

ನವದೆಹಲಿ: ಭಾರತದ ವಿಭಜನೆಯು 'ಇತಿಹಾಸದ ಅತ್ಯಂತ ದೊಡ್ಡ ಪ್ರಮಾದ' ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (PoK) ಮರಳಿ ಪಡೆಯುವುದು ಭಾರತ ಮತ್ತು ಪಾಕಿಸ್ತಾನದ ನಡುವೆ ಬಾಕಿ ಉಳಿದಿರುವ ಏಕೈಕ ಸಮಸ್ಯೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವ ಸಿಂಗ್, ಕಾರ್ಗಿಲ್ ಯುದ್ಧದಲ್ಲಿ ಭಾರತದ ವಿಜಯದ 27ನೇ ವಾರ್ಷಿಕೋತ್ಸವ ಹಿನ್ನಲೆಯಲ್ಲಿ ನವದೆಹಲಿಯಲ್ಲಿ ಜಮ್ಮು ಕಾಶ್ಮೀರ ಪೀಪಲ್ಸ್ ಫೋರಮ್ ಮತ್ತು ಪಿಒಜೆಕೆ ಯೂತ್ ಫೋರಮ್ ಆಯೋಜಿಸಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಭದ್ರತಾ ನಿಲುವು ನಿರ್ಣಾಯಕವಾಗಿ ಬದಲಾಗಿದೆ. ಶತ್ರು ರಾಷ್ಟ್ರಗಳಿಗೆ ನುಗ್ಗಿ ಹೊಡೆಯುವ ಸಾಮರ್ಥ್ಯಕ್ಕೆ ಬಂದಿದೆ. ಕಾರ್ಗಿಲ್ ಸಂಘರ್ಷವನ್ನು ವಿಭಜನೆಯ ಘಟನೆಗಳಿಗೆ ಹೋಲಿಸಿದ ಸಿಂಗ್, 1947ರ ಉಪಖಂಡದ ವಿಭಜನೆಯು ಲಕ್ಷಾಂತರ ಜನರನ್ನು ಸ್ಥಳಾಂತರಿಸಿದ್ದು ದಶಕಗಳ ದ್ವೇಷವನ್ನು ಹುಟ್ಟುಹಾಕಿತು. ಅಲ್ಲದೆ 1947, 1965 ಮತ್ತು 1971ರ ಯುದ್ಧಗಳು ಮತ್ತು ಗಡಿಯಾಚೆಗಿನ ಭಯೋತ್ಪಾದನೆಗಳು ಸೇರಿವೆ ಎಂದು ಹೇಳಿದರು. ಕಾಶ್ಮೀರಿ ಪಂಡಿತರ ವಲಸೆಯನ್ನು ಸ್ವತಂತ್ರ ಭಾರತದ ಅತ್ಯಂತ ಗಂಭೀರ ಮಾನವೀಯ ದುರಂತಗಳಲ್ಲಿ ಒಂದಾಗಿದೆ ಎಂದರು.
ಶಾಂತಿ ಮತ್ತು ಅಭಿವೃದ್ಧಿ ಪರಸ್ಪರ ಬಲಪಡಿಸುವ ಸಂಬಂಧವನ್ನು ಹಂಚಿಕೊಳ್ಳುತ್ತವೆ. ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭೂತಪೂರ್ವ ಪರಿವರ್ತನೆ ಆಗಿದೆ. ಕಾಶ್ಮೀರ ಕಣಿವೆಗೆ ರೈಲ್ವೆ ಸಂಪರ್ಕ, ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಹೊಸ ಏಮ್ಸ್ ಸಂಸ್ಥೆಗಳು, ದೀರ್ಘಕಾಲದಿಂದ ಬಾಕಿ ಇರುವ ನೀರಾವರಿ ಯೋಜನೆಗಳು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಿದ ಮತ್ತು ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸಿದ ವೇಗವರ್ಧಿತ ಅಭಿವೃದ್ಧಿ ಉಪಕ್ರಮಗಳು ಸೇರಿದಂತೆ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಅವರು ಉಲ್ಲೇಖಿಸಿದರು.
ನಿರಂತರ ಶಾಂತಿ ತ್ವರಿತ ಅಭಿವೃದ್ಧಿಗೆ ಅನುವು ಮಾಡಿಕೊಟ್ಟಿದೆ. ಇನ್ನು ಅಭಿವೃದ್ಧಿಯೇ ಶಾಶ್ವತ ಸ್ಥಿರತೆಗೆ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿದೆ. ನಿಯಂತ್ರಣ ರೇಖೆಯಾದ್ಯಂತದ ಬೆಳವಣಿಗೆಗಳನ್ನು ಉಲ್ಲೇಖಿಸಿದ ಸಿಂಗ್, ಜಮ್ಮು ಮತ್ತು ಕಾಶ್ಮೀರದಲ್ಲಿನ ಅಭಿವೃದ್ಧಿಯ ವೇಗವು ಪಿಒಕೆಯಲ್ಲಿ ವಾಸಿಸುವ ಜನರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದರು. 1994ರ ಸರ್ವಾನುಮತದ ಸಂಸತ್ತಿನ ನಿರ್ಣಯವನ್ನು ನೆನಪಿಸಿಕೊಂಡ ಅವರು, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರವನ್ನು ಮರಳಿ ಪಡೆಯುವುದು ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮತ್ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು. ಪಿಒಜೆಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಪುನರುಚ್ಚರಿಸಿದರು.