

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಅಥವಾ ಮಾಡಿ ಸೋತ ನಂತರ ತಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಸಚಿವರಾಗುವ ರಾಜಕೀಯ ನಾಯಕರ ಕುರಿತು ಅಪಸ್ವರಗಳು ಕೇಳಿ ಬರುತ್ತಲೇ ಇರುತ್ತವೆ. ಇದೀಗ ದೇಶದ ಸರ್ವೋಚ್ಛ ನ್ಯಾಯಾಲಯವಾದ ಸುಪ್ರೀಂ ಕೋರ್ಟ್, ಶೀಘ್ರದಲ್ಲೇ ಆ ಕುರಿತು ಅಂದ್ರೆ ಶಾಸಕ ಅಥವಾ ವಿಧಾನ ಪರಿಷತ್ತಿನ ಸದಸ್ಯರಾಗದೆ ರಾಜಕಾರಣಿಯೊಬ್ಬರು ದೀರ್ಘಕಾಲ ಸಚಿವರಾಗಿ ಉಳಿಯಬಹುದೇ? ಸಂವಿಧಾನದಲ್ಲಿ ನೀಡಲಾದ 6 ತಿಂಗಳ ವಿನಾಯಿತಿಯನ್ನು ಪದೇ ಪದೇ ಬಳಸಬಹುದೇ? ಎಂಬ ಕುರಿತ ನಿರ್ಧಾರ ತಗದೆ ಕೊಳ್ಳಬಹುದು ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ:
ಹೌದು, ಚುನಾವಣೆಯಲ್ಲಿ ಗೆಲ್ಲದೆ ಒಬ್ಬ ವ್ಯಕ್ತಿ ಗರಿಷ್ಠ 6 ತಿಂಗಳು ಮಾತ್ರ ಸಚಿವರಾಗಿ ಮುಂದುವರಿಯಬಹುದು ಎಂದು ಭಾರತದ ಸಂವಿಧಾನದ 164(4) ವಿಧಿ ತಿಳಿಸುತ್ತದೆ. ಆದರೆ, ಈ ನಿಯಮದ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಿಹಾರದ ಪಂಚಾಯತ್ ರಾಜ್ ಸಚಿವ ದೀಪಕ್ ಪ್ರಕಾಶ್ ಅವರ ಮರುನೇಮಕವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು, "ಚುನಾವಣೆಯಲ್ಲಿ ಗೆಲ್ಲದೆ ಒಬ್ಬ ಸಚಿವ 6 ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿಯುವುದು ಹೇಗೆ ಸಾಧ್ಯ?" ಎಂದು ಬಿಹಾರ ಸರ್ಕಾರಕ್ಕೆ ಖಡಕ್ ಪ್ರಶ್ನೆ ಕೇಳಿದೆ.
ಏನಿದು ವಿವಾದ?
ರಾಷ್ಟ್ರೀಯ ಲೋಕ ಮೋರ್ಚಾ ನಾಯಕ ಹಾಗು ಬಿಹಾರದ ಪಂಚಾಯತ್ ರಾಜ್ ಸಚಿವ ದೀಪಕ್ ಪ್ರಕಾಶ್ ಅವರು ನವೆಂಬರ್ 20, 2025 ರಂದು ನಿತೀಶ್ ಕುಮಾರ್ ಸರ್ಕಾರದಲ್ಲಿ ಶಾಸಕರಾಗದಿದ್ದರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಅವರು 4 ತಿಂಗಳು 26 ದಿನಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದ ನಂತರ ನಿತೀಶ್ ಕುಮಾರ್ ರಾಜೀನಾಮೆಯಿಂದಾಗಿ ಆ ಸರ್ಕಾರ ಪತನಗೊಂಡಿತು.
