NEET ಹೋರಾಟಕ್ಕೆ ದೆಹಲಿ ಪೊಲೀಸರ ಗ್ರೀನ್ ಸಿಗ್ನಲ್; ಜಂತರ್ ಮಂತರ್‌ಗೆ ಬನ್ನಿ, ಬೆಂಬಲಿಗರಿಗೆ 'Cockroach Janta Party' ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ..!

ಜಂತರ್ ಮಂತರ್‌ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ಕಾತರನಾಗಿದ್ದೇನೆ. ಪುಸ್ತಕ ಮತ್ತು ರಾಷ್ಟ್ರಧ್ವಜವನ್ನು ಜೊತೆಯಲ್ಲಿ ತರಲು ಮರೆಯಬೇಡಿ. ಪೊಲೀಸರಿಗೆ ಹೂವು ನೀಡಿ ಗೌರವ ಸಲ್ಲಿಸಿ. ನಮ್ಮ ಹೋರಾಟ ಶಾಂತಿ, ಪ್ರೀತಿ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯಬೇಕು.
Abhijeet Dipke
ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ
Updated on

ನವದೆಹಲಿ: ದೇಶಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಯುವಕರ ಆಕ್ರೋಶ ಮತ್ತೊಮ್ಮೆ ತೀವ್ರಗೊಂಡಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯಲಿರುವ ಪ್ರತಿಭಟನೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ವೇದಿಕೆ ಸಿದ್ಧವಾಗಿದೆ.

ಕಾಕ್‌ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ, ದೆಹಲಿ ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಿದ್ದಾರೆ ಎಂದು ಘೋಷಿಸಿ, ದೇಶದ ವಿವಿಧ ಭಾಗಗಳಿಂದ ಆಗಮಿಸುತ್ತಿರುವ ಬೆಂಬಲಿಗರು ನೇರವಾಗಿ ಜಂತರ್ ಮಂತರ್‌ಗೆ ಬರುವಂತೆ ಮನವಿ ಮಾಡಿದ್ದಾರೆ.

ಶನಿವಾರ ಬೆಳಗ್ಗೆ ಅಮೆರಿಕದಿಂದ ದೆಹಲಿಗೆ ಆಗಮಿಸಿದ ದೀಪ್ಕೆ, ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬೆಂಬಲಿಗರಿಗೆ ಸಂದೇಶ ರವಾನಿಸಿದ್ದಾರೆ.

“ಜಂತರ್ ಮಂತರ್‌ನಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗಲು ಕಾತರನಾಗಿದ್ದೇನೆ. ಪುಸ್ತಕ ಮತ್ತು ರಾಷ್ಟ್ರಧ್ವಜವನ್ನು ಜೊತೆಯಲ್ಲಿ ತರಲು ಮರೆಯಬೇಡಿ. ಪೊಲೀಸರಿಗೆ ಹೂವು ನೀಡಿ ಗೌರವ ಸಲ್ಲಿಸಿ. ನಮ್ಮ ಹೋರಾಟ ಶಾಂತಿ, ಪ್ರೀತಿ ಮತ್ತು ಸಂವಿಧಾನದ ಮೌಲ್ಯಗಳ ಆಧಾರದ ಮೇಲೆ ನಡೆಯಬೇಕು” ಎಂದು ಕರೆ ನೀಡಿದ್ದಾರೆ.

ಈ ಮೊದಲು ಪ್ರತಿಭಟನೆಗೆ ಅನುಮತಿ ಪಡೆಯುವ ಉದ್ದೇಶದಿಂದ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಎದುರು ಸೇರಲು ಬೆಂಬಲಿಗರಿಗೆ ಸೂಚಿಸಲಾಗಿತ್ತು. ಆದರೆ, ಇದೀಗ ಜಂತರ್ ಮಂತರ್‌ನಲ್ಲಿ ನೇರವಾಗಿ ಪ್ರತಿಭಟನೆ ನಡೆಸಲು ಅನುಮತಿ ದೊರೆತಿರುವುದರಿಂದ ಯೋಜನೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಿಜೆಪಿ ತಿಳಿಸಿದೆ.

"ಕಾಕ್‌ರೋಚಸ್ ಆ ರಹೇ ಹೈ, ಧರ್ಮೇಂದ್ರ ಪ್ರಧಾನ್ ಜಾ ರಹೇ ಹೈ (ಜಿರಳೆಗಳು ಬರುತ್ತಿವೆ, ಧರ್ಮೇಂದ್ರ ಪ್ರಧಾನ್ ಹೊರಡುತ್ತಿದ್ದಾರೆ)" ಎಂಬ ಘೋಷಣೆಯೊಂದಿಗೆ ಸಂಘಟನೆ ತನ್ನ ಪ್ರತಿಭಟನಾ ಅಭಿಯಾನವನ್ನು ಇನ್ನಷ್ಟು ತೀವ್ರಗೊಳಿಸಿದೆ.

