

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಅತಿಯಾದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ಸ್ವತಂತ್ರ ವಿಶೇಷ ತನಿಖಾ ತಂಡ (SIT) ರಚಿಸುವ ಅಥವಾ ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನ್ಯಾಯಾಲಯ ನಿರ್ಧರಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಈ ಕುರಿತ ಅರ್ಜಿಯನ್ನು ವಿಚಾರಣೆ ನಡಸಿತು.
ವಿಚಾರಣೆ ಆರಂಭದಲ್ಲೇ, ಈ ಆರೋಪಗಳ ಕುರಿತು ಸ್ವತಂತ್ರ, ಪಾರದರ್ಶಕ ಹಾಗೂ ಸಮಗ್ರ ತನಿಖೆಗೆ ಆದೇಶಿಸಬಾರದೇ? ಎಂದು ಪೀಠ ಪ್ರಶ್ನಿಸಿತು.
"ಯಾರು ಕಾನೂನನ್ನು ಕೈಗೆತ್ತಿಕೊಂಡಿದ್ದಾರೋ, ಯಾರು ಮಿತಿಮೀರಿದ ಕ್ರಮ ಕೈಗೊಂಡಿದ್ದಾರೋ ಅವರ ವಿರುದ್ಧ ಕಾನೂನು ಕ್ರಮ ಜರುಗಲೇಬೇಕು" ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.
ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಮಿತಿಮೀರಿದ ಬಲಪ್ರಯೋಗ ನಡೆಸಿದ್ದಾರೆ ಎಂಬ ಆರೋಪಗಳ ಕುರಿತು ನ್ಯಾಯಸಮ್ಮತ ಮತ್ತು ಸ್ವತಂತ್ರ ತನಿಖೆ ಅಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿತು.
ನಿಗದಿತ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ, ಕಾನೂನು ತನ್ನ ಕೆಲಸ ಮಾಡಲೇಬೇಕು ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಮುಖ್ಯ ನ್ಯಾಯಮೂರ್ತಿಗಳು, ಎಲ್ಲಾ ಆರೋಪಗಳ ಕುರಿತೂ ಸ್ವತಂತ್ರ, ಪಾರದರ್ಶಕ ಮತ್ತು ಸಮಗ್ರ ತನಿಖೆ ನಡೆಸುವ ಬಗ್ಗೆ ನ್ಯಾಯಾಲಯ ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ಹೇಳಿದರು.
ಇದೇ ವೇಳೆ, ಪ್ರತಿಭಟನೆ ವೇಳೆ ಸುಮಾರು 250 ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳ ಬಗ್ಗೆಯೂ ತನಿಖೆ ನಡೆಸಬೇಕಿದ್ದು, ಈ ಕೃತ್ಯ ಎಸಗಿದ್ದು ನಿಜವಾಗಿಯೂ ವಿದ್ಯಾರ್ಥಿಗಳೇ ಅಥವಾ ಸಮಾಜಘಾತುಕ ಅಂಶಗಳೇ ಎಂಬುದನ್ನು ಪತ್ತೆಹಚ್ಚುವುದು ಅಗತ್ಯ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿದ್ಯಾರ್ಥಿಗಳು ಪೊಲೀಸರ ಮೇಲೆ ಹಿಂಸಾಚಾರ ನಡೆಸಿರುವ ಸಾಧ್ಯತೆ ಕಡಿಮೆ ಎಂದು ವಾದಿಸಿದರು.
"ಕೊಲೆ, ಅತ್ಯಾಚಾರ ಮತ್ತು ಎನ್‌ಡಿಪಿಎಸ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸಮಾಜಘಾತುಕ ಅಂಶಗಳು ಪ್ರತಿಭಟನೆಯೊಳಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ನಡೆಸಿವೆ" ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಇದಕ್ಕೂ ಮುನ್ನ ಸೋಮವಾರ ನಡೆದ ವಿಚಾರಣೆ ವೇಳೆ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವ ಹಕ್ಕು ಸಂವಿಧಾನದಿಂದ ಸಂಪೂರ್ಣವಾಗಿ ಖಾತರಿಪಡಿಸಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಪೊಲೀಸ್ ದೌರ್ಜನ್ಯ ಅಥವಾ ಲಾಠಿಚಾರ್ಜ್ ಅನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಜುಲೈ 20ರಂದು ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ 'ಸಂಸದ್ ಚಲೋ' ಪ್ರತಿಭಟನೆ ವೇಳೆ, ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದಾಗ ಭದ್ರತಾ ಪಡೆಗಳೊಂದಿಗೆ ಘರ್ಷಣೆ ಉಂಟಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಹಾಗೂ ಅಶ್ರುವಾಯು ಶೆಲ್‌ಗಳನ್ನು ಬಳಸಿದ್ದರು.
ಪ್ರತಿಭಟನಾಕಾರರು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.