

ಹೈದರಾಬಾದ್: ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಆರ್‌ಟಿಸಿ ಬಸ್ ಅನ್ನು ಅಪರಿಚಿತ ವ್ಯಕ್ತಿಯೊಬ್ಬ ಕಳವು ಮಾಡಿ ಪರಾರಿಯಾಗಿದ್ದು, ಸುಮಾರು 18 ಕಿಲೋಮೀಟರ್‌ಗಳವರೆಗೆ ಹೈಡ್ರಾಮಾ ಸೃಷ್ಟಿಸಿದ ಬಳಿಕ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿರುವ ಘಟನೆ ತೆಲಂಗಾಣದ ಜಗಿತ್ಯಾಳ ಜಿಲ್ಲೆಯಲ್ಲಿ ನಡೆದಿದೆ.
ಜಗಿತ್ಯಾಳ ಜಿಲ್ಲೆಯ ಕೋರಟ್ಲ ಡಿಪೋಗೆ ಸೇರಿದ TS08 Z 0103 ಸಂಖ್ಯೆಯ ಆರ್‌ಟಿಸಿ ಬಸ್ ಅನ್ನು ಚಾಲಕ ಪ್ರವೀಣ್ ಅವರು ಕೋರಟ್ಲ ಬಸ್ ನಿಲ್ದಾಣದ 8ನೇ ಪ್ಲಾಟ್‌ಫಾರ್ಮ್‌ನಲ್ಲಿ ನಿಲ್ಲಿಸಿ, ಕಂಡಕ್ಟರ್ ಜೊತೆಗೆ ಸ್ವಲ್ಪ ಹೊತ್ತು ಹೊರಗೆ ಹೋಗಿದ್ದರು. ಇದೇ ವೇಳೆ, ಅಪರಿಚಿತ ವ್ಯಕ್ತಿಯೊಬ್ಬ ಬಸ್ ಏರಿ ಅದನ್ನು ಚಲಾಯಿಸಿಕೊಂಡು ನಿಜಾಮಾಬಾದ್ ಕಡೆಗೆ ಪರಾರಿಯಾಗಿದ್ದಾನೆ.
ಬಸ್ ಅನ್ನು ಅಪರಿಚತನೋರ್ವ ಚಲಾಯಿಸುತ್ತಿರುವುದನ್ನು ಗಮನಿಸಿದ ನಿಲ್ದಾಣದ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಮೆಟ್‌ಪಲ್ಲಿ ವಲಯದ ಪೊಲೀಸರು ಹಾಗೂ ಆರ್‌ಟಿಸಿ ಸಿಬ್ಬಂದಿ ಹಲವು ವಾಹನಗಳಲ್ಲಿ ಬಸ್ ಅನ್ನು ಬೆನ್ನಟ್ಟಿದರು.
ಮೂರು ಬೈಕ್, ಪೊಲೀಸ್ ವಾಹನಕ್ಕೂ ಡಿಕ್ಕಿ
ಸಿಬ್ಬಂದಿ ಹಾಗೂ ಪೊಲೀಸರು ಕೂಗಿದರೂ ಕೇಳದ ಅಪರಿಚ ವ್ಯಕ್ತಿ ದಾರಿಯಲ್ಲಿ ಸಿಕ್ಕ ಸಿಕ್ಕ ಕಡೆ ಬಸ್ ಚಲಾಯಿಸಿದ್ದಾನೆ.
ಆರೋಪಿ ಮಾರ್ಗಮಧ್ಯೆ ಕೋರಟ್ಲ, ಆರಪೇಟ ಹಾಗೂ ವೆಂಕಟ್ರಾವ್‌ಪೇಟ ಪ್ರದೇಶಗಳಲ್ಲಿ ಮೂರು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಬೈಕ್ ಸವಾರರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಇದರ ಜೊತೆಗೆ, ಬೆನ್ನಟ್ಟುತ್ತಿದ್ದ ಪೊಲೀಸ್ ವಾಹನಕ್ಕೂ ಡಿಕ್ಕಿ ಹೊಡೆದು ಅದಕ್ಕೂ ಹಾನಿ ಉಂಟುಮಾಡಿದ್ದಾನೆ.
ಹೆದ್ದಾರಿ ಬಂದ್ ಮಾಡಿ ಸಿನಿಮೀಯ ಕಾರ್ಯಾಚರಣೆ
ಘಟನೆಯ ಮಾಹಿತಿ ಪಡೆದ ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿ, ಮೆಟ್‌ಪಲ್ಲಿ ತಾಲೂಕಿನ ಗಂಡಿ ಹನುಮಾನ್ ದೇವಸ್ಥಾನದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವಾಹನಗಳನ್ನು ಅಡ್ಡವಾಗಿ ನಿಲ್ಲಿಸಿ ಬಸ್‌ಗೆ ದಾರಿ ಮುಚ್ಚಿದರು.
ಮುಂದೆ ಸಾಗಲು ದಾರಿ ಸಿಗದೆ, ಆರೋಪಿ ಬಸ್ ಅನ್ನು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಿಲ್ಲಿಸಿದನು. ಬಳಿಕ ಕಾಲ್ನಡಿಗೆಯಲ್ಲಿ ಪರಾರಿಯಾಗಲು ಯತ್ನಿಸಿದರೂ, ಪೊಲೀಸರು ಆತನನ್ನು ಬೆನ್ನಟ್ಟಿ ಬಂಧಿಸಿದರು.
ಬಂಧಿತನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಬಂಧಿತನನ್ನು ಧರ್ಮಪುರಿ ಮಂಡಲದ ನಾಗರಂ ಗ್ರಾಮದ ಸಾಂಬಯ್ಯ ಎಂದು ಗುರುತಿಸಲಾಗಿದೆ. ಆತ ಬಸ್ ಕಳವು ಮಾಡಲು ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.