

ದೆಹಲಿ: ದೇಶಾದ್ಯಂತ ನೀಟ್ ಪರೀಕ್ಷೆ ಅಕ್ರಮ ಹಿನ್ನೆಲೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆಗಳು ನಡೆಸುತ್ತಿರುವ ಬೆನ್ನಲ್ಲೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪುತ್ರಿ ನೈಮಿಷಾ ಪ್ರಧಾನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ಕೇಂದ್ರದಲ್ಲಿ ಪ್ರಮುಖವಾದ ಶಿಕ್ಷಣ ಇಲಾಖೆಯನ್ನೇ ಮುನ್ನಡೆಸುತ್ತಿರುವ ಸಚಿವರ ಮಗಳು, ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಓದುವ ಬದಲು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.
ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿದೇಶಿ ಶಿಕ್ಷಣವನ್ನು ಗುರಿಯಾಗಿಸಿಕೊಂಡು ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡಲು ಶುರುಮಾಡಿದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ನೈಮಿಷಾ ಪ್ರಧಾನ್ ಅಮೆರಿಕದ ಮ್ಯಾಸಚೂಸೆಟ್ಸ್‌ನ ಟಫ್ಟ್ಸ್ ವಿಶ್ವವಿದ್ಯಾಲಯದಿಂದ 2023ರಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು. ಪ್ರಸ್ತುತ ಅವರು ಅಮೆರಿಕ-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂನಲ್ಲಿ ಹಿರಿಯ ಸಹೋದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹಲವಾರು ಬಳಕೆದಾರರು ಅವರ ಇನ್‌ಸ್ಟಾಗ್ರಾಮ್ ಖಾತೆ ಪತ್ತೆಹಚ್ಚಿ ಆಕೆಯ ಪೋಟೋಗಳಿಗೆ ಕಾಮೆಂಟ್ ಮಾಡಿದ್ದರು,, ಆದರೆ ಇನ್ನು ಕೆಲವರು ಅವರ ತಂದೆ ಭಾರತದ ಶಿಕ್ಷಣ ಸಚಿವರಾಗಿರುವಾಗ ಮಗಳು ವಿದೇಶದಲ್ಲಿ ಅಧ್ಯಯನ ಮಾಡುವ ಅವರ ಆಯ್ಕೆಯನ್ನು ಪ್ರಶ್ನಿಸಿದ್ದರು.
ಶಿಕ್ಷಣ ಸಚಿವರ ಮಗಳೇ ಭಾರತದ ಶಿಕ್ಷಣ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದೆ ವಿದೇಶಕ್ಕೆ ಹೋಗಿದ್ದಾರೆ ಎಂದು ಕೆಲವರು ಟೀಕಿಸಿದರೆ, ಮತ್ತೊಂದೆಡೆ ಹಲವರು ನೈಮಿಷಾ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಪ್ರತಿಪಕ್ಷಗಳು ನೀಟ್ ವಿಚಾರದಲ್ಲಿ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದಿದ್ದು, ಸಚಿವರು ಮಾತ್ರ ವಿಪಕ್ಷಗಳು ವಿದ್ಯಾರ್ಥಿಗಳ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಇದರ ನಡುವೆ ಸಚಿವರ ಕುಟುಂಬ ಸದಸ್ಯರ ಮೇಲಿನ ಈ ಆನ್‌ಲೈನ್ ಟ್ರೋಲ್ ಹೊಸ ಚರ್ಚೆಗೆ ಗ್ರಾಸವಾಗಿದೆ.