'ಇದು ಕೇವಲ ಆರಂಭ... ಸುದೀರ್ಘ ಹಾದಿ ಬಾಕಿಯಿದೆ: ಹೊಸ Video ಬಿಡುಗಡೆ ಮಾಡಿದ Cockroach Janata Party

ಎಲ್ಲರೂ ನಮ್ಮ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾಗ ನಮ್ಮನ್ನು ನಂಬಿದ, ಪ್ರೀತಿಸಿದ ಪ್ರತಿಯೊಬ್ಬ ಬೆಂಬಲಿಗನಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವಿಲ್ಲದೆ ಈ ಹೋರಾಟ ಯಶಸ್ವಿಯಾಗುತ್ತಿರಲಿಲ್ಲ.
Cockroach Janata Party founder Abhijeet Dipke
ಜಿರಳೆ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ
Updated on

ನವದೆಹಲಿ: ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸತತ 37 ದಿನಗಳ ಕಾಲ ನಡೆದ ಐತಿಹಾಸಿಕ ಪ್ರತಿಭಟನೆ ಯಶಸ್ವಿಯಾದ ಬೆನ್ನಲ್ಲೇ, ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ ಭಾನುವಾರ ಹೊಸ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ದೇಶದ ಯುವಶಕ್ತಿಗೆ ಸಿಕ್ಕ ಅತ್ಯಂತ ದೊಡ್ಡ ಗೆಲುವು ಎಂದು ಬಣ್ಣಿಸಿರುವ ಅವರು, "ಇದು ಕೇವಲ ಆರಂಭವಷ್ಟೇ, ನಾವು ಇನ್ನೂ ಬಹಳ ದೂರ ಸಾಗಬೇಕಿದೆ" ಎಂದು ಹೇಳಿದ್ದಾರೆ.

ಕಳೆದ 37 ದಿನಗಳಲ್ಲಿ ನಾನು ಅನುಭವಿಸಿದ ಪರಿಸ್ಥಿತಿ ತುಂಬಾ ಕಷ್ಟಕರವಾಗಿತ್ತು. ಇದು ನನಗೆ ಮಾತ್ರವಲ್ಲ, ನಮ್ಮ ಇಡೀ ತಂಡಕ್ಕೂ ಅತ್ಯಂತ ಸವಾಲಿನ ಸಮಯವಾಗಿತ್ತು ಎಂದು ತಿಳಿಸಿದ್ದಾರೆ.

ಇದೇ ವೇಳೆ ದೇಶಾದ್ಯಂತ ಸಿಜೆಪಿಗೆ ಬೆಂಬಲ ನೀಡಿದ ಕಾರ್ಯಕರ್ತರು ಹಾಗೂ ಜನತೆಗೆ ಧನ್ಯವಾದ ತಿಳಿಸಿದ ಅವರು, ಎಲ್ಲರೂ ನಮ್ಮ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾಗ ನಮ್ಮನ್ನು ನಂಬಿದ, ಪ್ರೀತಿಸಿದ ಪ್ರತಿಯೊಬ್ಬ ಬೆಂಬಲಿಗನಿಗೂ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಬೆಂಬಲವಿಲ್ಲದೆ ಈ ಹೋರಾಟ ಯಶಸ್ವಿಯಾಗುತ್ತಿರಲಿಲ್ಲ ಎಂದರು.

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಲ್ಲರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗದಿರುವುದಕ್ಕೆ ಕ್ಷಮೆಯಾಚಿಸಿರುವ ದೀಪ್ಕೆ, "ನನಗೆ ಟೈಫಾಯ್ಡ್ ಆಗಿದ್ದು, 101 ಡಿಗ್ರಿ ಜ್ವರ ಇತ್ತು. ಅದರಿಂದಲೇ ಮನೆಗೆ ಮರಳಬೇಕಾಯಿತು. ನಿಮ್ಮೆಲ್ಲರನ್ನು ಭೇಟಿಯಾಗಿ ಧನ್ಯವಾದ ಹೇಳಲು ಸಾಧ್ಯವಾಗಲಿಲ್ಲ," ಎಂದು ಹೇಳಿದರು.

ಪ್ರತಿಭಟನಾ ಸ್ಥಳದಲ್ಲಿ 37 ದಿನಗಳ ಕಾಲ ಅಚಲವಾಗಿ ನಿಂತಿದ್ದ ಬೆಂಬಲಿಗರನ್ನು ಶ್ಲಾಘಿಸಿದ ಅವರು, "ದೇಶಕ್ಕಾಗಿ ನೀವು ಮಾಡಿದ ತ್ಯಾಗವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮೆಲ್ಲರಿಗೂ ನನ್ನ ಸಲಾಂ. ನಿಮ್ಮಿಲ್ಲದೆ ನಾವು ಈ ಹಂತ ತಲುಪಲು ಸಾಧ್ಯವಾಗುತ್ತಿರಲಿಲ್ಲ," ಎಂದು ಹೇಳಿದರು.

