

ತಮಿಳುನಾಡು ಭಾರತೀಯ ಜನತಾ ಪಕ್ಷದ (BJP) ಮಾಜಿ ರಾಜ್ಯ ಅಧ್ಯಕ್ಷ ಅಣ್ಣಾಮಲೈ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡಿ ಹೊಸ ರಾಜಕೀಯ ಆಂದೋಲನ ಆರಂಭಿಸಿದ್ದರು. ವಿಡಿಯೋ ಮೂಲಕ ಅಣ್ಣಾಮಲೈ ಅಭಿಮಾನಿಗಳಿಗೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳು ಮತ್ತು ನಂತರದ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಅಲ್ಲದೆ We The Leaders ಆಂದೋಲನ ಕೈಗೊಳ್ಳಲಿದ್ದು ಆಂದೋಲನಕ್ಕೆ ಸೇರುವಂತೆ ಜನರನ್ನು ಮನವಿ ಮಾಡಿಕೊಂಡಿದ್ದರು. ಈ ಆಂದೋಲನಕ್ಕೆ ಇದೀಗ ಅಭೂತಪೂರ್ವ ಸ್ಪಂದನೆ ಸಿಕ್ಕಿದ್ದು ಕೆಲ ಗಂಟೆಗಳಲ್ಲೇ 10 ಲಕ್ಷಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.
ಹೊಸ ಹಾದಿ ಮತ್ತು ಹೊಸ ರಾಜಕೀಯ ಆಂದೋಲನವನ್ನು ಪ್ರಾರಂಭಿಸುವುದು ನನ್ನ ದೊಡ್ಡ ಆಸೆ. ಬಿಜೆಪಿ ನನಗೆ ಆರು ವರ್ಷಗಳ ಕಾಲ ತಮಿಳುನಾಡಿನ ಜನರಿಗಾಗಿ ಕೆಲಸ ಮಾಡಲು ಅವಕಾಶ ನೀಡಿತ್ತು. ಇಂದು, ನಾನು ಬಿಜೆಪಿಯಿಂದ ಬೇರ್ಪಟ್ಟಿದ್ದೇನೆ ಎಂದು ಹೇಳಿದ್ದರು. ವಿಡಿಯೋದಲ್ಲಿ ಸಾರ್ವಜನಿಕ ಜೀವನ ಮತ್ತು ಚುನಾವಣಾ ರಾಜಕೀಯಕ್ಕೆ ಆಸಕ್ತಿ ಹೊಂದಿರುವ ನಾಯಕರಿಗೆ ತರಬೇತಿ ನೀಡಲು ಎಪಿಜೆ ಅಬ್ದುಲ್ ಕಲಾಂ ನೈತಿಕ ಮತ್ತು ರಾಜಕೀಯ ಕೇಂದ್ರವನ್ನು ಸ್ಥಾಪಿಸಿರುವುದಾಗಿ ಘೋಷಿಸಿದ್ದರು. ಮುಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಗಳನ್ನು ಅವರು ಬಹಿರಂಗಪಡಿಸದಿದ್ದರೂ, ಈ ಕೇಂದ್ರದಲ್ಲಿ ತರಬೇತಿ ಪಡೆದವರನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಣಕ್ಕಿಳಿಸಲಾಗುವುದು ಎಂದು ಹೇಳಿದರು.
ಅಣ್ಣಾಮಲೈ ಚಳವಳಿ ಸಿದ್ಧಾಂತ
ತಮಿಳು ಗುರುತಿನೊಂದಿಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಹೊಂದಿರುವ ಚಳವಳಿಯೆಂದು ತಮ್ಮ ಚಳವಳಿಯನ್ನು ಬಿಂಬಿಸಿದ ಅಣ್ಣಾಮಲೈ, “ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾದಾಗ, ತಮಿಳುನಾಡು ಅದರ ಮುಂಚೂಣಿಯಲ್ಲಿರಬೇಕು. ಅದಕ್ಕಾಗಿ ರಾಜಕೀಯದ ಭಾಷೆ ಮತ್ತು ವ್ಯಾಕರಣವನ್ನೇ ಬದಲಾಯಿಸಬೇಕಾಗಿದೆ ಎಂದು ಹೇಳಿದರು.
ಚಳವಳಿಯ ಸಿದ್ಧಾಂತವನ್ನು ವಿವರಿಸಿದ ಅವರು, ತಮಿಳುನಾಡಿನ ರಾಜಕೀಯವು ತಮಿಳು ಮತ್ತು ಭಾರತೀಯ ಗುರುತಿನ ನಡುವೆ ಅನಗತ್ಯ ಸಂಘರ್ಷವನ್ನು ಸೃಷ್ಟಿಸಿದೆ. ಈ ಎರಡೂ ಗುರುತುಗಳು ಸಹಬಾಳ್ವೆ ನಡೆಸಬಹುದು ಎಂದು ಹೇಳಿದ ಅವರು, ನಾನು ಭಾರತೀಯ ಗುರುತನ್ನು ಹೊಂದಿರುವ ಹೆಮ್ಮೆಯ ತಮಿಳಿಗ ಎಂದು ಹೇಳಿದರು. ವ್ಯಕ್ತಿಪೂಜೆ ಮತ್ತು ವಂಶಪಾರಂಪರ್ಯ ರಾಜಕೀಯವನ್ನು ಟೀಕಿಸಿದ ಅಣ್ಣಾಮಲೈ, ನಾಯಕತ್ವದ ಹುದ್ದೆಗಳು ಶಾಶ್ವತವಾಗಬಾರದು. ಚುನಾಯಿತ ಪ್ರತಿನಿಧಿಗಳಿಗೆ ಅವಧಿ ಮಿತಿಯನ್ನು ಜಾರಿಗೆ ತರಬೇಕೆಂದು ಅವರು ಪ್ರತಿಪಾದಿಸಿದರು.
Advertisement