ಮುಂದೆ, ಮೇ 7, 2026 ರಂದು ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾದಾಗ, ದೀಪಕ್ ಪ್ರಕಾಶ್ ಅವರನ್ನು ಮತ್ತೆ ಯಾವುದೇ ಸದನದ ಸದಸ್ಯರಾಗದಿದ್ದರೂ ಪಂಚಾಯತ್ ರಾಜ್ ಸಚಿವರನ್ನಾಗಿ ನೇಮಿಸಲಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ರಾಕೇಶ್ ಕುಮಾರ್ ಸಿಂಗ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಎರಡು ಅವಧಿಗಳನ್ನು ಒಟ್ಟಾಗಿ ಸೇರಿಸಿದರೆ ದೀಪಕ್ ಪ್ರಕಾಶ್ ಅವರು ಒಟ್ಟು 6 ತಿಂಗಳಿಗಿಂತ ಹೆಚ್ಚು ಕಾಲ ಚುನಾಯಿತರಾಗದೆ ಸಚಿವರಾಗಿ ಮುಂದುವರಿದಿದ್ದಾರೆ, ಇದು ಸಂವಿಧಾನಕ್ಕೆ ಮಾಡಿದ ದ್ರೋಹ ಎಂದು ವಾದಿಸಿದ್ದಾರೆ.
ಮುಂದುವರೆದು, ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ರಾಜೀನಾಮೆ ನೀಡಿ, ಮತ್ತೆ ಹೊಸ ಸರ್ಕಾರದಲ್ಲಿ ಮರುನೇಮಕಗೊಳ್ಳುವ ಮೂಲಕ ಸಂವಿಧಾನದ 6 ತಿಂಗಳ ಗಡುವು ನಿಯಮವನ್ನು ಈ ರೀತಿ ತಪ್ಪಿಸಲು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
ಏನಿದು ಭಾರತದ ಸಂವಿಧಾನದ 164(4) ವಿಧಿ?
ಈ ವಿಧಿಯ ಪ್ರಕಾರ, ಶಾಸಕರಲ್ಲದ ವ್ಯಕ್ತಿಯನ್ನು ಸಚಿವರನ್ನಾಗಿ ನೇಮಿಸಬಹುದು. ಆದರೆ ಅವರು ನೇಮಕಗೊಂಡ 6 ತಿಂಗಳ ಒಳಗಾಗಿ ವಿಧಾನಸಭೆ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕು. ಇಲ್ಲದಿದ್ದರೆ ಅವರ ಸಚಿವ ಸ್ಥಾನ ಸ್ವಯಂಚಾಲಿತವಾಗಿ ರದ್ದಾಗುತ್ತದೆ.
ಏತನ್ಮಧ್ಯೆ, ದೀಪಕ್ ಪ್ರಕಾಶ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪು ಸಚಿವರ ಸ್ಥಾನವನ್ನು ಮಾತ್ರ ನಿರ್ಧರಿಸುವುದಿಲ್ಲ. ಬದಲಿಗೆ 6 ತಿಂಗಳ ಸಾಂವಿಧಾನಿಕ ವಿನಾಯಿತಿಯನ್ನು ಮರಳಿ ಪಡೆಯಬಹುದೇ ಎಂಬುದನ್ನು ಸಹ ಇದು ಸ್ಪಷ್ಟಪಡಿಸುತ್ತದೆ. ಅದರಲ್ಲೂ, 2 ಅವಧಿಗಳನ್ನು ಸೇರಿ 6 ತಿಂಗಳು ಎಂದು ನ್ಯಾಯಾಲಯ ನಿರ್ಧರಿಸಿದರೆ, ಭವಿಷ್ಯದಲ್ಲಿ ಯಾವುದೇ ಸರ್ಕಾರವು ಅಂತಹ ನೇಮಕಾತಿಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ರೆ, ನ್ಯಾಯಾಲಯವು ಹೊಸ ಪ್ರಮಾಣವಚನದೊಂದಿಗೆ ಹೊಸ 6 ತಿಂಗಳ ಅವಧಿಯನ್ನು ಗುರುತಿಸಿದರೆ, ಅದು ಸಂವಿಧಾನದ ಹೊಸ ನ್ಯಾಯಾಂಗ ವ್ಯಾಖ್ಯಾನವಾಗುತ್ತದೆ. ಅದರ ಪರಿಣಾಮವಾಗಿ, ಆಗಸ್ಟ್ 4 ರಂದು ನಡೆಯುವ ವಿಚಾರಣೆ ಮಹತ್ವ ಪಡೆದುಕೊಂಡಿದೆ.