Abhijeet Dipke
'ಜಿರಳೆ, ಹೆಗ್ಗಣ, ಸೊಳ್ಳೆಗಳಿಗೆ ಹೆದರುವ ಕಾಲ ಇದಲ್ಲ': Cockroach Janta Party ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ

NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬೆಳಕಿಗೆ ಬಂದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿಕೊಂಡಿದ್ದ CJP ಚಳವಳಿ, ಕಳೆದ ಕೆಲವು ತಿಂಗಳಲ್ಲಿ ಯುವಜನತೆಯ ಅಸಮಾಧಾನದ ಪ್ರತೀಕವಾಗಿ ಬೆಳೆಯತೊಡಗಿದೆ.

ಮೊದಲಿಗೆ ವ್ಯಂಗ್ಯಾತ್ಮಕ ಆನ್‌ಲೈನ್ ವೇದಿಕೆಯಾಗಿದ್ದ ಈ ಗುಂಪು, ಈಗ ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒತ್ತಾಯಿಸುವ ಸಂಘಟಿತ ಜನಾಂದೋಲನದ ರೂಪ ಪಡೆದುಕೊಳ್ಳುತ್ತಿದೆ.

ಸಂಘಟನೆ ಕೇವಲ ನೀಟ್ ಅಕ್ರಮಗಳ ಬಗ್ಗೆ ಮಾತ್ರವಲ್ಲದೆ, CBSE, CUET ಹಾಗೂ SSC ಪರೀಕ್ಷೆಗಳಲ್ಲಿಯೂ ನಡೆದಿವೆ ಎನ್ನಲಾದ ಅಕ್ರಮಗಳ ವಿರುದ್ಧ ಧ್ವನಿ ಎತ್ತುತ್ತಿದೆ.

ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆ ಕುಸಿದಿದ್ದು, ಇದಕ್ಕೆ ರಾಜಕೀಯ ಮತ್ತು ಆಡಳಿತಾತ್ಮಕ ಹೊಣೆಗಾರಿಕೆ ನಿಗದಿಯಾಗಬೇಕು ಎಂದು CJP ಆಗ್ರಹಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.

ಈ ಪ್ರತಿಭಟನೆಗೆ ಸಾಮಾಜಿಕ ಕಾರ್ಯಕರ್ತರು ಮತ್ತು ಸಾರ್ವಜನಿಕ ಜೀವನದ ಹಲವು ಗಣ್ಯರು ಬೆಂಬಲ ಸೂಚಿಸಿದ್ದಾರೆ. ಹೋರಾಟಗಾರ ಸೋನಂ ವಾಂಗ್ಚುಕ್ ಕೂಡ ಚಳವಳಿಗೆ ಬೆಂಬಲ ವ್ಯಕ್ತಪಡಿಸಿದ್ದು, ಅಭಿಜೀತ್ ದೀಪ್ಕೆ ಅವರನ್ನು ಬಂಧಿಸಿದರೆ ಆರು ವಾರಗಳ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಘೋಷಿಸಿದ್ದಾರೆ. ಇದರಿಂದ ಪ್ರತಿಭಟನೆಗೆ ರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗತೊಡಗಿದೆ.

Abhijeet Dipke
Cockroach Janata Party ಖಾತೆ ನಿರ್ಬಂಧಿಸುವುದು 'ವಿನಾಶಕಾರಿ ಮತ್ತು ತೀವ್ರ ಅವಿವೇಕತನ': ಈ ಅವಕಾಶ ಬಳಸಿಕೊಳ್ಳಿ; ಪ್ರತಿಪಕ್ಷಗಳಿಗೆ ಶಶಿ ತರೂರ್ ಸಲಹೆ

ಇತ್ತ ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ರೈಲು ನಿಲ್ದಾಣಗಳು, ಬಸ್ ನಿಲ್ದಾಣಗಳು ಹಾಗೂ ದೆಹಲಿ ಗಡಿಭಾಗಗಳಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ವಾಹನಗಳ ತಪಾಸಣೆ, ನಿಗಾ ವ್ಯವಸ್ಥೆ ಹಾಗೂ ಗುಪ್ತಚರ ಮೇಲ್ವಿಚಾರಣೆಯನ್ನು ಬಲಪಡಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರತಿಭಟನೆಗೆ ದೊಡ್ಡ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಮುಖ ವೃತ್ತಗಳು, ಮಾರುಕಟ್ಟೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ನಡುವೆ ಪ್ರತಿಭಟನೆಯಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಬಹುದು ಎಂದು ಉಲ್ಲೇಖಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ.

Security personnel
ದೆಹಲಿಯಲ್ಲಿ ಬಿಗಿ ಭದ್ರತೆ

ಇದರಿಂದ ಪ್ರತಿಭಟನೆಗೆ ಸಂಬಂಧಿಸಿದ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿದ್ದು, ದೇಶದಾದ್ಯಂತ ವಿದ್ಯಾರ್ಥಿಗಳು ಮತ್ತು ಯುವಜನತೆ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಈ ಹೋರಾಟದತ್ತ ಗಮನ ಹರಿಸಿದ್ದಾರೆ.

ಶಿಕ್ಷಣ ವ್ಯವಸ್ಥೆಯ ಪಾರದರ್ಶಕತೆ, ಪರೀಕ್ಷಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಗಳನ್ನು ಕೇಂದ್ರಬಿಂದುವಾಗಿಸಿಕೊಂಡಿರುವ ಈ ಪ್ರತಿಭಟನೆ, ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com