

ಚೆನ್ನೈ: ಒಂದು ಕಡೆ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ ಕಾವೇರಿ ನೀರಿನ ವಿಚಾರವಾಗಿ ಮಾತುಕತೆ ನಡೆಸಲು ಪ್ರಯತ್ನ ಮುಂದುವರಿಸಿದ್ದರೆ, ಮತ್ತೊಂದು ಕಡೆ ತಮಿಳುನಾಡಿನ ಕಾವೇರಿ ಡೆಲ್ಟಾ ಜಿಲ್ಲೆಗಳ ಭತ್ತ ಬೆಳೆಯುವ ಪ್ರದೇಶಗಳ ರೈತರು ಇಬ್ಬರೂ ಪರಸ್ಪರ ಭೇಟಿ ನೀಡಬೇಕು ಎಂದು ಗುರುವಾರ ಆಗ್ರಹಿಸಿದ್ದಾರೆ.
ಆಗಸ್ಟ್ 3 ರಂದು ಸಿಎಂ ವಿಜಯ್ ಅವರು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಮ್ಮ ರಾಜ್ಯದ ಅಣೆಕಟ್ಟುಗಳ ವೈಮಾನಿಕ ಸಮೀಕ್ಷೆಗೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಕಾವೇರಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಪಿ ಆರ್ ಪಾಂಡಿಯನ್ ಹೇಳಿದ್ದಾರೆ. ಅಲ್ಲದೆ ಡಿಕೆ ಶಿವಕುಮಾರ್ ಅವರು ಸಹ ಡೆಲ್ಟಾ ಜಿಲ್ಲೆಗಳ ಸಮೀಕ್ಷೆಗಾಗಿ ತಮಿಳುನಾಡಿಗೆ ಬರಬೇಕು ಎಂದು ಒತ್ತಾಯಿಸಿದ್ದಾರೆ.
"ಡಿಕೆ ಶಿವಕುಮಾರ್ ಅವರು ತಮಿಳುನಾಡಿಗೆ ಭೇಟಿ ನೀಡಿ, ಒಣಗಿಹೋದ ನಮ್ಮ ಕುರುವೈ ಭತ್ತದ ಬೆಳೆಗೆ ಆಗಿರುವ ನೈಜ- ಹಾನಿಯನ್ನು ವೈಯಕ್ತಿಕವಾಗಿ ಪರಿಶೀಲಿಸಬೇಕು" ಎಂದು ಪಾಂಡಿಯನ್ ಸುದ್ದಿಗಾರರಿಗೆ ತಿಳಿಸಿದರು.
ಉಭಯ ರಾಜ್ಯಗಳ ಸಿಎಂಗಳ ಸಭೆಗೆ ರೈತರ ವಿರೋಧವನ್ನು ಸಮರ್ಥಿಸಿಕೊಂಡ ಪಾಂಡಿಯನ್ ಅವರು, ನೆರೆಯ ರಾಜ್ಯವು ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮತ್ತೊಂದು ಜಲಾಶಯವನ್ನು ನಿರ್ಮಿಸಲು ಹಿಂಬಾಗಿಲಿನ ಮೂಲಕ ಪ್ರಯತ್ನಿಸುತ್ತಿದೆ. ಇದು ತಮಿಳುನಾಡಿನ ಕೃಷಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದಿದ್ದಾರೆ.