

ನವದೆಹಲಿ: ಮಹಿಳಾ ಸಂಸದರ ವಿರುದ್ಧ ಅವಹೇಳನಕಾರಿ ಹಾಗೂ ಅಸಭ್ಯ ಭಾಷೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರನ್ನು ಲೋಕಸಭೆಯ ಮುಂಗಾರು ಅಧಿವೇಶನದ ಉಳಿದ ಅವಧಿಗೆ ಬುಧವಾರ ಅಮಾನತುಗೊಳಿಸಲಾಗಿದೆ.
ಬುಧವಾರ ಮಧ್ಯಾಹ್ನ 2 ಗಂಟೆಗೆ ದಿನದ ಎರಡನೇ ಮುಂದೂಡಿಕೆಯ ಬಳಿಕ ಸದನ ಮರುಸಭೆಯಾದಾಗ, ಸಭಾಧ್ಯಕ್ಷರ ಪರವಾಗಿ ಕಲಾಪ ನಡೆಸುತ್ತಿದ್ದ ಕೃಷ್ಣ ಪ್ರಸಾದ್ ತೆನ್ನೇಟಿ ಅವರು ಕಲ್ಯಾಣ್ ಬ್ಯಾನರ್ಜಿ ವಿರುದ್ಧ ಮಹಿಳಾ ಸದಸ್ಯರೊಬ್ಬರು ಸಲ್ಲಿಸಿದ್ದ ದೂರನ್ನು ಉಲ್ಲೇಖಿಸಿದರು.
ಬ್ಯಾನರ್ಜಿ ಅವರ ಹೇಳಿಕೆ ಸದನದ ಘನತೆಗೆ ಧಕ್ಕೆ ಉಂಟುಮಾಡಿದೆ ಎಂದು ಅವರು ತಿಳಿಸಿದರು. ನಂತರ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಅವರು ಕಲ್ಯಾಣ್ ಬ್ಯಾನರ್ಜಿ ಅವರನ್ನು ಅಮಾನತುಗೊಳಿಸುವ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.
ವಿಪಕ್ಷ ಸದಸ್ಯರು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಘೋಷಣೆ ಕೂಗುತ್ತಿದ್ದ ನಡುವೆಯೇ, ಧ್ವನಿಮತದ ಮೂಲಕ ನಿರ್ಣಯ ಅಂಗೀಕರಿಸಲಾಯಿತು. ನಿರ್ಣಯ ಅಂಗೀಕಾರವಾದ ಬಳಿಕ, ಕಲ್ಯಾಣ್ ಬ್ಯಾನರ್ಜಿ ಅaವರಿಗೆ ಸದನದ ಆವರಣ ತೊರೆಯುವಂತೆ ಅಧ್ಯಕ್ಷತೆ ವಹಿಸಿದ್ದ ತೆನ್ನೇಟಿ ಸೂಚಿಸಿದರು.
ಇದಾದ ಬಳಿಕವೂ ವಿಪಕ್ಷ ಸದಸ್ಯರ ಘೋಷಣೆ ಮುಂದುವರಿದ ಹಿನ್ನೆಲೆಯಲ್ಲಿ ಲೋಕಸಭೆಯನ್ನು ದಿನಪೂರ್ತಿ ಮುಂದೂಡಲಾಯಿತು.
ಅಂದಹಾಗೆ ಲೋಕಸಭೆಯ ಮುಂಗಾರು ಅಧಿವೇಶನವು ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿದೆ.
ಆಗಿದ್ದೇನು?
ಇದಕ್ಕೂ ಮುನ್ನ, ವಿಪಕ್ಷದ ಗದ್ದಲದ ಕಾರಣ ಸದನ ಮುಂದೂಡಲ್ಪಟ್ಟ ನಂತರ ಲೋಕಸಭೆಯೊಳಗೆ ಕಲ್ಯಾಣ್ ಬ್ಯಾನರ್ಜಿ ಹಾಗೂ ಅವರ ಮಾಜಿ ಪಕ್ಷದ ಸಹೋದ್ಯೋಗಿಗಳಾಗಿರುವ ಎನ್‌ಸಿಪಿಐ (NCPI) ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವಾಗ್ವಾದದಲ್ಲಿ ಎನ್‌ಸಿಪಿಐ ಸಂಸದರಾದ ಮಿತಾಲಿ ಬಾಗ್, ಶತಾಬ್ದಿ ರಾಯ್ ಹಾಗೂ ಕಾಕೋಲಿ ಘೋಷ್ ದಸ್ತಿದಾರ್ ಭಾಗಿಯಾಗಿದ್ದರು. ಕಲ್ಯಾಣ್ ಬ್ಯಾನರ್ಜಿ ಅವರು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರ ಪರವಾಗಿ ಉಳಿದಿರುವ ನಾಯಕರಲ್ಲಿ ಒಬ್ಬರಾಗಿದ್ದಾರೆ.
ಈ ವಾಗ್ವಾದಕ್ಕೆ ನಿಖರ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಕೆಲವು ವಿಪಕ್ಷ ಸದಸ್ಯರು ಮಧ್ಯಪ್ರವೇಶಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಬಳಿಕ ಏನಾಯಿತು ಎಂದು ಇತರ ವಿಪಕ್ಷ ಸದಸ್ಯರು ಪ್ರಶ್ನಿಸಿದಾಗ, ಕಲ್ಯಾಣ್ ಬ್ಯಾನರ್ಜಿ ಅಲ್ಲಿಂದ ಹೊರಟುಹೋದರು.
ನಂತರ ಮಿತಾಲಿ ಬಾಗ್, ಕಾಕೋಲಿ ಘೋಷ್ ದಸ್ತಿದಾರ್ ಸೇರಿದಂತೆ ಎನ್‌ಸಿಪಿಐ ಸದಸ್ಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿ ಈ ವಿಷಯದ ಕುರಿತು ದೂರು ನೀಡಿದರು.
20 ಟಿಎಂಸಿ ಸಂಸದರ ಬಂಡಾಯ
ಈ ನಡುವೆ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಸೋತ ಬಳಿಕ, ಪಕ್ಷದ 20 ಮಂದಿ ಲೋಕಸಭಾ ಸದಸ್ಯರು ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಎದ್ದು ಎನ್‌ಸಿಪಿಐಗೆ ಸೇರ್ಪಡೆಯಾಗಿದ್ದರು. ಅವರು ಲೋಕಸಭೆಯಲ್ಲಿ ಟಿಎಂಸಿ ಸದಸ್ಯರಿಂದ ಪ್ರತ್ಯೇಕವಾಗಿ ಕುಳಿತುಕೊಳ್ಳುತ್ತಿದ್ದಾರೆ. ಅಲ್ಲದೆ, ಎನ್‌ಸಿಪಿಐ ಸಂಸದರು ಎನ್‌ಡಿಎ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮ್ಮ ಬೆಂಬಲವಿರುವುದಾಗಿ ಘೋಷಿಸಿದ್ದಾರೆ.