ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ದೆಹಲಿ ಪೊಲೀಸರಿಂದ FIR ದಾಖಲು, ಸಾಮಾಜಿಕ ಜಾಲತಾಣ Xಗೆ ನೋಟಿಸ್ ಜಾರಿ..!

ತನಿಖೆಯಲ್ಲಿರುವ ಹೆಚ್ಚಿನ ಪೋಸ್ಟ್‌ಗಳು ಜಂತರ್‌ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಟವಾಗಿದ್ದವು ಎನ್ನಲಾಗಿದೆ.
file photo
ಸಂಗ್ರಹ ಚಿತ್ರ
Updated on

ನವದೆಹಲಿ: ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ಹಾಗೂ ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಪ್ರಮುಖ ಸಾಂವಿಧಾನಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಹಂಚಿಕೊಳ್ಳಲಾಗಿರುವ ಅವಹೇಳನಕಾರಿ, ದುರುದ್ದೇಶಪೂರಿತ ಮತ್ತು ಮಾನನಷ್ಟಕರ ಪೋಸ್ಟ್‌ಗಳನ್ನು ಪ್ರಕಟಿಸಿದ ಆರೋಪದಡಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ

ಈ ಸಂಬಂಧ ಪೋಸ್ಟ್‌ಗಳನ್ನು ಅಪ್‌ಲೋಡ್‌ ಮಾಡಿದ ಬಳಕೆದಾರರ ವಿವರಗಳನ್ನು ನೀಡುವಂತೆ ಎಕ್ಸ್ (X) ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತನಿಖೆಯಲ್ಲಿರುವ ಹೆಚ್ಚಿನ ಪೋಸ್ಟ್‌ಗಳು ಜಂತರ್‌ ಮಂತರ್‌ನಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಕಟವಾಗಿದ್ದವು ಎನ್ನಲಾಗಿದೆ.

ಈ ಪ್ರಕರಣವನ್ನು ದೆಹಲಿ ಪೊಲೀಸ್ ವಿಶೇಷ ಘಟಕದ ಇಂಟೆಲಿಜೆನ್ಸ್ ಫ್ಯೂಷನ್ ಅಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್ (IFSO) ವಿಭಾಗ ದಾಖಲಿಸಿಕೊಂಡಿದ್ದು, ಕ್ರಿಮಿನಲ್ ಬೆದರಿಕೆ, ಸಾರ್ವಜನಿಕರಲ್ಲಿ ಆತಂಕ ಅಥವಾ ಗೊಂದಲ ಸೃಷ್ಟಿಸುವ ಕೃತ್ಯ (Public Mischief) ಹಾಗೂ ಮಾನಹಾನಿ ಆರೋಪಗಳಡಿ ಎಫ್‌ಐಆರ್‌ ದಾಖಲಿಸಲಾಗಿದೆ.

ತನಿಖೆಯ ಭಾಗವಾಗಿ ದೆಹಲಿ ಪೊಲೀಸರು ಎಕ್ಸ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಿಗೆ ನೋಟಿಸ್ ನೀಡಿ, ವಿವಾದಿತ ಪೋಸ್ಟ್‌ಗಳು ಮತ್ತು ವಿಡಿಯೊಗಳನ್ನು ತಕ್ಷಣವೇ ತೆಗೆದುಹಾಕುವಂತೆ ಸೂಚಿಸಿದ್ದಾರೆ. ಜೊತೆಗೆ, ಆ ಪೋಸ್ಟ್‌ಗಳನ್ನು ಪ್ರಕಟಿಸಿದ ಖಾತೆಗಳ ನೋಂದಣಿ ವಿವರಗಳನ್ನು ಒದಗಿಸುವಂತೆ ಆದೇಶಿಸಿದ್ದಾರೆ.

ನೋಟಿಸ್‌ನಲ್ಲಿ ಸಂಬಂಧಿತ ಎಕ್ಸ್ ಖಾತೆದಾರರ ಪೂರ್ಣ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ಸೇರಿದಂತೆ ಎಲ್ಲಾ ನೋಂದಣಿ ಮಾಹಿತಿಯನ್ನು ನೀಡುವಂತೆ ಸೂಚಿಸಲಾಗಿದೆ.

ಇದರ ಜೊತೆಗೆ, ಆ ಖಾತೆಯ ಲಾಗಿನ್ ಮತ್ತು ಲಾಗ್‌ಔಟ್ ಸಮಯದ ವಿವರಗಳು (Timestamp), ಐಪಿ ಸಂಬಂಧಿತ ಮಾಹಿತಿ ಹಾಗೂ ತನಿಖೆಗೆ ನೆರವಾಗುವ ಇತರೆ ಮಾಹಿತಿಯನ್ನೂ ಸಲ್ಲಿಸುವಂತೆ ಪೊಲೀಸರು ಕೋರಿದ್ದಾರೆ.

file photo
ಪ್ರಧಾನ್ ರಾಜೀನಾಮೆ ನಂತರ ಜಂತರ್ ಮಂತರ್ ನಲ್ಲಿ ಕಲ್ಲು ತೂರಾಟ

ಜುಲೈ 20ರಂದು ನಡೆದ 'ಚಲೋ ಸಂಸತ್' ಪ್ರತಿಭಟನೆ ವೇಳೆ ನಡೆದ ಪೊಲೀಸ್ ಕ್ರಮದ ಬಳಿಕ ಹಾಗೂ ಜಂತರ್‌ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಗಳ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಪದಗಳನ್ನು ಬಳಸಿರುವ ಪೋಸ್ಟ್‌ಗಳು ಪ್ರಕಟವಾಗಿವೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಪೊಲೀಸ್ ಸಾಮಾಜಿಕ ಜಾಲತಾಣಗಳ ಮೇಲ್ವಿಚಾರಣೆ ತಂಡ ನಿರಂತರವಾಗಿ ವಿವಿಧ ವೇದಿಕೆಗಳಲ್ಲಿ ಪ್ರಕಟವಾಗುತ್ತಿರುವ ವಿಷಯಗಳನ್ನು ಪರಿಶೀಲಿಸುತ್ತಿದೆ.

ನಿಯಮ ಉಲ್ಲಂಘಿಸುವ ಅಥವಾ ಆಕ್ಷೇಪಾರ್ಹ ವಿಷಯಗಳು ಕಂಡುಬಂದ ತಕ್ಷಣ ಸಂಬಂಧಿತ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ನೋಟಿಸ್ ನೀಡಿ, ಅವುಗಳನ್ನು ತೆಗೆದುಹಾಕುವಂತೆ ಸೂಚಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈವರೆಗೆ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದ ಹಲವು ಪೋಸ್ಟ್‌ಗಳು ಹಾಗೂ ವಿಡಿಯೊಗಳನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುತ್ತಿರುವ ಇತರೆ ಆಕ್ಷೇಪಾರ್ಹ ವಿಷಯಗಳನ್ನು ಗುರುತಿಸಲು ಸೈಬರ್ ಹಾಗೂ ಸಾಮಾಜಿಕ ಜಾಲತಾಣ ಮೇಲ್ವಿಚಾರಣಾ ತಂಡಗಳು ತಮ್ಮ ನಿಗಾವನ್ನು ಮುಂದುವರಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com