಟ್ ಪ್ರಶ್ನೆ

ಸೋಮವಾರ ನಡೆದ ವಿಚಾರಣೆಯಲ್ಲಿ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ವಿಭಾಗೀಯ ಪೀಠ, ದೆಹಲಿ ಪೊಲೀಸರ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ, "ಸುಪ್ರೀಂ ಕೋರ್ಟ್‌ನ ಕಣ್ಗಾವಲು ಕುರಿತ ನಿರ್ದೇಶನಗಳನ್ನು ನೋಡಿದ್ದೀರಾ? ದೆಹಲಿ ಪೊಲೀಸರು ಆ ಮಾರ್ಗಸೂಚಿಗಳನ್ನು ಪಾಲಿಸಿದ್ದಾರೆಯೇ?" ಎಂದು ಪ್ರಶ್ನಿಸಿತು.

ತುಷಾರ್ ಮೆಹ್ತಾ ವಾದ

ಇದಕ್ಕೆ ಉತ್ತರಿಸಿದ ತುಷಾರ್ ಮೆಹ್ತಾ, "ಇಲ್ಲಿ ಯಾವುದೇ ರೀತಿಯ ಕಣ್ಗಾವಲು ನಡೆದಿಲ್ಲ. ಜಂತರ್ ಮಂತರ್‌ನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಯೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ವಿಡಿಯೊದಲ್ಲಿ ದಾಖಲಿಸಲಾಗುತ್ತದೆ. ಈ ಪ್ರತಿಭಟನೆಯಲ್ಲಿಯೂ ನೂರಾರು ಜನರು ಸ್ವತಃ ವಿಡಿಯೊ ಮತ್ತು ರೀಲ್ಸ್ ಮಾಡುತ್ತಿದ್ದಾರೆ. ಇದನ್ನು ಕಣ್ಗಾವಲು ಎಂದು ಕರೆಯಲು ಸಾಧ್ಯವಿಲ್ಲ" ಎಂದು ವಾದಿಸಿದರು.

ಎರಡೂ ಪಕ್ಷಗಳ ವಾದ ಆಲಿಸಿದ ಹೈಕೋರ್ಟ್, ಪ್ರಕರಣದ ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು, "ನಾಳೆ ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತೇವೆ. ಸಿದ್ಧರಾಗಿ ಬನ್ನಿ," ಎಂದು ಸೂಚಿಸಿದೆ.

ಅಂದಹಾಗೆ ಈ ಪ್ರತಿಭಟನೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com