ಬಳಿಕ ತಮ್ಮನ್ನು ಟೀಕಿಸಿದವರಿಗೂ ಧನ್ಯವಾದ ಹೇಳಿರುವ ದೀಪ್ಕೆ, "ನಮ್ಮನ್ನು ಪ್ರಶ್ನಿಸಿದವರು, ಟೀಕಿಸಿದವರು, ಪ್ರತಿಭಟನೆ ಹೇಗೆ ನಡೆಸಬೇಕು ಗೊತ್ತಿಲ್ಲ ಎಂದವರು ಕೂಡ ನಮಗೆ ಪಾಠ ಕಲಿಸಿದ್ದಾರೆ. ಅವರ ಟೀಕೆಗಳಿಂದಲೇ ನಾವು ಇನ್ನಷ್ಟು ಉತ್ತಮವಾಗಲು ಸಾಧ್ಯವಾಯಿತು. ಕಾಕ್‌ರೋಚ್ ಜನತಾ ಪಾರ್ಟಿ ಇನ್ನೂ ಬಹಳ ದೂರ ಸಾಗಬೇಕಿದೆ. ಇದು ಕೇವಲ ಆರಂಭ," ಎಂದು ಹೇಳಿದರು.

Cockroach Janata Party founder Abhijeet Dipke
CJP Protest LIVE Updates | ಜುಲೈ 20 ಕೇವಲ ಟ್ರೇಲರ್; ಇನ್ನೂ ಲಕ್ಷಾಂತರ ಮಂದಿ ದೆಹಲಿಗೆ ಬರಲಿದ್ದಾರೆ: ಸಿಜೆಪಿ

ಶನಿವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಸಿಜೆಪಿ ತನ್ನ 36 ದಿನಗಳ ಜಂತರ್ ಮಂತರ್ ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಘೋಷಿಸಿತ್ತು.

ಸರ್ಕಾರ ತಮ್ಮ ಎಲ್ಲ ಪ್ರಮುಖ ಬೇಡಿಕೆಗಳನ್ನು ಒಪ್ಪಿಕೊಂಡಿದೆ ಎಂದು ಪಕ್ಷ ಹೇಳಿದ್ದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ, ಪ್ರತಿಭಟನಾಕಾರರ ವಿರುದ್ಧ ದಾಖಲಾದ ಎಫ್‌ಐಆರ್‌ಗಳ ಹಿಂಪಡೆಯುವಿಕೆ ಸೇರಿದಂತೆ ಹಲವು ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸಿದೆ ಎಂದು ತಿಳಿಸಿತ್ತು.

ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರೊಂದಿಗೆ ನಡೆದ ಹಲವು ಸುತ್ತಿನ ಮಾತುಕತೆಗಳ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ತಿಳಿಸಿದ್ದರು.

"ಒಪ್ಪಂದದ ಷರತ್ತುಗಳನ್ನು ಸರ್ಕಾರ ನಿಗದಿತ ಅವಧಿಯಲ್ಲಿ ಜಾರಿಗೆ ತರುತ್ತದೆ ಎಂಬ ವಿಶ್ವಾಸದೊಂದಿಗೆ ನಾವು ಸದ್ಭಾವನೆಯಿಂದ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ ಎಂದು ಹೇಳಿದ್ದರು.

ಮತ್ತೋರ್ವ ವಕ್ತಾರ ಆಶುತೋಷ್ ರಾಂಕಾ ಮಾತನಾಡಿ, "ನಮ್ಮ ಐದು ಅಂಶಗಳ ಬೇಡಿಕೆಗಳ ಕರಡನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ನಾಲ್ಕು ವಾರಗಳ ಬಳಿಕ ಮತ್ತೆ ಸಭೆ ನಡೆಸಿ ಶಿಕ್ಷಣ ಕ್ಷೇತ್ರದ ವ್ಯಾಪಕ ಸುಧಾರಣೆಗಳ ಕುರಿತು ಚರ್ಚೆ ನಡೆಸಲಾಗುವುದು," ಎಂದು ತಿಳಿಸಿದರು.

ಇನ್ನೊಂದೆಡೆ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದು ಹಾಗೂ ನೀಟ್ ಪರೀಕ್ಷೆ ರದ್ದಾದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ನಿಯಮಾನುಸಾರ ಗೌರವಯುತ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.

ಜೂನ್ 20ರಿಂದ ಜಂತರ್ ಮಂತರ್‌ನಲ್ಲಿ ನಡೆಯುತ್ತಿದ್ದ ಈ ಪ್ರತಿಭಟನೆ, ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್‌ಇ ಆನ್‌ಸ್ಕ್ರೀನ್ ಮೌಲ್ಯಮಾಪನದ ಅಕ್ರಮಗಳು ಹಾಗೂ ಸಾರ್ವಜನಿಕ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗಳನ್ನು ಆಗ್ರಹಿಸಿ ಆರಂಭವಾಗಿತ್ತು.

ಜುಲೈ 20ರಂದು ಸಾವಿರಾರು ವಿದ್ಯಾರ್ಥಿಗಳು ಸಂಸತ್‌ ಚಲೋ ನಡೆಸಿದ ವೇಳೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗಿಸಿದ್ದರು. ನಂತರ ಸರ್ಕಾರ ಮತ್ತು ಸಿಜೆಪಿ ನಡುವಿನ ಮಾತುಕತೆ ಆರಂಭವಾಗಿ, ಕೊನೆಗೆ ಪ್ರತಿಭಟನೆ ಅಂತ್ಯಗೊಂಡಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com