

ತಿರುವನಂತಪುರಂ: ಕೇರಳಂನ ಕೊಟ್ಟಿಯೂರು ದೇವಾಲಯಕ್ಕೆ (Kottiyoor Temple) ಹೋಗಿದ್ದ ಕರ್ನಾಟಕದ ಭಕ್ತರ ಮೇಲಿನ ದೌರ್ಜನ್ಯ ಪ್ರಕರಣ ವೈರಲ್ ಆಗುತ್ತಿರುವ ಬೆನ್ನಲ್ಲೇ ಈ ಕುರಿತು ಮಾತನಾಡಿರುವ ಕರ್ನಾಟಕ ಮೂಲದ ಕೇರಳ ಐಪಿಎಸ್ ಅಧಿಕಾರಿ DIG ಯತೀಶ್ ಚಂದ್ರ ದೇಗುಲಕ್ಕೆ ಬರುವಂತೆ ಕನ್ನಡಿಗರನ್ನು ಕನ್ನಡದಲ್ಲೇ ಸ್ವಾಗತಿಸಿದ್ದಾರೆ.
ಹೌದು.. ಕೇರಳಂನ ಕೊಟ್ಟಿಯೂರು ದೇವಾಲಯಕ್ಕೆ ಹೋಗಿದ್ದ ಕರ್ನಾಟಕದ ಭಕ್ತರ ಮೇಲೆ ದೌರ್ಜನ್ಯ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ದೇಗುಲದ ಆಡಳಿತ ಮಂಡಳಿ ಮತ್ತು ಕೇರಳ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಯಾರೂ ಈ ದೇವಾಲಯಕ್ಕೆ ಭೇಟಿ ನೀಡಬೇಡಿ ಎಂದು ನೊಂದ ಕನ್ನಡಿಗರು ಆಕ್ರೋಶ ಹೊರಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆ, ನಿರ್ವಹಣೆಯ ಕುರಿತು ಆಕ್ಷೇಪಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಕೇರಳ ಡಿಐಜಿ ಯತೀಶ್ ಚಂದ್ರ ಅವರು ಕನ್ನಡಿಗರು ಕೊಟ್ಟಿಯೂರಿಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.
ಇಂದು ದೇಗುಲಕ್ಕೆ ಭೇಟಿ ಕೊಟ್ಟಿದ್ದ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಡಿಐಜಿ ಯತೀಶ್ ಚಂದ್ರ ಅವರು, ಅಲ್ಲಿನ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದಲ್ಲೇ ಮಾತನಾಡಿ ಕರ್ನಾಟಕದ ಭಕ್ತರನ್ನು ಸ್ವಾಗತಿಸಿದ್ದಾರೆ.
ಮಾತೃಭಾಷೆ ಮರೆಯದ ಡಿಐಜಿ ಯತೀಶ್ ಚಂದ್ರ ಹೇಳಿದ್ದೇನು?
