

ನವದೆಹಲಿ: ಭಾರತೀಯ ಜನತಾ ಪಕ್ಷದ ರಾಷ್ತ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ಬಿಜೆಪಿಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಅದರಂತೆ, ಮೋದಿಯ ಕಟ್ಟಾ ಬೆಂಬಲಿಗರಾಗಿದ್ದ ಶೆಹಜಾದ್ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿಯ ಉನ್ನತ ನಾಯಕತ್ವಕ್ಕೆ ಸಲ್ಲಿಸಿದ್ದು, ರಾಜೀನಾಮೆಯ ಕಾರಣ ಏನು ಎನ್ನುವುದು ಗೊತ್ತಾಗಬೇಕಿದೆ. ಆ ಕುರಿತ ವರದಿ ಇಲ್ಲಿದೆ:
ಯಾರು ಈ ಶೆಹಜಾದ್ ಪೂನಾವಾಲಾ?
ಬಿಜೆಪಿಯ ರಾಷ್ತ್ರೀಯ ವಕ್ತಾರರಾಗಿದ್ದ ಶೆಹಜಾದ್ ಪೂನಾವಾಲಾ ಅವರು, ವೃತ್ತಿಯಲ್ಲಿ ವಕೀಲರಾಗಿದ್ದು, ಕಾಂಗ್ರೆಸ್ ಮೂಲಕ ತಮ್ಮ ರಾಜಕೀಯ ಜೀವನವನ್ನ ಪ್ರಾರಂಭಿಸಿದರು. ಆದಾಗ್ಯೂ, 2017 ರಲ್ಲಿ, ಪಕ್ಷದ ಆಂತರಿಕ ಚುನಾವಣಾ ಪ್ರಕ್ರಿಯೆಯ ವಿರುದ್ಧ ಸಾರ್ವಜನಿಕವಾಗಿ ಬಂಡಾಯವೆದ್ದರು. ರಾಹುಲ್ ಗಾಂಧಿಯನ್ನು ಅಧ್ಯಕ್ಷರನ್ನಾಗಿ ನೇಮಿಸಲು ಚುನಾವಣಾ ಪ್ರಕ್ರಿಯೆಯನ್ನು ದುರುಪಯೋಗಪಡಿಸಲಾಗಿದೆ ಎಂದು ಆರೋಪಿಸಿ ಮುನ್ನೆಲೆಗೆ ಬಂದ ಇವರು, ವಿವಾದದ ನಂತರ ಕಾಂಗ್ರೆಸ್ ಪಕ್ಷ ಮತ್ತು ಸ್ವಂತ ಕುಟುಂಬದಿಂದ ದೂರವಾದರು.
ಇದಾದ ತರುವಾಯ ಬಿಜೆಪಿ ಸೇರಿದ ಅವರು, ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡರು. ಈ ಮೂಲಕ ಟಿವಿ ಚರ್ಚೆಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಅಂಕಿ-ಅಂಶಗಳೊಂದಿಗೆ ವಿರೋಧ ಪಕ್ಷಗಳ ವಿರುದ್ಧ ಪ್ರಖರ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿಯ ಪ್ರಮುಖ ಮತ್ತು ಜನಪ್ರಿಯ ಮುಖವಾಗಿ ಗುರುತಿಸಿಕೊಂಡಿದ್ದರು.
ಬಿಜೆಪಿಗೆ ರಾಜೀನಾಮೆ ಯಾಕೆ?
ಶೆಹಜಾದ್ ಪೂನಾವಾಲಾ ಅವರು ರಾಜೀನಾಮೆಯ ಕಾರಣ ಏನು ಎನ್ನುವುದು ಇನ್ನೂ ನಿಗೂಢವಾಗಿದೆ. ಆದ್ರೆ, ಮೂಲಗಳ ಪ್ರಕಾರ ರಾಜೀನಾಮೆ ನಿರ್ಧಾರದ ಹಿಂದೆ ವೈಯಕ್ತಿಕ ಕಾರಣಗಳು ಇವೆ ಎಂದು ವರದಿಯಾಗಿದೆ.
ಜೀವನಪರ್ಯಂತ ಮೋದಿ ಅನುಯಾಯಿ
ಏತನ್ಮಧ್ಯೆ, ರಾಜೀನಾಮೆಯ ಬೆನ್ನಲ್ಲೇ ಶೆಹಜಾದ್ ಅವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿನ ಪ್ರೊಫೈಲ್ ಬಯೋದಿಂದ ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಪದವನ್ನು ತೆಗೆದುಹಾಕಿದ್ದಾರೆ. ಜೊತೆಗೆ, ಪಕ್ಷ ತೊರೆದಿದ್ದರೂ ಸಹ, ಅವರು ತಮ್ಮ ಪ್ರೊಫೈಲ್‌ನಲ್ಲಿ ತಮ್ಮನ್ನು ಪ್ರಧಾನಿ ನರೇಂದ್ರ ಮೋದಿಯವರ ಜೀವನಪರ್ಯಂತ ಅನುಯಾಯಿ (Lifelong follower of PM Narendra Modi) ಎಂದು ಬಣ್ಣಿಸಿಕೊಂಡಿದ್ದಾರೆ.