ಕೇರಳಂ ರೇಂಜ್ ಡಿಐಜಿ ಯತೀಶ್ ಚಂದ್ರ, ಕರ್ನಾಟಕದ ಭಕ್ತರಿಗಾಗಿ ಕನ್ನಡದಲ್ಲಿಯೇ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 'ಕೊಟ್ಟಿಯೂರು ದೇವಸ್ಥಾನದವರು ಹಾಗೂ ಪಂಚಾಯತ್ನವರು ವೈಶಾಖ ಮಹೋತ್ಸವಕ್ಕೆ ಬಹಳ ಚೆನ್ನಾಗಿ ಸಿದ್ಧತೆ ಮಾಡಿದ್ದಾರೆ.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮೂಲ ಸೌಕರ್ಯ ಕಲ್ಪಿಸಲಾಗಿದೆ. ವಾಹನ ನಿಲುಗಡೆ ವ್ಯವಸ್ಥೆಯನ್ನೂ ಮಾಡಲಾಗಿದೆ. ಕರ್ನಾಟಕದಿಂದ ಬಹಳಷ್ಟು ಭಕ್ತಾದಿಗಳು ಬರುತ್ತೀರಿ. ನಿಮಗಾಗಿ ದೇವಸ್ಥಾನದ ಆವರಣದಲ್ಲಿ ಕನ್ನಡದಲ್ಲೇ ನಾಮಫಲಕಗಳು (ಬೋರ್ಡ್‌ಗಳು) ಮತ್ತು ಕನ್ನಡದಲ್ಲೇ ಧ್ವನಿವರ್ಧಕದ ಮೂಲಕ ಪ್ರಕಟಣೆ ಹೊರಡಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಅಂತೆಯೇ ಪವಿತ್ರವಾದ ಈ ಕಾಡಿನ ಸನ್ನಿಧಿಗೆ ಬರುವಾಗ ಪರಿಸರವನ್ನು ಸ್ವಚ್ಛವಾಗಿಡುವಂತೆ ಮತ್ತು ಪ್ಲಾಸ್ಟಿಕ್ ಹಾಗೂ ಬಟ್ಟೆಗಳನ್ನು ಎಲ್ಲೆಂದರಲ್ಲಿ ಎಸೆಯದೆ ಸಹಕರಿಸುವಂತೆ ಕನ್ನಡಿಗರಲ್ಲಿ ವಿನಂತಿಸಿಕೊಂಡಿದ್ದಾರೆ. ದರ್ಶನದ ಸರತಿಸಾಲು ವ್ಯವಸ್ಥೆ ಕುರಿತು ಮಾತನಾಡಿದ ಯತೀಶ್ ಚಂದ್ರ ಅವರು, 'ಕ್ಯೂನಲ್ಲಿ ಆರಾಮಾಗಿ ಬಂದು ದೇವರ ದರ್ಶನ ಮಾಡಿ. ನಾವು ಪೊಲೀಸರು ಭದ್ರತೆಗೆ ಎಲ್ಲಾ ತಯಾರಿ ಮಾಡಿದ್ದೇವೆ. ತಾವೆಲ್ಲರೂ ಇಲ್ಲಿಗೆ ಬಂದು ದರ್ಶನ ಮಾಡಿ, 26 ದಿನಗಳ ಈ ಮಹೋತ್ಸವವನ್ನು ಯಶಸ್ವಿಯಾಗಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ
ಅಂದಹಾಗೆ ಐಪಿಎಸ್ ಯತೀಶ್ ಚಂದ್ರ ಅವರು, ಕರ್ನಾಟಕದವರು. ದಾವಣಗೆರೆ ಮೂಲದವರಾದ ಇವರು ಇಂಜಿನಿಯರಿಂಗ್ ಪದವಿ ಮುಗಿಸಿ ಉನ್ನತ ಹುದ್ದೆಯಲ್ಲಿದ್ದರೂ ಸಮಾಜ ಸೇವೆ ಮಾಡುವ ಹಂಬಲದಿಂದ ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ (IPS) ಅಧಿಕಾರಿಯಾಗಿದ್ದಾರೆ.
ಯತೀಶ್ ಚಂದ್ರ ಅವರು ಪ್ರಸ್ತುತ ಕಣ್ಣೂರು ರೇಂಜ್‌ನ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು 2011ರ ಕೇರಳ ಕೇಡರ್‌ನ IPS ಅಧಿಕಾರಿಯಾಗಿದ್ದಾರೆ.
ಅವರು ಹಿಂದೆ ಬೆಂಗಳೂರು ನಗರ ಸಂಚಾರ ಪೊಲೀಸ್ ವಿಭಾಗದಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದರು. ಈ ವೇಳೆ ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿ ಮತ್ತು ನವೀನ ಪೊಲೀಸ್ ಕಾರ್ಯಪದ್ಧತಿಗಳಿಗಾಗಿ ಹೆಸರುವಾಸಿಯಾಗಿದ್ದರು. ನಂತರ ಕೇರಳದಲ್ಲಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿ, 2024ರ ಕೊನೆಯಲ್ಲಿ ಕಣ್ಣೂರು ರೇಂಜ್ DIG ಆಗಿ ನೇಮಕಗೊಂಡರು.
Advertisement